ಮೂಡಲಗಿ – ಕಬ್ಬಿನ ದರವನ್ನು ಟನ್ ಗೆ ೩೩೦೦ ರೂ. ಕೊಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ ಬೆನ್ನಲ್ಲೇ ಧರಣಿ ಕುಳಿತಿದ್ದ ರೈತರು ಸಂಭ್ರಮಾಚರಣೆ ಮಾಡಿದ್ದು ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ತಾಲೂಕಿನ ಗುರ್ಲಾಪೂರ ಕ್ರಾಸ್ ದಲ್ಲಿ ಕಳೆದ ಒಂಬತ್ತು ದಿನಗಳಿಂದ ಹೋರಾಟ ಮಾಡುತ್ತಿದ್ದ ರೈತರು ಪಟಾಕಿ ಸಿಡಿಸಿ ಸಂತೋಷಪಟ್ಟರು. ಹೋರಾಟಕ್ಕೆ ಬಹುತೇಕ ಸ್ವಾಮೀಜಿಗಳ ಬೆಂಬಲದೊಂದಿಗೆ ಆಶೀರ್ವಾದ ಸಹ ಸಿಕ್ಕಿತ್ತು.
ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿದ ಸಿದ್ಧರಾಮಯ್ಯ ಕಬ್ಬಿನ ಕಟಾವು, ಸಾರಿಗೆ ಹೊರತುಪಡಿಸಿ ರೂ.೩೩೦೦ ಪ್ರತಿ ಟನ್ ಗೆ ಕೊಡಲು ಒಪ್ಪಿದರು. ೧೧.೨೫ ರಿಕವರಿ ಇರುವ ಕಬ್ಬಿಗೆ ಮೊದಲು ರೂ.೩೨೦೦ ನಂತರ ರೂ.೫೦ ಕಾರ್ಖಾನೆಯವರು ಕೊಟ್ಟರೆ ರೂ.೫೦ ಅನ್ನು ಸರ್ಕಾರ ಕೊಡುವುದಾಗಿ ಘೋಷಣೆ ಮಾಡಿದರು.
ಸರ್ಕಾರದ ನಿರ್ಧಾರದ ಬೆನ್ನಲ್ಲೇ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹೋರಾಟಕ್ಕೆ ಬೆಂಬಲಿಸಿದ ಎಲ್ಲರಿಗೂ ಜನಪ್ರತಿನಿಧಿಗಳಿಗೂ,ಕೆಲ ಮುಖಂಡರಿಗೂ,ಆರ್ಥಿಕವಾಗಿ ಶಕ್ತಿ ಕೊಟ್ಟವರಿಗೂ ಮತ್ತು ಮಾಧ್ಯಮ ಮಿತ್ರರಿಗೂ ಧನ್ಯವಾದಗಳನ್ನು ತಿಳಿಸಿದರು.
ವಿಜಯಪುರದ ರೈತರು ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ರೈತ ಮುಖಂಡರು, ಮುಖ್ಯಮಂತ್ರಿಗಳ ಸಭೆಯಲ್ಲಿ ವಿಜಯಪುರದ ಹೆಸರು ಬರದೇ ಇರುವುದು ವಿಷಾದಕರ. ಇವರು ೧೧.೨೫ ರಿಕವರಿ ಫಿಕ್ಸ್ ಮಾಡಿದ್ದಾರೆ ಆದರೆ ವಿಜಯಪುರ ಜಿಲ್ಲೆಯಲ್ಲಿ ರಿಕವರಿ ಚೆನ್ನಾಗಿ ಬರುತ್ತದೆಯಾದರೂ ಕಾರ್ಖಾನೆಯವರು ತಾವೇ ರಿಕವರಿ ತೆಗೆದು ಕಡಿಮೆ ತೋರಿಸಿ ಮೋಸ ಮಾಡುತ್ತಾರೆ ಎಂದರು.

