ಹೊಸ ವರ್ಷ ಹತ್ತಿರ ಬರುತ್ತಿದಂತೆಯೇ ಅಕ್ರಮವಾಗಿ ಮಾದಕ ವಸ್ತು (Drugs) ಸಾಗಿಸುವುದು, ಅಂತರರಾಜ್ಯ ಡ್ರಗ್ಸ್ ಸಪ್ಲಾಯ್ ಮಾಡುವವರು ಚಿಗುರಿಕೊಳ್ಳುತ್ತಾರೆ. ಆದರೆ ಎಷ್ಟೇ ಚಾಣಾಕ್ಷ ಆಗಿ ಸರಬರಾಜು ಮಾಡಲು ಪ್ರಯತ್ನ ಮಾಡಿದರೂ, ಎಷ್ಟೇ ರಾಜ್ಯ ಗಡಿ ಪಾರು ಮಾಡಿದರೂ.. ಬೀದರ ಜಿಲ್ಲೆಯ ಪೊಲೀಸ್ ಕಣ್ಣು ತಪ್ಪಿಸಿ ಹೋಗಲು ಸಾಧ್ಯವಿಲ್ಲ ಎಂಬುದು ಹೇಳಬಹುದು.
ಮಂಗಳವಾರ ಸಾಯಂಕಾಲ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕು ಪೊಲೀಸರು ರಾಷ್ಟ್ರೀಯ ಹೆದ್ದಾರಿ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು ಹೊಸ ವರ್ಷದ ಹಿನ್ನೆಲೆಯಲ್ಲಿ ಬೀದರ ಪೊಲೀಸ್ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಅನುಮಾನಾಸ್ಪದ ಗಾಡಿ ತಪಾಸಣೆ ಮಾಡಿ ಹಿಡಿಯುವ ಕೆಲಸ ಮಾಡುತ್ತಿದ್ದರು. ಒಂದು ಕಂಟೇನರ್ ಲಾರಿ ಪೊಲೀಸರು ತಡೆಯುತ್ತಲೇ ಅದರಲ್ಲಿ ಅಂತಾರಾಜ್ಯಕ್ಕೆ (Interstate) ಅಕ್ರಮವಾಗಿ ಮಾದಕ ವಸ್ತು (Drugs) ಸಾಗಿಸುತಿದ್ದುದು ಕಂಡುಬಂದಿದೆ.
ವಾಹನದ ಮೇಲೆ ದಾಳಿ ನಡೆಸಿದ ಮಂಠಾಳ ಠಾಣೆ ಪೊಲೀಸರ ತಂಡ ಓರ್ವ ಆರೋಪಿಯನ್ನು ಬಂಧಿಸಿ, 17.50 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶಪಡಿಕೊಂಡ ಘಟನೆ ತಾಲೂಕಿನ ಮನ್ನಳ್ಳಿ ಗಡಿಯಲ್ಲಿ ಜರುಗಿದೆ.
ರಾಜಸ್ಥಾನದ ಬಾರಮೇರ್ ಜಿಲ್ಲೆಯ ಮೂಲದ ಸಾವಾಯಿ ರಾಮ್ (40) ಬಂಧಿತ ಆರೋಪಿಯಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ 65ರ ಮಾರ್ಗವಾಗಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹುಮನಾಬಾದ್ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ನೇತೃತ್ವದಲ್ಲಿ ಮಂಠಾಳ ಸಿಪಿಐ ಕೃಷ್ಣಕುಮಾರ ಪಾಟೀಲ್ ಹಾಗೂ ಅವರನ್ನೊಳಗೊಂಡ ಪೊಲೀಸರ ತಂಡ, ಮಹಾರಾಷ್ಟ್ರದಿಂದ ತಮಿಳುನಾಡಿನ ಚೆನೈಗೆ ಮಾದಕ ವಸ್ತು ಸಾಗಿಸುತಿದ್ದ ಕಂಟೇನರ್ ಲಾರಿ ಮೇಲೆ ದಾಳಿ ನಡೆಸಿ, 17.50 ಲಕ್ಷ ರೂ. ಮೌಲ್ಯದ 17 ಕೆ.ಜಿ ಓಪಿಯಮ್ ಪೊಪಿಸ್ಟ್ರಾ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ವರದಿ: ನಂದಕುಮಾರ ಕರಂಜೆ, ಬೀದರ