ಮೂಡಲಗಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬೆಳಗಾವಿ ಜಿಲ್ಲೆಯ 5 ಲಕ್ಷ 3 ಸಾವಿರಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 100.64 ಕೋಟಿ ರೂ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.
ಬುಧವಾರ ನ-19 ರಂದು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 21ನೇ ಕಂತಿನ ಭಾಗವಾಗಿ ದೇಶದ 9 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ರೂ. 18 ಸಾವಿರ ಕೋಟಿ ರೂಪಾಯಿ ಹಾಗೂ ರಾಜ್ಯದ 41.45 ಲಕ್ಷಕ್ಕೂ ಹೆಚ್ಚು ರೈತರ ಖಾತೆಗೆ 829.02 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಇಲ್ಲಿಯವರೆಗೆ, ರಾಜ್ಯದ ರೈತರ ಖಾತೆಗಳಿಗೆ ರೂ. 18,589 ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ವರ್ಗಾಯಿಸಲಾಗಿದೆ ಎಂದರು.
ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಕೃಷಿ ಬಜೆಟ್‌ನಲ್ಲಿ 22,000 ಕೋಟಿಯಿಂದ 1.27 ಲಕ್ಷ ಕೋಟಿಗೆ ಹೆಚ್ಚಳ ಮಾಡಿದೆ, ರೈತರಿಗೆ ಕೈಗೆಟುಕುವ ದರದಲ್ಲಿ ಗೊಬ್ಬರ ಸಬ್ಸಿಡಿಗಾಗಿ ಸುಮಾರು 14 ಲಕ್ಷ ಕೋಟಿ ರೂ. ನೀಡಲಾಗಿದೆ. ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳಲ್ಲಿ 25% ಮಹಿಳಾ ರೈತರಿದ್ದಾರೆ, ರಸಗೊಬ್ಬರಗಳ ಪೂರೈಕೆಯ ಖಾತ್ರಿ. ದ್ವಿದಳ ಧಾನ್ಯಗಳನ್ನು ಉತ್ತೇಜಿಸಲು 11,440 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯನ್ನು 24,000 ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರಲಾಗಿದೆ. 25 ಕೋಟಿಗೂ ಹೆಚ್ಚು ಮಣ್ಣಿನ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಗಿದೆ. ಸೂಕ್ಷ್ಮ ನೀರಾವರಿ 100 ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸಲಾಗಿದೆ. ಬೆಳೆ ವಿಮಾ ಬೆಂಬಲವಾಗಿ 22 ಲಕ್ಷ ಕೋಟಿ ಪರಿಹಾರವನ್ನು ನೀಡಲಾಗಿದೆ. ಹೀಗೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸಂಸದ ಈರಣ್ಣ ಕಡಾಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

