ಸಾಧಾರಣ ಹುಡುಗಿಯ ಅಸಾಧಾರಣ ಸಾಧನೆ
ಬಾಗಲಕೋಟೆ: ಸಾಧನೆಗೆ ಬಡತನ, ಸೌಲಭ್ಯಗಳ ಕೊರತೆ ಮೊದಲಾದ ಸಂಗತಿಗಳು ಅಡ್ಡಿಯಾಗಲಾರವು ಅಂತ ಈ 15ರ ಪುಟ್ಟ ಬಾಲೆ ಸಾಬೀತು ಮಾಡಿದ್ದಾಳೆ. ನಾವು ಮಾತಾಡುತ್ತಿರುವ ಬಾಲಕಿಯ ಹೆಸರು ಗಂಗಮ್ಮ. ಅವಳ ಸಾಧನೆ ಅಸಾಧಾರಣವಾದದ್ದು. ಶಾಲೆಗಳು ಮುಚ್ಚಿ ಆನ್ಲೈನ್ ತರಗತಿಗಳನ್ನು ನಡೆಸುತ್ತಿರುವುದರಿಂದ ಮಕ್ಕಳು ಓದಿನೆಡೆ ಗಮನ ಹರಿಸುತ್ತಿಲ್ಲ, ಈ ವರ್ಷ ಅವರು ಪಾಸಾಗೋದೇ ಕಷ್ಟ ಎಂದು ಸಾವಿರಾರು ಪೋಷಕರು ದೂರುತ್ತಿದ್ದಾರೆ. ಆದರೆ ಬಾಗಲಕೋಟೆ ತಾಲ್ಲೂಕಿನ ಗಂಗಮ್ಮ ಎಲ್ಲ ಕೊರತೆಗಳನ್ನು ಮೆಟ್ಟಿ ನಿಂತು ತನ್ನ ತಂದೆ-ತಾಯಿಗಳು ನಿರಂತರ ಖುಷಿ ಪಡುವ, ತಮ್ಮ ಬದುಕಿನುದ್ದಕ್ಕೂ ಹೆಮ್ಮೆಯಿಂದ ಬೀಗುವ ಸಾಧನೆ ಮಾಡಿದ್ದಾಳೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2020-21 ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಗಂಗಮ್ಮ ಪಡೆದಿರುವ ಅಂಕಗಳು ಎಷ್ಟು ಗೊತ್ತಾ? 625/625! ಶತ ಪ್ರತಿಶತ, ಸೆಂಟ್ ಪರ್ಸೆಂಟ್!
ಅವಳ ಸಾಧನೆ ಯಾಕೆ ಮಹತ್ಪಪೂರ್ಣ ಮತ್ತು ಅಸಾಮಾನ್ಯವೆನಿಸುತ್ತದೆ ಎಂದರೆ, ಆಕೆ ಉಳಿದವಂತೆ ಆರೋಗ್ಯ ಮತ್ತು ಸಾಮಾನ್ಯವಾಗಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಬಂದಿಲ್ಲ. ಗಂಗಮ್ಮ ಹೃದ್ರೋಗದಿಂದ ಬಳಲುತ್ತಿದ್ದಾಳೆ ಮತ್ತು ಅದರಿಂದ ಸದಾ ತೊಂದರೆ ಅನುಭವಿಸುತ್ತಲೇ ಇರುತ್ತಾಳೆ. ಈ ಪೀಡೆ ಅವಳನ್ನು ಪರೀಕ್ಷೆಯ ಸಂದರ್ಭದಲ್ಲೂ ಕಾಡಿತು.
ನೀವು ನಂಬಲಾರಿರಿ. ಎಸ್ ಎಸ್ ಎಲ್ ಸಿಯ ಕೊನೆ ಪರೀಕ್ಷೆ ಬರೆಯುವಾಗ ಆಕೆ ಹೃದಯ ನೋವು ಶುರುವಾಗಿ ಉಸಿರಾಟದ ಸಮಸ್ಯೆ ಎದುರಿಸಬೇಕಾಯಿತು. ಬೇರೆಯವರಾಗಿದ್ದರೆ ಪರೀಕ್ಷೆ ನಡೆಸುವವರ ಅನುಕಂಪ ಯಾಚಿಸಿ, ಮರುದಿನ ಪರೀಕ್ಷೆ ಬರೆಯಲು ಅನುಮತಿ ಕೋರುತ್ತಿದ್ದರು. ಅದಕ್ಕೆ ಅವಕಾಶವಿದೆಯೋ ಇಲ್ಲವೋ ಅಂತ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿಯೇ ಹೇಳಬೇಕು. ಅದಕ್ಕೆ ಅವಕಾಶ ಇಲ್ಲ ಅಂತಾದರೆ, ಬರೆದಿರುವುದಕ್ಕೆ ಪಾಸು ಮಾರ್ಕ್ಸ್ ಸಿಕ್ಕರೆ ಸಾಕು ಅಂತ ಪರೀಕ್ಷೆಯನ್ನು ಅಲ್ಲಿಗೆ ನಿಲ್ಲಿಸಿ ವೈದ್ಯಕೀಯ ನೆರವು ಪಡೆಯಲು ತೆರಳುತ್ತಿದ್ದರು.ಆದರೆ, ಈ ದಿಟ್ಟ ಹುಡುಗಿ ಅಂಥದ್ದೇನನ್ನೂ ಮಾಡಲಿಲ್ಲ. ತನಗೆ ಆಕ್ಸಿಜನ್ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟವರಿಗೆ ಹೇಳಿ ಪರೀಕ್ಷೆ ಬರೆಯುವದನ್ನು ಮುಂದುವರೆಸಿದಳು. ಆಕೆಯ ಸಾಹಸ, ಸಂಕಲ್ಪ, ದೃಢತೆ, ಮತ್ತು ಎಲ್ಲಕ್ಕೂ ಮಿಗಿಲಾಗಿ ಆತ್ಮವಿಶ್ವಾಸ ಕಂಡು ಪರೀಕ್ಷಾ ಕೇಂದ್ರದಲ್ಲಿದ್ದವರು ನಿಬ್ಬೆರಗಾದರು. ಹೃದಯದ ಕಾಯಿಲೆಯಿಂದ ಬಳಲುತ್ತಿರುವ ಹುಡುಗಿ ವಿಶ್ರಾಂತಿ ಬಯಸದೆ ಆಕ್ಸಿಜನ್ ವ್ಯವಸ್ಥೆ ಮಾಡುವಂತೆ ಕೇಳುತ್ತಿದ್ದಾಳೆ!
ಅವರು ತಡಮಾಡದೆ ಆಕ್ಸಿಜನ್ ವ್ಯವಸ್ಥೆ ಮಾಡಿದರು. ನಿಮಗೂ ಆಶ್ಚರ್ಯವಾಗಹುದು. ಕೊನೆ ಅರ್ಧಗಂಟೆಯ ಪರೀಕ್ಷೆಯನ್ನು ಗಂಗಮ್ಮ ಆಕ್ಸಿಜನ್ ಸಪೋರ್ಟ್ ಮೇಲಿದ್ದುಕೊಂಡು ಬರೆದಿದ್ದಾಳೆ! ಯಾರು ತಾನೆ ಈ ಸಾಹಸ ಮಾಡಿಯಾರು? ಅಂಥ ಸ್ಥಿತಿಯಲ್ಲಿ ಪರೀಕ್ಷೆಯನ್ನು ಪೂರ್ತಿಗೊಳಿಸುವುದೇ ಒಂದು ದೊಡ್ಡ ಸಾಹಸ ಮತ್ತು ಪರಾಕ್ರಮದ ಕೆಲಸ. ಆದರೆ ಗಂಗಮ್ಮಳ ಸಾಧನೆ ನೋಡಿ, ಆಕೆ ಎಲ್ಲ 625 ಅಂಕಗಳನ್ನು ಬಾಚಿಕೊಂಡಿದ್ದಾಳೆ. ಫಲಿತಾಂಶ ಗೊತ್ತಾದ ನಂತರ ಅಂದರೆ ಈ ಕ್ಷಣವೂ ಆಕೆ ಆಕ್ಸಿಜನ್ ಮೇಲಿದ್ದಾಳೆ.
ಗಂಗಮ್ಮ ಬಾಗಲಕೋಟೆ ತಾಲ್ಲೂಕಿನಲ್ಲಿರುವ ಮುಚಖಂಡಿ ತಾಂಡಾದ ದುರ್ಗಾದೇವಿ ಪ್ರೌಢಶಾಲೆ ವಿದ್ಯಾರ್ಥಿನಿ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಅಗಿರುವ ತಂದೆ ಬಸವರಾಜ ಹುಡೇದ ಮತ್ತು ಆಶಾ ಕಾರ್ಯಕರ್ತೆ ಗೀತಾ ಅವರ ಮುದ್ದಿನ ಮಗಳಾಗಿರುವ ಗಂಗಮ್ಮ ತನ್ನ ಯಶಸ್ಸಿನ ಕಾರಣವನ್ನು ಬಿಚ್ಟಿಟ್ಟಿದ್ದಾಳೆ. ದಿನಕ್ಕೆ ಕನಿಷ್ಟ 5 ತಾಸುಗಳಷ್ಟು ಅಭ್ಯಾಸ, ತರಗತಿಗಳು ಅನ್ಲೈನ್ನಲ್ಲಿ ನಡೆದರೂ ಯಾವುದನ್ನೂ ಮಿಸ್ ಮಾಡದೆ ಅಟೆಂಡ್ ಮಾಡಿದ್ದು ಮತ್ತು ಪಠ್ಯಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗೆ ಯೂಟ್ಯೂಬ್ ನೆರವು ಪಡೆದಿದ್ದು ಎಂದು ಅವಳು ಹೇಳುತ್ತಾಳೆ.
ಗಂಗಮ್ಮ ಟ್ಯೂಷನ್ ಬಗ್ಗೆ ಯೋಚನೆ ಸಹ ಮಾಡದೆ, ಬೇರೆಯವರಿಂದ ನೆರವು ಪಡೆಯುವ ಗೋಜಿಗೂ ಹೋಗದೆ ಈ ಸಾಧನೆ ಮಾಡಿದ್ದಾಳೆ. ಆದರೆ ತಂದೆ-ತಾಯಿಗಳ ಪ್ರೋತ್ಸಾಹವನ್ನು ಅವಳು ಅಭಿಮಾನದಿಂದ ಹೇಳಿಕೊಳ್ಳುತ್ತಾಳೆ. ಗಂಗಮ್ಮನಿಗೆ ಕಾಮರ್ಸ್ ಸ್ಟ್ರೀಮ್ ತೆಗೆದುಕೊಂಡು ಸಿ ಎ ಮಾಡುವ ಮಹದಾಸೆ ಇದೆ. ಆಕೆ ಬಯಸಿದ್ದನ್ನೂ ಓದಿಸುತ್ತೇನೆ ಎಂದು ಹೆಮ್ಮೆಯಿಂದ ಬೀಗುತ್ತಿರುವ ಬಸವರಾಜ ಹೇಳುತ್ತಾರೆ.ಗಂಗಮ್ಮಳ ಸಾಧನೆ ಗೊತ್ತಾಗುತ್ತಿದ್ದಂತೆ ಬಸವರಾಜ ಮತ್ತು ಗೀತಾ ತಮ್ಮ ಅಸಾಧಾರಣ ಕುವರಿಗೆ, ಬಂಧುಗಳಿಗೆ, ನೆರೆಹೊರೆಯವರಿಗೆ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ.
ಆಕೆಯ ಆರೋಗ್ಯದ ಬಗ್ಗೆ ಜಿಲ್ಲಾಡಳಿತ ಆಸ್ಥೆವಹಿಸಿ ಚಿಕಿತ್ಸೆಗೆ ನೆರವಾದರೆ, ಆರ್ಥಿಕವಾಗಿ ಸಬಲರಲ್ಲದ ಬಸವರಾಜ ಮತ್ತು ಗೀತಾ ಅವರಿಗೆ ಬಹಳ ಸಹಾಯವಾಗುತ್ತದೆ. ಹಾಗೆಯೇ ಆ ಭಾಗದ ಶಿಕ್ಷಣ ಸಂಸ್ಥೆಗಳು ಆಕೆಗೆ ಉಚಿತ ಸೀಟು ನೀಡಿ ಓದಿಗೆ ಪೂರಕವಾಗುವ ಏರ್ಪಾಟು ಮಾಡಿದರೆ ಆ ಸಂಸ್ಥೆಗಳೂ ಹೆಮ್ಮೆ ಪಡುವಂಥ ಸಾಧನೆಯನ್ನು ಗಂಗಮ್ಮ ಮಾಡುತ್ತಾಳೆ. ಆದರಲ್ಲಿ ಸಂದೇಹವೇ ಬೇಡ…….
ಇಂಥ ಮಕ್ಕಳು ನಾಡಿನ ನಿಜವಾದ ಹೆಮ್ಮೆಯ ಸುಪುತ್ರಿಯರು…
ಮೂಲ: ಶ್ರೀ ಶ್ರೀಧರ್ ಆಸಂಗಿಹಾಳ್
ಸಂಸ್ಥಾಪಕ ಅಧ್ಯಕ್ಷರು ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಸವದತ್ತಿ.
ಪತ್ರಿಕೆಗೆ: ಶ್ರೀ ಇಂಗಳಗಿ ದಾವಲಮಲೀಕ