“ಕೊರೋನಾದ ಭೀಕರ ಅಟ್ಟಹಾಸಕ್ಕೆ ತತ್ತರಿಸಿದ ಬೆಂಗಳೂರು ಹಾಗೂ ರಾಜ್ಯದ ಜನತೆ. ಸ್ಮಶಾನ-ಚಿತಾಗಾರಗಳಲ್ಲಿ ಹೌಸ್ ಫುಲ್ ಬೌಡ್೯ ನೋಡಿ ಕಂಗಾಲಾದ ಬೆಂಗಳೂರು ಜನರು. ತಮ್ಮ ತಮ್ಮ ಸಂಬಂಧಿಗಳನ್ನು ಕಳೆದುಕೊಂಡು ಕಣ್ಣೀರಲ್ಲೇ ನೊಂದು-ಬೆಂದು ಕಂಗಾಲಾದ ರಾಜ್ಯದ ಅದೆಷ್ಟೋ ಸಾವಿರಾರು ಕುಟುಂಬಗಳು.
ಸಾವಿನೂರಾದ ಬೆಂಗಳೂರಿನ ಜೀವನ ನಿಜಕ್ಕೂ ಕಷ್ಟ-ಕಷ್ಟ, ರಾಜಧಾನಿ ಬೆಂಗಳೂರು ಜೀವನಕ್ಕಿಂತ ಹಳ್ಳಿಯ ನೆಮ್ಮದಿಯ ಜೀವನ ಎಷ್ಟೋ ಮೇಲು, ಆದರೇ ರಾಜ್ಯದ ಪ್ರತಿಯೊಬ್ಬರಿಗೂ ಕಾಡುತ್ತಿರುವ ಏಕೈಕ ಪ್ರಶ್ನೆ ಏನೆಂದರೆ, ದೇವರೇ ಮುಂದೆ ಹೇಗಪ್ಪಾ ಬದುಕೋದು?.
ಕಣ್ಣಿಗೆ ಕಾಣದ ವೈರಸ್ ಕೊರೋನಾದ ಭೀಕರ ಅಟ್ಟಹಾಸಕ್ಕೆ ನಮ್ಮ ಕನಾ೯ಟಕ ರಾಜ್ಯ ಮಾತ್ರವಲ್ಲದೇ ಇಡೀ ದೇಶವೇ ತತ್ತರಿಸಿದ ಹೋಗಿದೆ. ಕಳೆದ ವರ್ಷ2020 ರ ಮಾಚ್೯ -ಏಪ್ರಿಲ್ ತಿಂಗಳಿನಲ್ಲಿ ಕಾಣಿಸಿಕೊಂಡ ಈ ಕೊರೋನಾ ವೈರಸ್ ಮೊದಲನೆ ಅಲೆಯ ಹೊಡೆತಕ್ಕೆ ವಯಸ್ಸಾದ ಜನರೇ ಲಕ್ಷಾಂತರ ಸಂಖ್ಯೆಯಲ್ಲಿ ಮರಣ ಹೊಂದಿದರು.
ಆದರೆ ಈ ವರ್ಷ ಪ್ರಾರಂಭವಾದ ಈ ಎರಡನೇ ಅಲೆಗೆ ವಯಸ್ಸಾದವರು ಮಾತ್ರವಲ್ಲದೇ ವಯಸ್ಸು 30 – 35 ಹಾಗೂ 40 ರ ಆಸುಪಾಸಿನ ಯುವಕ-ಯುವತಿಯರೂ ಸಹ ಸಾವನ್ನಪ್ಪುತ್ತಿರುವುದು ತೀವ್ರ ಆತಂಕವನ್ನುಂಟು ಮಾಡಿದೆ.
ಕುಟುಂಬದ ಆಧಾರಸ್ತಂಭಗಳನ್ನು ಕಳೆದುಕೊಂಡ ಪರಿಣಾಮ ಸಾವಿರಾರು-ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗುವಂತೆ ಮಾಡಿದೆ. ಹಳ್ಳಿ ಮತ್ತು ತಂದೆ-ತಾಯಿಯನ್ನು ಈ ಸಂಬಂಧಗಳ ಬಾಂಧವ್ಯವನ್ನೇ ಮರೆತು ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಂಡು ಇದ್ದವರು ಇಂದು ತಮ್ಮ ಜೀವವನ್ನು ಉಳಿಸಿಕೊಳ್ಳಲು ಹಳ್ಳಿಯನ್ನ ಮತ್ತೆ ತಮ್ಮ ತಂದೆ ತಾಯಿಯನ್ನ ಈ ಬಾಂಧವ್ಯದ ಸಂಬಂಧಗಳ ಹುಡುಕಿಕೊಂಡು ಭಯದಿಂದ ರಾಜಧಾನಿ ಬೆಂಗಳೂರನ್ನು ಬಿಟ್ಟು ಗಂಡು-ಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಹಳ್ಳಿಗಳಿಗೆ ಹೋಗಿದ್ದಾರೆ.
ಹಳ್ಳಿಯಲ್ಲಿ ಇರುವ ನೆಮ್ಮದಿ ಇಂದು ನಮ್ಮ ಸಿಟಿಯಲ್ಲಿಲ್ಲ ಅಂತ ಬಹುಶಃ ಈ ಕೊರೋನಾ ತಿಳಿಸಿಕೊಟ್ಟಿದೆ. ಹಳ್ಳಿಯ ಸ್ವಚ್ಚಂದ ಪರಿಸರದ ಉತ್ತಮ ವಾತಾವರಣದಲ್ಲಿ ಹೊಲ,ಮನೆ, ಗದ್ದೆ, ತೋಟಗಳನ್ನು ನೋಡಿಕೊಂಡು ಗಂಜಿ ಕುಡಿದರೂ ಪರವಾಗಿಲ್ಲ ಹೇಗಾದರೂ ಬದುಕಿದರಾಯಿತು ಎಂದು ತೀಮಾ೯ನಿಸಿ ಜನರು ಈಗಾಗಲೇ ತಮ್ಮ,ತಮ್ಮ ಊರು -ಗ್ರಾಮಗಳಿಗೆ ತೆರಳಿದ್ದಾರೆ. ಈ ಕೊರೋನಾದ ಎರಡನೇ ಹೊಡೆತಕ್ಕೆ ರಾಜಧಾನಿ ಬೆಂಗಳೂರು ಸೇರಿದಂತೆ ನಮ್ಮ ರಾಜ್ಯ ಹಾಗೂ ಇಡೀ ದೇಶವೇ ತತ್ತರಿಸಿ ಹೋಗಿದೆ.
ಜನರು ಆಸ್ಪತ್ರೆಗಳಲ್ಲಿ ಆಕ್ಸಿಜನ್-ಬೆಡ್-ವೆಂಟಿಲೇಟರ್ ಸಿಗದೇ ಬೀದಿ-ಬೀದಿಗಳಲ್ಲಿ, ರಸ್ತೆ , ಮನೆಗಳಲ್ಲಿ, ಆಟೋಗಳಲ್ಲಿ, ಆಂಬ್ಯುಲೆನ್ಸ್ ಗಳಲ್ಲಿ ಸಾಯುತ್ತಿದ್ದಾರೆ. ನಮ್ಮ ರಾಜ್ಯದ ಸಂಸದರು ಈ ಕೊರೋನಾ ಬಂದಾಗಿನಿಂದ ಯಾರ ಕೈಗೂ ಸಿಗದೇ, ಕಣ್ಣಿಗೆ ಕಾಣದೆ ಮನೆಯಲ್ಲೇ ಬಚ್ಚಿಟ್ಟುಕೊಂಡಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಮನವಿ-ಒತ್ತಾಯ ಮಾಡಿ ಬೇಡಿಕೆ ಇರುವ ಆಕ್ಸಿಜನ್ ತರಿಸಿಕೊಳ್ಳುವ ಜವಾಬ್ದಾರಿ-ಯೋಗ್ಯತೆ ಇವರಿಗಿಲ್ಲ. ಇತ್ತ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಪ್ರತಿದಿನ ಅಧಿಕಾರಿಗಳೊಂದಿಗೆ ಸಭೆ ನಡೆಸುವುದರಲ್ಲೇ ಬಿಜಿಯಾಗಿದ್ದಾರೆ.
ಇವರು ಇಷ್ಟೆಲ್ಲಾ ಸಭೆ ನಡೆಸಿದರೂ ಸಹ ಬೆಂಗಳೂರು ಸೇರಿದಂತೆ ನಮ್ಮ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿನ ಆಸ್ಪತ್ರೆಗಳಲ್ಲಿ ಸರಿಯಾಗಿ ಆಕ್ಸಿಜನ್-ವೆಂಟಿಲೇಟರ್-ಬೆಡ್ ಸಿಗದೇ ಜನರ ಮಾರಣಹೋಮವೇ ನಡೆದು ಎಲ್ಲಾ ಸ್ಮಶಾನ-ಚಿತಾಗಾರಗಳಲ್ಲಿ ಕುಟುಂಬದ ಸದಸ್ಯರ ನೋವು-ದುಖಃ-ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ತೀವ್ರ ನಿಲ೯ಕ್ಷ್ಯಕ್ಕೆ ಇವರಿಗೆ ಮತ ನೀಡಿದ ತಪ್ಪಿಗೆ ಇಡೀ ರಾಜ್ಯ ಹಾಗೂ ದೇಶದ ಜನರು ತಕ್ಕ ಬೆಲೆಯನ್ನು ತೆರಬೇಕಾದ ಗಂಭೀರ ಪರಿಸ್ಥಿತಿ ಬಂದೊದಗಿದೆ. ಸರಿಯಾಗಿ ಆಕ್ಸಿಜನ್ ದೊರೆಯದೇ, ಬೆಡ್ ಸಿಗದೆ, ವೆಂಟಿಲೇಟರ್ ಸಿಗದೇ ಜನರು ತಮ್ಮ ತಂದೆ-ತಾಯಿ-ಅಕ್ಕ-ಅಣ್ಣ-ತಮ್ಮಂದಿರನ್ನು ಕಳೆದುಕೊಂಡು ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತಿವೆ.
ಕಳೆದ ವರ್ಷ 2020 ರಲ್ಲಿ ಬೆಂಗಳೂರಿನ ನೆಲಮಂಗಲ ಬಳಿ ಇರುವ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಬಳಿ ಸ್ಥಾಪನೆಗೊಂಡಿದ್ದ ಸುಮಾರು10000 ಬೆಡ್ ಗಳಿದ್ದ ಕೋವಿಡ್ ಕೇರ್ ಸೆಂಟರ್ ಈ ವಷ೯ ಕಣ್ಣಿಗೆ ಕಾಣದೇ ಮಾಯವಾಗಿದೆ.
ಸಾವಿರಾರು ಜನ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿ ಜೀವ ಉಳಿಸಬಹುದಾದಂತಹ ಈ 10000 ಬೆಡ್ ನ ಕೋವಿಡ್ ಕೇರ್ ಸೆಂಟರ್ ಅನ್ನು ಪುನಃ ಸ್ಥಾಪನೆ ಮಾಡದೇ ರಾಜ್ಯ ಸರಕಾರ ನುಂಗಿ ನೀರು ಕುಡಿದಿರುವುದರ ಪರಿಣಾಮ ಬೆಂಗಳೂರಿನಲ್ಲಿ ಸಾವಿರಾರು ಕೊರೋನಾ ಸೋಂಕಿತ ಜನರು ಬೆಡ್ ಗಳು ಸಿಗದೇ ಬೀದಿ-ಬೀದಿಗಳಲ್ಲಿ, ರಸ್ತೆ, ಮನೆಗಳಲ್ಲಿ, ಆಸ್ಪತ್ರೆಗಳ ಮುಂದೆ ಹೆಣವಾದರು.ರಾಜ್ಯ ಸರ್ಕಾರ ಈ ಮೇಲ್ಕಂಡ 10000 ಬೆಡ್ ಗಳನ್ನು ಒಳಗೊಂಡ ಕೋವಿಡ್ ಕೇರ್ ಸೆಂಟರ್ ಅನ್ನು ಆರಂಭಿಸಿ ಸಮಪ೯ಕ ರೀತಿಯಲ್ಲಿ ಆಕ್ಸಿಜನ್-ವೆಂಟಿಲೇಟರ್ ವ್ಯವಸ್ಥೆಯನ್ನು ಕಲ್ಪಿಸಿದ್ದರೆ ಬೆಂಗಳೂರಿನಲ್ಲಿ ಸಾವಿರಾರು ಜನರ ಮಾರಣ ಹೋಮ ನಡೆಯುತ್ತಿರಲಿಲ್ಲ.
ಈ 10000 ಬೆಡ್ ನ ಕೋವಿಡ್ ಕೇರ್ ಸೆಂಟರ್ ನ ಅವಶ್ಯಕತೆ ಮತ್ತು ಆಸಕ್ತಿ ನಮ್ಮ ರಾಜ್ಯ ಸರ್ಕಾರಕ್ಕಿಲ್ಲ. ಏಕೆಂದರೆ ಬಡಜನರು ಈ ಭೂಮಿಯ ಮೇಲೆ ಬದುಕಿ ಬಾಳಬಾರದು. ಅವರೆಲ್ಲರೂ ಸಾಯಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಕೊರೋನಾದಿಂದ ನರಳೀ ನರಳೀ ಸಾವನ್ನಪ್ಪಿದ ಸಾವಿರಾರು ಜನರಿಗೆ ಅಂತ್ಯ ಸಂಸ್ಕಾರಕ್ಕೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಸುಮಾರು 230 ಎಕರೆ ಜಮೀನನ್ನು ಒದಗಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಸಮಸ್ತ ಜನರನ್ನು ಕೊರೋನಾದಿಂದ ಸಾವಿನಿಂದ ಪಾರು ಮಾಡಲು ಆಕ್ಸಿಜನ್-ಬೆಡ್ ಗಳನ್ನು- ವೆಂಟಿಲೇಟರ್ ಗಳನ್ನು ನೀಡಿ ಬದುಕಿಸಲು ರಾಜ್ಯ ಸರ್ಕಾರದ ಬಳಿ ಯಾವುದೇ ಯೋಜನೆಗಳು-ಸರಿಯಾದ ಕ್ರಮಗಳಿಲ್ಲ.
ಆದರೆ ಸತ್ತ ಹೆಣಗಳಿಗೆ ಮಾತ್ರ ಊಣಲು – ಸುಡಲು-ಅಂತ್ಯ ಸಂಸ್ಕಾರ ಮಾಡಲು 230 ಎಕರೆಯ ಭೂಮಿಯ ಬೃಹತ್ ಯೋಜನೆಯನ್ನು ಪತ್ರಿಕಾಗೋಷ್ಠಿ ಕರೆದು ಘೋಷಿಸಿದೆ. ಆಹಾ ಎಂತಹ ರಾಜ್ಯ ಸರ್ಕಾರ, ಇವರಿಗೆ ಮತ ನೀಡಿ ಗೆಲ್ಲಿಸಿದ ಎಂತಹ ನಮ್ಮ ರಾಜ್ಯದ ಮತದಾರ ಫ್ರಭುಗಳು, ಆ ದೇವರೇ ಕಾಪಾಡಬೇಕು.
ಆದರೆ ನಮ್ಮ ರಾಜ್ಯದ ಜನರನ್ನು ಮೃತ್ಯು ಕೂಪದಿಂದ ಕಾಪಾಡಲು ಕನಾ೯ಟಕ ಹೈಕೋರ್ಟ್ ಮದ್ಯಪ್ರವೇಶ ಮಾಡಬೇಕಾದಂತಹ ಪರಿಸ್ಥಿತಿ ಬಂದೊದಗಿತು. ನಮ್ಮ ರಾಜ್ಯಕ್ಕೆ ಬೇಕಾದ ಹೆಚ್ಚುವರಿ 1200 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಕೂಡಲೇ ನೀಡುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ.ಆದೇಶ ನೀಡಿತ್ತು. ಆದರೆ ಅಷ್ಟೊಂದು ಪ್ರಮಾಣದಲ್ಲಿ ಆಕ್ಸಿಜನ್ ಅನ್ನು ಕೊಡಲು ಆಗುವುದಿಲ್ಲ ಎಂದ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತು.
ರಾಜ್ಯ ಹೈಕೋರ್ಟ್ ಕನಾ೯ಟಕ ರಾಜ್ಯಕ್ಕೆ ಹೆಚ್ಚುವರಿ ಆಕ್ಸಿಜನ್ ಕೊಡಲು ಕೇಂದ್ರಕ್ಕೆ ಆದೇಶ ಮಾಡಿದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅಜಿ೯ಯನ್ನು ಹಾಕಿತು. ಕನ್ನಡಿಗರು ಸತ್ತರೆ ಸಾಯಲಿ ಎಂಬ ಈ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ನಮ್ಮ ರಾಜ್ಯದ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕನಾ೯ಟಕಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ನೀಡಬೇಕು ಎಂದು ಕನಾ೯ಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು.ಒಟ್ಟಾರೆಯಾಗಿ ನಮ್ಮ ರಾಜ್ಯದ ಜನರ ಜೀವ ರಕ್ಷಣೆಗೆ ಬಂದಿದ್ದು ಮಾತ್ರ ನಮ್ಮ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎಂದರೆ ಬಹುಶಃ ತಪ್ಪಾಗಲಾರದು. ನಮ್ಮ ರಾಜ್ಯ ಸಕಾ೯ರಕ ಹಾಗೂ ಕೇಂದ್ರ ಸರ್ಕಾರ ಮಾಡಬೇಕಾದ ಕೆಲಸವನ್ನು ನಮ್ಮ ರಾಜ್ಯ ಹಾಗೂ ದೇಶದ ನ್ಯಾಯಾಂಗ ಮಾಡಿದೆ.
ಮೋದಿ-ಮೋದಿ ಎಂದು ಘೋಷಣೆ ಕೂಗುತ್ತಾ ತಮ್ಮ ಮತ ಚಲಾಯಿಸಿದ ಜನರು ಇಂದು ತಮ್ಮ ತಂದೆ,ತಾಯಿ,ಅಕ್ಕ, ಅಣ್ಣ, ತಮ್ಮಂದಿರನ್ನು ಬೀದಿ-ಬೀದಿಗಳಲ್ಲಿ, ರಸ್ತೆಯಲ್ಲಿ, ಮನೆಗಳಲ್ಲಿ, ಆಸ್ಪತ್ರೆಗಳ ಮುಂದೆ ಹಾಗೂ ಖಾಸಗಿ-ಸಕಾ೯ರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಇಲ್ಲದೇ, ಬೆಡ್ ಗಳು, ವೆಂಟಿಲೇಟರ್ ಗಳು ಸಿಗದೇ ಕಳೆದುಕೊಂಡು ಅನಾಥರಾಗುತ್ತಿದ್ದಾರೆ. ಸಾಮಾನ್ಯವಾಗಿ ನಾವು ಸಿನಿಮಾ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಬೋಡ್೯ ಅನ್ನು ನೋಡುತ್ತೇವೆ.
ಆದರೆ ಇಂದು ನಾವು ಬೆಂಗಳೂರಿನ ಸ್ಮಶಾನ-ಚಿತಾಗಾರಗಳಲ್ಲಿ ಹೌಸ್ ಫುಲ್ ಬೋರ್ಡ್ ಅನ್ನು ನೋಡುವಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕೆಟ್ಟ ಪರಿಸ್ಥಿತಿಗೆ ಕಾರಣ ನಮ್ಮ ರಾಜ್ಯದ ಮತದಾರರು. ಒಳ್ಳೆಯ ವ್ಯಕ್ತಿಗಳನ್ನು -ಪಕ್ಷವನ್ನು ಗುರುತಿಸಿ ಮತ ನೀಡಿದ್ದರೆ ಇಂದು ನಮ್ಮ ರಾಜ್ಯಕ್ಕೆ ಹಾಗೂ ದೇಶಕ್ಕೆ ಇಂತಹ ಹೀನಾಯ ಪರಿಸ್ಥಿತಿ ಬರುತ್ತಿರಲಿಲ್ಲ.
ಇಷ್ಟಾದರೂ ನಮ್ಮ ಜನರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಫಲಿತಾಂಶವೇ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಕೇಂದ್ರ ಬಿಜೆಪಿ ಸಕಾ೯ರ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿತು.
ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯ ಹಾಗೂ ದೇಶದ ಬಡಜನರು ಜೀವನ ನಿವ೯ಹಣೆ ಮಾಡಲಾಗದೇ ತತ್ತರಿಸಿ ಹೋದರು. ಇದರಿಂದ ಬಡಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಆದಂತಹ ನೆರೆ ಪ್ರವಾಹ ಉಂಟಾಗಿ ಸಾವಿರಾರು-ಲಕ್ಷಾಂತರ ಜನರು ತಮ್ಮ ಮನೆ, ಮಠ ಕಳೆದುಕೊಂಡು ನಿರಾಶ್ರಿತರಾದರು. ಇಂತಹ ಸಂದರ್ಭದಲ್ಲೂ ಸಹ ಕೇಂದ್ರ ಬಿಜೆಪಿ ಸರ್ಕಾರ ನೆರೆ ಪರಿಹಾರವನ್ನು ನೀಡಲಿಲ್ಲ.
ಇಷ್ಟಲ್ಲದೇ ಕೇಂದ್ರ ಸರ್ಕಾರದ ಆಸ್ತಿಯಾದ ರೈಲ್ವೇ, ವಿಮಾನ ನಿಲ್ದಾಣಗಳು, ಸ್ವಾಯತ್ತ ಸಂಸ್ಥೆಗಳು ಹಾಗೂ ಬ್ಯಾಂಕ್ ಗಳನ್ನು ಮಾರಾಟ ಮಾಡಿತು.ಈ ಕುರಿತು ರಾಜ್ಯ ಹಾಗೂ ದೇಶದ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರೋಧವನ್ನು, ಆಕ್ರೋಶವನ್ನು ವ್ಯಕ್ತಪಡಿಸಿದ್ದರು.ಇಷ್ಟೆಲ್ಲಾ ದೇಶದಲ್ಲಿ ಆವಾಂತರವಾದರೂ ಬೆಳಗಾವಿ ಜಿಲ್ಲೆಯ ಜನರು ಇತ್ತೀಚೆಗೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಅದೇ ಬಿಜೆಪಿ ಪಕ್ಷವನ್ನೇ ಗೆಲ್ಲಿಸಿದರು.
ಅದರೆ ಒಂದಂತೂ ಸತ್ಯ. ಎಲ್ಲಿಯವರೆಗೆ ನಮ್ಮ ರಾಜ್ಯದ ಮತದಾರರು ಒಳ್ಳೆಯ ವ್ಯಕ್ತಿ-ಪಕ್ಷವನ್ನು ಗುರುತಿಸಿ ಮತ ನೀಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ರಾಜ್ಯ ಹಾಗೂ ದೇಶ ಉದ್ದಾರವಾಗುವುದಿಲ್ಲ. ಜನರು ಚುನಾವಣೆಯಲ್ಲಿ ತಮ್ಮ ಮತವನ್ನು 500 – 1000 ರೂಪಾಯಿ ಗಳಿಗೆ ಮಾರಿಕೊಳ್ಳುವುದನ್ನು ಬಿಡಬೇಕು. ಇಲ್ಲದಿದ್ದರೆ ಆ ದೇವರೂ ನಿಮ್ಮನ್ನು ಕಾಪಾಡುವುದಿಲ್ಲ ನೆನಪಿರಲಿ….
ಹಿರಿಯೂರು ಸಂಜೀವ್ ಕುಮಾರ್, ವಕೀಲರು, ಬೆಂಗಳೂರು.