ಒಂದು ಸಣ್ಣ ಕಲ್ಲನ್ನು ದೇವರೆಂದು ಪೂಜಿಸಿದರೆ ಶಕ್ತಿ ಬರುತ್ತದೆ. ಆದರೆ, ಜೀವವಿರುವ ಮಾನವನನ್ನು ದೇವರೆಂದು ಪರಿಗಣಿಸಿ ಪೂಜಿಸಿದರೆ ಶಕ್ತಿ ಹೆಚ್ಚುವುದೆ? ಭೂಮಿಯ ಮೇಲೆ ಬಂದು ಮರೆಯಾದವರನ್ನು ದೇವರು ಎಂದು ಪೂಜಿಸುವುದು ಅವರ ಜ್ಞಾನವನ್ನು ಅರ್ಥ ಮಾಡಿಕೊಂಡವರಾಗಿದ್ದರು.
ಈಗ ಪ್ರತಿಯೊಬ್ಬರೂ ದೇವರೆ ಎನ್ನುವವರು ಪ್ರತಿಯೊಬ್ಬರೊಳಗಿದ್ದ ಜ್ಞಾನವನ್ನು ಮಾತ್ರ ಗಮನಿಸದೆ ತಾನೇ ದೇವರೆನ್ನುವಂತೆ ಜನರನ್ನು ಮೋಸಗೊಳಿಸಿ ಹಣ,ಅಧಿಕಾರ,ಸ್ಥಾನ ಪಡೆದರೆ ಅವರನ್ನು ನಂಬಿ ನಡೆದವರಿಗೆ ಜ್ಞಾನ ಸಿಕ್ಕಿದ್ದರೆ ಸರಿ. ಅಜ್ಞಾನದಲ್ಲಿಯೇ ಹೋಗಿದ್ದರೆ ದೇವರನ್ನು ಬೇಡೋದಕ್ಕೆ ಮತ್ತೆ ಬರಬೇಕು.
ಬೇಡೋನು ದೀನ ಸ್ಮರಿಸೋನೆ ಜಾಣ ಎನ್ನುವಂತೆ ಕರ್ಮ ಬಿಡದೆ ನಾಮಸ್ಮರಣೆಯಿಂದಲೇ ದೈವಸಾಕ್ಷಾತ್ಕಾರ ಮಾಡಿಕೊಂಡವರು ಈಗ ದೇವರಾಗಿದ್ದಾರೆ. ಇಲ್ಲಿ ನಮ್ಮ ಆಂತರಿಕ ಶುದ್ದಿ ಮಾಡಿಕೊಳ್ಳುವುದೆ ದೈವತ್ವದ ಲಕ್ಷಣ.
ಅಹಂಕಾರ, ಸ್ವಾರ್ಥ ತುಂಬಿದ ದೇಹದಲ್ಲಿ ದೇವರು ಎಲ್ಲಿ ಕಾಣಬಹುದು? ಹಾಗಂತ ಭೂಮಿಯಲ್ಲಿ ಜೀವನ ನಡೆಸಲು ದೇವಾಸುರರಿಬ್ಬರಿಗೂ ಸಮಾನ ಅವಕಾಶ ನೀಡಿರುವ ಭೂಮಿ ತಾಯಿಗೆ ಮನುಕುಲ ಕೊಟ್ಟಿರೋದು ಅಲ್ಪ.
ಆದರೂ ಎಲ್ಲಾ ಸಹಿಸಿಕೊಂಡು ತನ್ನ ಒಡಲನ್ನು ತುಂಬಿಸಿಕೊಂಡಿರುವ ಆ ತಾಯಿಯನ್ನು ದೇವರೆಂದು ಕರೆದವರು ವಿರಳವಾಗಿ ಇಂದು ಭೂಮಿ ಆಳಲು ಹೊರಟವರನ್ನು ದೇವರೆಂದರೆ ಎಲ್ಲಾ ಅದೇ ಮಾರ್ಗ ಹಿಡಿಯುತ್ತಾರೆ. ಆಳೋದರಲ್ಲಿಯೂ ಧರ್ಮದ ಮಾರ್ಗವಿತ್ತು. ಹೀಗಾಗಿ ಅಂದಿನ ಆಡಳಿತವು ಬಹಳ ಕಷ್ಟಕರವಾಗಿತ್ತು.
ಈಗಲೂ ದೇಶ ಆಳೋದು ಸುಲಭದ ಕೆಲಸವಲ್ಲ. ಇಲ್ಲಿ ಕೆಲಸದಲ್ಲಿ ನಿಸ್ವಾರ್ಥ ನಿರಹಂಕಾರಹೆ ಚ್ಚಾಗಿದ್ದರೆ ಭೂಮಿ ಋಣ ತೀರುತ್ತದೆ. ಧರ್ಮ ಸತ್ಯ ಇದ್ದರೆ ಮುಕ್ತಿ ಸಿಗುತ್ತದೆ. ದೈವತ್ವ ಪಡೆಯಲು ಇವು ಅಗತ್ಯವಿತ್ತು. ಕಲಿಗಾಲ ಇದಕ್ಕೆ ವಿರುದ್ದ ನಡೆದವರು ತಮ್ಮ ಹಣಬಲ,ಜನಬಲದಿಂದ ಅಧಿಕಾರ ಪಡೆದು ಜ್ಞಾನಬಲ ಕಳೆದುಕೊಂಡು ಅನಾವಶ್ಯಕವಾಗಿ ದೇವರಹೆಸರಲ್ಲಿ ರಾಜಕೀಯ ನಡೆಸಿ, ಜನರ ಸಾಮಾನ್ಯಜ್ಞಾನ ಹಿಂದುಳಿದಿದೆ.
ಪ್ರತಿಯೊಬ್ಬರಲ್ಲಿಯೂ ಅಡಗಿರುವ ಆ ಪರಾಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಆಧ್ಯಾತ್ಮ ಅಗತ್ಯ. ಆದಿ ಆತ್ಮ. ಒಳಗಿರುವ ಸತ್ಯ,ಧರ್ಮದ ಪರ ನಿಂತರೆ ಒಗ್ಗಟ್ಟು. ಹೊರಗಿನ ಸತ್ಯದ ಹಿಂದೆ ನಡೆದರೆ ಬಿಕ್ಕಟ್ಟು. ಎರಡೂ ಶಕ್ತಿಯನ್ನು ಸರಿಸಮನಾಗಿ ತಿಳಿದು ಜೀವನದಲ್ಲಿ ಅಳವಡಿಸಿಕೊಂಡು ಮಾನವನಾಗಿದ್ದರೆ ಸಮಾನತೆ. ಸಮಾನತೆಗಾಗಿ ನಡೆಯುತ್ತಿರುವ ಹೋರಾಟ ರಾಜಕೀಯವಾಗಿ ಬಳಸಿದರೆ ಅಸಮಾನತೆಯೆ ಹೆಚ್ಚು. ಕಾರಣ ಸಮಾನತೆಗೆ ನಮ್ಮ ಒಳಗಿನ ಜ್ಞಾನಕ್ಕೆ ತಕ್ಕಂತೆ ಹೊರಗಿನ ಶಿಕ್ಷಣ ನೀಡಿದರೆ ಹೆಚ್ಚು ಜ್ಞಾನೋದಯ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು