ಡಾ. ಶ್ರೀರಾಮ ಇಟ್ಟಣ್ಣವರ ಅಭಿನಂದನ ಗ್ರಂಥ
ಪುಸ್ತಕದ ಹೆಸರು: ಪಾರಿಜಾತ
ಪ್ರಧಾನ ಸಂಪಾದಕರು: ಡಾ. ಎಂ. ಎಸ್. ಮದಭಾವಿ
ಸಂಪಾದಕರು: ಡಾ. ಎಂ. ಎಂ. ಪಡಶೆಟ್ಟಿ, ಡಾ. ಎಸ್. ಕೆ. ಕೊಪ್ಪಾ, ಡಾ.ಚನ್ನಪ್ಪ ಕಟ್ಟಿ, ಶ್ರೀ ಶಿವಾನಂದ ಶೆಲ್ಲಿಕೇರಿ
ಪ್ರಕಾಶನ: ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ
ಮುದ್ರಣ: ೨೦೨೧,
ಪುಟಗಳು: ೮೪೦ ಬೆಲೆ: ರೂ. ೬೦೦/-
(ಪುಸ್ತಕಕ್ಕಾಗಿ ಸಂಪರ್ಕಿಸಿ : ೯೪೪೮೧ ೪೪೪೧೯)
ಡಾ. ಶ್ರೀರಾಮ ಇಟ್ಟಣ್ಣವರ ನಮ್ಮ ನಾಡು ಕಂಡ ಶ್ರೇಷ್ಠ ಜನಪದ ವಿದ್ವಾಂಸರು. ಶ್ರೀಕೃಷ್ಣ ಪಾರಿಜಾತವನ್ನು ಅಕಾಡೆಮಿಕ್ ಶಿಸ್ತಿನಲ್ಲಿ ಅಧ್ಯಯನ ಮಾಡಿ, ಅದಕ್ಕೊಂದು ಘನತೆಯನ್ನು ತಂದುಕೊಟ್ಟವರು. ಕಲಾವಿದರ ಕೈಯಲ್ಲಿ ದೃಶ್ಯವಾಗಿದ್ದ ಶ್ರೀಕೃಷ್ಣ ಪಾರಿಜಾತ ವಿದ್ವಾಂಸರ ಅಧ್ಯಯನ ಪಠ್ಯವಾಗುವಂತೆ ಮಾಡಿದ ಶ್ರೇಯಸ್ಸು ಕೂಡ ಶ್ರೀರಾಮ ಇಟ್ಟಣ್ಣವರ ಅವರಿಗೆ ಸಲ್ಲಬೇಕು. ಪಾರಿಜಾತ, ಲಾವಣಿ, ಸಣ್ಣಾಟ, ಕೌಜಲಗಿ ನಿಂಗವ್ವ, ಜಾನಪದ ಪರಿಕ್ರಮ, ಬಯಲಾಟ ಲೇಖನಗಳು ಮೊದಲಾದ ಮಹತ್ವದ ಕೃತಿಗಳ ಮೂಲಕ ಜಾನಪದ ಕ್ಷೇತ್ರದಲ್ಲಿ ಅನನ್ಯವಾದ ಸಾಧನೆ ಮಾಡಿದ ಶ್ರೀರಾಮ ಇಟ್ಟಣ್ಣವರ ಅವರಿಗೆ ಅವರ ಅಭಿಮಾನಿಗಳು ಹಿರಿಯರು ಕೂಡಿ ‘ಪಾರಿಜಾತ’ ಎಂಬ ಮೌಲಿಕ ಬೃಹತ್ ಅಭಿನಂದನ ಗ್ರಂಥ ಸಮರ್ಪಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.
ಜಾನಪದಕ್ಕೆ ಜಾತಿ-ಮತ-ಪಂಥ-ಪAಗಡಗಳ ಮಿತಿಗಳಿಲ್ಲ. ಹಾಗೆಯೇ ಜನಪದ ವಿದ್ವಾಂಸರೂ ಜಾತಿ ಮತಗಳನ್ನು ಮೀರಿನಿಂತವರು. ತಮ್ಮ ಪರಿಶುದ್ಧ ಪ್ರಾಮಾಣಿಕ ಜೀವನದಿಂದ ಸಮಾಜದಲ್ಲಿ ಆದರ್ಶವಾದವರು. ಇಂಥ ಹಿನ್ನೆಲೆಯ ಡಾ. ಶ್ರೀರಾಮ ಇಟ್ಟಣ್ಣವರ ಅವರ ಅಭಿನಂದನ ಗ್ರಂಥವನ್ನು ಪ್ರಕಟಿಸಿದವರು ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯವರು. ಸಾಹಿತ್ಯ ಕ್ಷೇತ್ರದಲ್ಲಿ ಎಲೆಯ ಮರೆಯ ಕಾಯಿಯಂತೆ ಸರ್ವಾರ್ಪಣ ಮನೋಭಾವದಿಂದ ದುಡಿಯುತ್ತ ಬಂದ ವಿದ್ವಾಂಸರ ಅಭಿನಂದನ ಸಂಪುಟಗಳನ್ನು ಪ್ರಕಟಿಸುವ ಒಂದು ‘ಅಭಿನಂದನ ಮಾಲೆ’ಯನ್ನೇ ಪ್ರಾರಂಭಿಸಿದ ಗದುಗಿನ ಶ್ರೀಮಠದ ಪ್ರಸಾರಾಂಗ, ಡಾ. ಇಟ್ಟಣ್ಣವರ ಅಭಿನಂದನ ಗ್ರಂಥವನ್ನು ಒಂದು ಪ್ರಮುಖ ಆಕರ ಗ್ರಂಥವನ್ನಾಗಿ ರೂಪಿಸಿ ಪ್ರಕಟಿಸಿರುವುದು ಔಚಿತ್ಯಪೂರ್ಣವಾಗಿದೆ.
ಈ ಅಭಿನಂದನ ಸಂಪುಟದಲ್ಲಿ ಒಟ್ಟು ನಾಲ್ಕು ಭಾಗ (ಎಸಳು)ಗಳಿವೆ. ಮೊದಲನೆಯ ಎಸಳು- ಡಾ. ಶ್ರೀರಾಮ ಇಟ್ಟಣ್ಣವರ ಆತ್ಮಕಥೆಯನ್ನು ಒಳಗೊಂಡಿದೆ. ‘ಬದುಕು ಬರಹದ ದಾರಿ’ ಎಂಬ ೪೬ ಪುಟಗಳ ಆತ್ಮಕಥೆ ತುಂಬ ಅರ್ಥಪೂರ್ಣವಾಗಿ ಮೂಡಿಬಂದಿದೆ. ಸದುವಿನಯದ ಸಾಕಾರಮೂರ್ತಿಗಳಾದ ಶ್ರೀರಾಮ ಇಟ್ಟಣ್ಣವರ ಅವರು ತಮ್ಮ ಬದುಕು ಸಾಗಿಬಂದ ಇತಿಹಾಸವನ್ನು ಅತ್ಯಂತ ಸಂಯಮದಿಂದಲೇ ನಿರೂಪಿಸಿದ್ದಾರೆ. ಶ್ರೀರಾಮ ಅವರ ತಂದೆ ಮಗನನ್ನು ತಹಶೀಲ್ದಾರ ಮಾಡಬೇಕೆಂದು ಕನಸು ಕಂಡಿದ್ದರು. ಆದರೆ ಸಾಹಿತ್ಯದ ಗುಂಗು ಹಿಡಿದ ಶ್ರೀರಾಮ ಅವರು ಆಯ್ದುಕೊಂಡಿದ್ದು ಅಧ್ಯಾಪನ ಕಾರ್ಯವನ್ನು. ಅಧ್ಯಯನ-ಅಧ್ಯಾಪನದಲ್ಲಿ ಅವರಿಗೆ ತುಂಬ ಪ್ರೀತಿ. ಅದಕ್ಕಾಗಿ ಆ ಕ್ಷೇತ್ರವನ್ನೇ ಅವರು ಆಯ್ದುಕೊಂಡರು. ಉತ್ತಮ ಅಧ್ಯಾಪಕನ ಲಕ್ಷಣವೆಂದರೆ ದಕ್ಷತೆ-ವೃತ್ತಿಯಲ್ಲಿ ಪ್ರಾಮಾಣಿಕತೆ. ಇವೆರಡನ್ನೂ ಮೇಳೈಸಿಕೊಂಡು ಅಕ್ಷರಶಃ ಪರಿಪಾಲಿಸಿದವರು ಶ್ರೀರಾಮ ಇಟ್ಟಣ್ಣವರ ಅವರು. ಒಂದು ಪ್ರಸಂಗವನ್ನು ದಾಖಲಿಸಿದ್ದಾರೆ. ಮುದಗಲ್ಲಿನ ಕೆಲವು ಹಿರಿಯರು ಶ್ರೀರಾಮ ಇಟ್ಟಣ್ಣವರ ಅವರ ಹತ್ತಿರ ಬಂದು ತಮ್ಮ ಊರಿನ ಕಾರ್ಯಕ್ರಮಕ್ಕೆ ಬರಬೇಕೆಂದು ವಿನಂತಿಸುತ್ತಾರೆ. ಡಿಶೆಂಬರ್ ತಿಂಗಳ ಕಾರಣ, ಒಂದೇ ರಜೆ ಉಳಿದಿದೆ. ಬರಲಾಗುವುದಿಲ್ಲವೆಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಿ. ಆರ್. ಶೀಲವಂತ ಅವರು ಮುದಗಲ್ಲಿನ ಹಿರಿಯರಿಗೆ ಚಿರಪರಿಚಿತರು. ಶೀಲವಂತರ ಹತ್ತಿರ ಬಂದು, ಶ್ರೀರಾಮ ಇಟ್ಟಣ್ಣವರ ಅವರನ್ನು ತಮ್ಮ ಊರಿಗೆ ಉಪನ್ಯಾಸ ಕಾರ್ಯಕ್ರಮಕ್ಕೆ ಕಳಿಸಿಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ಆಗ ಶ್ರೀ ಶೀಲವಂತರ ಅವರು ಶ್ರೀರಾಮ ಇಟ್ಟಣ್ಣವರ ಅವರನ್ನು ಕರೆದು, ಆಮಂತ್ರಣ ಒಪ್ಪಿಕೊಳ್ಳಲು ಹೇಳುತ್ತಾರೆ. ಆಗ ಶ್ರೀರಾಮ ಇಟ್ಟಣ್ಣವರ ಅವರು ‘ಈಗ ಒಂದೇ ರಜೆ ಉಳಿದಿದೆ, ಮುಂದೆ ತೊಂದರೆಯಾಗುತ್ತದೆ ಬೇಡ’ ಎನ್ನುತ್ತಾರೆ. ಶೀಲವಂತ ಅವರು ‘ನಾನು ಪ್ರಿನ್ಸಿಪಾಲರಿಗೆ ಹೇಳುತ್ತೇನೆ, ಬಂದು ಸಹಿ ಮಾಡಿರಿ’ ಎಂದು ಹೇಳಿದರು. ‘ಅದಂತೂ ಖಂಡಿತ ಸಾಧ್ಯವಿಲ್ಲ. ನೀವು ಹೇಳಿದರೂ ನಾನು ಮಾಡುವುದಿಲ್ಲ. ದಯವಿಟ್ಟು ಒತ್ತಾಯಿಸಬೇಡಿ’ ಎನ್ನುತ್ತಾರೆ ಶ್ರೀರಾಮ ಇಟ್ಟಣ್ಣವರ ಅವರು. ಆಗ ಶೀಲವಂತರು ‘ನಾ ಚೇರ್ಮನ್ ನಾನ ಹೇಳೂವಾಗ ನಿಮಗೆದರ ಅಂಜಿಕಿ’ ಎನ್ನುತ್ತಾರೆ. ಆಗ ಇಟ್ಟಣ್ಣವರ ಅವರು ‘ಇದು ಅಂಜಿಕೆಯ ಪ್ರಶ್ನೆಯಲ್ಲ, ನನ್ನ ಮನಸ್ಸು ಒಪ್ಪುವುದಿಲ್ಲ’ ಎಂದು ಹೇಳುತ್ತಾರೆ. ಕೊನೆಗೆ ರಜೆ ಹಾಕಿ ಹೋಗಲು ನಿರ್ಧರಿಸುತ್ತಾರೆ. ಈ ಘಟನೆ ಶ್ರೀರಾಮ ಇಟ್ಟಣ್ಣವರ ಅವರ ಕಾಯಕದ ಮೇಲಿನ ಪ್ರೀತಿಯನ್ನು, ವೃತ್ತಿ ಪ್ರಾಮಾಣಿಕತೆಯನ್ನು ಎತ್ತಿ ತೋರಿಸುತ್ತದೆ. ಪ್ರಸ್ತುತ ಆತ್ಮಕಥೆಯಲ್ಲಿ ತಮ್ಮ ಮನೆತನದ ಹಿನ್ನೆಲೆ, ಅಧ್ಯಯನ ಪರ್ವ, ಉದ್ಯೋಗ ಪರ್ವಗಳ ವಿವರಣೆ ಜೊತೆಗೆ ತಮ್ಮ ಕುಟುಂಬದ ವಿವರಣೆಯನ್ನು ಅತ್ಯಂತ ಸಾರವತ್ತಾಗಿ ನಿರೂಪಿಸಿದ್ದಾರೆ.
ಎರಡನೆಯ ಎಸಳು- ಶ್ರೀರಾಮ ಇಟ್ಟಣ್ಣವರ ಆತ್ಮೀಯರ ಒಡನಾಟದ ಕ್ಷಣ ಚಿತ್ರಗಳಿವೆ. ಎನ್. ಜಿ. ಕರೂರ, ಕಂಠಿ ಹನುಮಂತರಾಯ, ಬಿ. ಕೆ. ಹಿರೇಮಠ ಮೊದಲುಗೊಂಡು, ಅವರ ಮಗ ನಿರಂಜನ ಅವರೆಗೆ ಒಟ್ಟು ೩೬ ಜನರ ಲೇಖನಗಳು ಇಲ್ಲಿವೆ. ಎಲ್ಲರ ಬರೆಹದಲ್ಲಿಯೂ ಶ್ರೀರಾಮ ಇಟ್ಟಣ್ಣವರ ಅವರ ಘನವ್ಯಕ್ತಿತ್ವ ತೇಜಃಪುಂಜವಾಗಿ ಹೊಳೆದಿದೆ.
ಎಸಳು ಮೂರರಲ್ಲಿ ಡಾ. ಶ್ರೀರಾಮ ಇಟ್ಟಣ್ಣವರ ಅವರ ಸಾಹಿತ್ಯ ಸಮೀಕ್ಷೆ ಇದೆ. ಅವರು ಮೂಲತಃ ಕವಿ ಮನೋಧರ್ಮದವರು. ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಅಧ್ಯಯನ ಮಾಡುವ ಕಾಲಕ್ಕಾಗಲೇ ಕವನ ರಚನೆಗೆ ತೊಡಗಿದ್ದ ಶ್ರೀರಾಮ ಅವರು ‘ಹೊಳಿಸಾಲ ಬಳ್ಳಿ’ ಎಂಬ ಮೊದಲ ಕವನ ಸಂಕಲನವನ್ನು ಪ್ರಕಟಿಸಿದರು. ‘ಹಾಡೂಣ ಬಾರ ಪ್ರೇಮದ ಹಾಡ’ ‘ಗಾಲಿ ಉಳ್ಳತೈತಿ’ ಈ ಮೂರೂ ಕವನ ಸಂಕಲನಗಳು ಡಾ. ಇಟ್ಟಣ್ಣವರ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟವರು. ಇಂದಿಗೂ ಯುಟೂಬ್ ಚಾನೆಲ್ನಲ್ಲಿ ಕೂಡ ಅವರ ಜನಪ್ರಿಯ ಹಾಡುಗಳನ್ನು ನಾವು ಕೇಳಬಹುದು.
ಡಾ. ಎಂ. ಎಂ. ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ ‘ಶ್ರೀಕೃಷ್ಣ ಪಾರಿಜಾತ : ಒಂದು ಅಧ್ಯಯನ’ ಎಂಬ ವಿಷಯ ಕುರಿತು ಪಿಎಚ್.ಡಿ. ಪ್ರಬಂಧ ಬರೆದು ಪದವಿ ಪಡೆದ ನಂತರ, ಕಾವ್ಯಜಗತ್ತಿನಿಂದ ಹೊರಬಂದ ಡಾ. ಇಟ್ಟಣ್ಣವರ ಅವರು ಜಾನಪದ ಸಂಶೋಧನೆಗೆ ತೊಡಗಿದರು. ಪಾರಿಜಾತದವರು, ಲಾವಣಿ, ಸಣ್ಣಾಟ ಮೊದಲಾದ ಸಂಶೋಧನಾತ್ಮಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದರು. ೩೦ಕ್ಕೂ ಹೆಚ್ಚು ಕೃತಿಗಳ ಸಮಗ್ರ ಸಮೀಕ್ಷೆ ಈ ಭಾಗದಲ್ಲಿ ಎಡೆಪಡೆದಿವೆ.
ಎಸಳು ನಾಲ್ಕು- ‘ಶ್ರೀಕೃಷ್ಣ ಪಾರಿಜಾತ : ಅನುಸಂಧಾನ’ ಎಂಬ ವಿಭಾಗದಲ್ಲಿ ಶ್ರೀಕೃಷ್ಣ ಪಾರಿಜಾತ ಕುರಿತು ೧೩ ಸಂಶೋಧನಾತ್ಮಕ ಲೇಖನಗಳನ್ನು ಕೂಡಿಸಲಾಗಿದೆ. ಶ್ರೀಕೃಷ್ಣಪಾರಿಜಾತ : ಹಸ್ತಪ್ರತಿಗಳು, ಶ್ರೀಕೃಷ್ಣ ಪಾರಿಜಾತ : ಪ್ರದರ್ಶನ ಪಠ್ಯಗಳು, ಶ್ರೀಕೃಷ್ಣ ಪಾರಿಜಾತ : ಸಂಗೀತ ಹೀಗೆ ಶ್ರೀಕೃಷ್ಣಪಾರಿಜಾತದ ವಿವಿಧ ಆಯಾಮಗಳ ಕುರಿತು ತುಂಬ ಮೌಲಿಕ ಸಂಶೋಧನಾತ್ಮಕ ಲೇಖನಗಳು ಇಲ್ಲಿವೆ.
ಎಸಳು ಐದರಲ್ಲಿ ಶ್ರೀಕೃಷ್ಣ ಪಾರಿಜಾತಕ್ಕಾಗಿಯೇ ತಮ್ಮ ಸಮಸ್ತ ಬದುಕನ್ನು ಸಮರ್ಪಿಸಿಕೊಂಡ ಕಲಾವಿದೆಯರ ಜೀವನ ಸಾಧನೆಯ ಲೇಖನಗಳಿವೆ. ಕೌಜಲಗಿ ನಿಂಗವ್ವ, ಯಮನವ್ವ ಸೂಳಿಕೇರಿ, ಲೋಕಾಪುರ ಯಲ್ಲವ್ವ, ಮ್ಯಾಗೇರಿ ಮಲ್ಲವ್ವ, ಕಾಶಿಬಾಯಿ ದಾದನಟ್ಟಿ, ಚಂಪಾಬಾಯಿ ನಣದಿ, ಮೆಟಗುಡ್ಡ ಕಮಲವ್ವ ಮೊದಲಾದ ೩೪ ಜನ ಕಲಾವಿದೆಯರ ಜೀವನ ವಿವರಗಳು ತುಂಬ ಆಪ್ತವಾಗಿ ಮೂಡಿ ಬಂದಿವೆ. ಇಲ್ಲಿಯ ಎಲ್ಲ ಕಲಾವಿದೆಯರ ಬದುಕು ತುಂಬ ಕಷ್ಟದ್ದು, ಯಾತನಾಮಯದಿಂದ ಕೂಡಿದ್ದು ಎಂಬುದನ್ನು ಗಮನಿಸಿದಾಗ ಹೃದಯ ಭಾರವೆನಿಸುತ್ತದೆ. ಇಂದಿಗೂ ಕೆಲವು ಕಲಾವಿದರು ತಾಪತ್ರಯದಲ್ಲಿಯೇ ಬದುಕುತ್ತಿರುವುದನ್ನು ಓದಿದಾಗ ಮನಸ್ಸಿಗೆ ನೋವಾಗುತ್ತದೆ. ಆದರೂ ಇಷ್ಟೆಲ್ಲ ಜನ ಅದ್ಭುತ ಕಲಾವಿದರು ಪಾರಿಜಾತಕ್ಕಾಗಿಯೇ ಮೀಸಲಾಗಿದ್ದರು ಎಂಬುದು ಸೋಜಿಗದ ಸಂಗತಿಯಾಗಿದೆ.
ಕೊನೆಯ ಭಾಗದಲ್ಲಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅವರು ಶ್ರೀರಾಮ ಇಟ್ಟಣ್ಣವರ ಅವರೊಂದಿಗೆ ನಡೆಸಿದ ಸುದೀರ್ಘ ಸಂದರ್ಶನವಿದೆ. ಇದು ಇಟ್ಟಣ್ಣವರ ಆತ್ಮಕಥೆಯ ಮುಂದುವರಿದ ಭಾಗವೆಂಬಂತೆ ಗೋಚರಿಸುತ್ತದೆ.
ದೇಶಿಯತೆಯಲ್ಲಿ ಅರಳಿದ ಶ್ರೀರಾಮರ ಅನನ್ಯ ಪ್ರತಿಭೆ ಕನ್ನಡ ಸಾಹಿತ್ಯಕ್ಕೆ ಅಪರೂಪದ ಕಾಣಿಕೆಯನ್ನು ನೀಡಿದೆ. ಪಾರಿಜಾತ ಅವರಿಗೆ ಅತ್ಯಂತ ಪ್ರೀತಿಯ ವಸ್ತು-ವಿಷಯ. ಅಂತೆಯೇ ತಮ್ಮ ಮನೆಗೆ ‘ಪಾರಿಜಾತ’ ಎಂದು ಹೆಸರಿಟ್ಟಿದ್ದಾರೆ. ಪಾರಿಜಾತ ಅವರ ಮೈ ಮನಗಳಲ್ಲಿ ತುಂಬಿಕೊಂಡಿದೆ. ಹೀಗಾಗಿ ಈ ಅಭಿನಂದನ ಗ್ರಂಥಕ್ಕೆ ‘ಪಾರಿಜಾತ’ ಎಂಬ ಹೆಸರಿಟ್ಟಿದ್ದು ಅತ್ಯಂತ ಸಮಯೋಚಿತವಾಗಿದೆ.
ಡಾ. ಶ್ರೀರಾಮ ಇಟ್ಟಣ್ಣವರ ಅವರ ಜೀವನ ಸಾಹಿತ್ಯ ಸಾಧನೆ ಕುರಿತು ಇದೊಂದು ಮೌಲಿಕ ಕೃತಿಯಾಗಿದೆ ಅಷ್ಟೇ ಅಲ್ಲ, ಪಾರಿಜಾತ ಮತ್ತು ಪಾರಿಜಾತ ಕಲಾವಿದರ ಮೇಲೆ ಬೆಳಕು ಚೆಲ್ಲುವ ಸಂಶೋಧನಾತ್ಮಕ ಲೇಖನಗಳಿಂದ ಅಪರೂಪದ ಆಕರ ಕೃತಿಯೂ ಆಗಿದೆ. ಅಂತೆಯೆ ಸಂಪಾದಕರ ಶ್ರಮ ಸಾರ್ಥಕವಾಗಿದೆ.
ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧