ಮೂಡಲಗಿ: ಕರ್ನಾಟಕದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ಹಾನಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‍ಡಿಆರ್‍ಎಫ್) ಪ್ರಸಕ್ತ 2021-22 ಸಾಲಿಗೆ ರೂ 1,623.30 ಕೋಟಿ ರೂ ಬಿಡುಗಡೆ ಮಾಡಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು.
ರಾಜ್ಯಸಭಾ ಸಂಸತ್ತಿನ ಬಜೆಟ್ ಅಧಿವೇಶನಲ್ಲಿ ಪ್ರವಾಹದ ನಂತರ ಕರ್ನಾಟಕಕ್ಕೆ ಪರಿಹಾರ ಪ್ಯಾಕೇಜ್/ಹಣಕಾಸು ಘೋಷಣೆಯ ನೆರವು ನೀಡಿದ ಕುರಿತು ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು 2021-22 ಸಾಲಿಗೆ ಕೇಂದ್ರ ಸರ್ಕಾರವು ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‍ಡಿಆರ್‍ಎಫ್) ಅಡಿಯಲ್ಲಿ ರೂ 843.20 ಕೋಟಿಗಳನ್ನು ಮಂಜೂರು ಮಾಡಿದೆ, ಇದರಲ್ಲಿ ರೂ 632.80 ಕೋಟಿ ಕೇಂದ್ರ ಸರ್ಕಾರದ ಪಾಲು ಮತ್ತು ರೂ 210.40 ಕೋಟಿ ರೂ. ರಾಜ್ಯದ ಪಾಲು ಬಿಡುಗಡೆಯಾಗಿದೆ ಹಾಗೂ ಜುಲೈ, 2021 ರಲ್ಲಿನ ಪ್ರವಾಹಕ್ಕೆ ರೂ. 501.65 ಕೋಟಿ, ಅಕ್ಟೋಬರ್-ನವೆಂಬರ್ ಪ್ರವಾಹಕ್ಕೆ ರೂ. 492.39 ಕೋಟಿ, 2000 ರಲ್ಲಿನ ಪ್ರವಾಹಕ್ಕೆ 629.03 ಕೋಟಿ ರೂ ರಾಜ್ಯಕ್ಕೆ ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ಹಾನಿಗೆ ಕೇಂದ್ರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಬಿಡುಗಡೆ ಮಾಡಿದೆ ಎಂದರು.
ಸಂತ್ರಸ್ತ ಜನರಿಗೆ ಪರಿಹಾರ ವಿತರಣೆ ಸೇರಿದಂತೆ ವಿಪತ್ತು ನಿರ್ವಹಣೆಯ ಪ್ರಾಥಮಿಕ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ. ಕೇಂದ್ರದ ಮಾನದಂಡಗಳಿಗೆ ಅನುಗುಣವಾಗಿ ಅವರು ಎಸ್‍ಡಿಆರ್‍ಎಫ್‍ನಿಂದ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಮಾನ್ಯ ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

