ಮೂಡಲಗಿ: ತಾಲೂಕಿನ ಹುಣಶ್ಯಾಳ ಹತ್ತಿರ ಸತೀಶ ಶುಗರ್ಸ್ ಕಾರ್ಖಾನೆಯು ಪ್ರತಿ ಟನ್ ಕಬ್ಬಿಗೆ ರೂ. 3000 ರೂಪಾಯಿ ದರ ನೀಡುವುದಾಗಿ ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ಅವರು ಶುಕ್ರವಾರದಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸನ್ 2023-24 ರ ಕಬ್ಬು ನುರಿಸುವ ಹಂಗಾಮಿಗಾಗಿ ಕೇಂದ್ರ ಸರಕಾರದಿಂದ ನಮ್ಮ ಕಾರ್ಖಾನೆಗೆ ನಿಗದಿ ಪಡಿಸಿದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ(ಎಮ್.ಆರ್.ಪಿ) ರೂ. 3,635 ಪ್ರತಿ ಟನ್ನಿಗೆ (ಕಬ್ಬಿನ ಬೆಲೆ, ಕಟಾವು ಮತ್ತು ಸಾಗಾಣಿಕೆ ವೆಚ್ಚ ಸೇರಿ) ಇರುತ್ತದೆ. ಅದರಂತೆ, ಪ್ರಸಕ್ತ ವರ್ಷದಲ್ಲಿ ನಿಗದಿತ ವೇಳೆಗೆ ಮಳೆಯಾಗದೇ ಬರಗಾಲದ ಛಾಯೆ ಆವರಿಸಿರುವುದರಿಂದ ರೈತ ಬಾಂಧವರು ಆರ್ಥಿಕ ಸಂಕಷ್ಟದಲ್ಲಿರುವುದನ್ನು ಗಮನದಲ್ಲಿಟ್ಟುಕೊಂಡು, ನಮ್ಮೆಲ್ಲ ರೈತ ಬಾಂಧವರ ಆರ್ಥಿಕತೆಯ ಹಿತದೃಷ್ಟಿಯಿಂದ ಸಂಸ್ಥೆಯ ಆಡಳಿತ ಮಂಡಳಿಯು ಪ್ರಸಕ್ತ 2023-24 ನೇ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ರೂ. 3,000/- (ಮೂರು ಸಾವಿರ ರೂ) ಬಿಲ್ಲನ್ನು ಪಾವತಿಸುವುದಾಗಿ ಘೋಷಿಸಲು ಹರ್ಷಿಸುತ್ತದೆ ಹಾಗೂ ದಿ. 27.10.2023 ರಿಂದ 05.11.2023 ರ ವರೆಗೆ ಪೂರೈಕೆಯಾದ ಕಬ್ಬಿನ ಬಿಲ್ಲನ್ನು ಪೂರೈಕೆದಾರರ ಖಾತೆಗಳಿಗೆ ಈಗಾಗಲೇ ಜಮಾ ಮಾಡಲಾಗಿದೆ. ಆದ್ದರಿಂದ, ಸಮಸ್ತ ರೈತ ಬಾಂಧವರು ನಮ್ಮ ಕಾರ್ಖಾನೆಗೆ ತಾವು ಬೆಳೆದ ಒಳ್ಳೆಯ ಗುಣಮಟ್ಟದ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸಿ ಪ್ರಸ್ತುತ ಹಂಗಾಮನ್ನು ಯಶಸ್ವಿಗೊಳಿಸಬೇಕೆಂದು ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ಅವರು ರೈತ ಬಾಂಧವರಲ್ಲಿ ವಿನಂತಿಸಿಕೊಂಡಿದ್ದಾರೆ.