Homeಲೇಖನಅತಿಯಾದ ಯೋಚನೆಗೆ ಹಾಕಿ ಪೂರ್ಣ ವಿರಾಮ

ಅತಿಯಾದ ಯೋಚನೆಗೆ ಹಾಕಿ ಪೂರ್ಣ ವಿರಾಮ

ಜೀವನದ ಜಂಜಾಟದೊಳಗೆ ಬಿದ್ದು ತಲೆ ಚಿಟ್ ಹಿಡಿದು ಹೋಗಿದೆ. ಬದುಕಿನ ತಾಪತ್ರಯಗಳನ್ನು ಕಂಡು ಮನಸ್ಸು ರೋಸಿ ಹೋಗಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಅನ್ನೋದು ನಮ್ಮಲ್ಲಿ ಅನೇಕರ ಗೊಣಗಾಟ. ಈ ಸಮಸ್ಯೆಗಳಿಂದ ಅದ್ಯಾವಗ ಮುಕ್ತಿ ಸಿಗುತ್ತೋ ಎಂಬ ವಿಚಾರದೊಳಗೆ ಮುಳುಗಿರುವದೇ ಜೀವನ ಆಗಿಬಿಟ್ಟಿದೆ.

ಹೀಗೆ ನಮ್ಮ ತಲೆ ಪ್ರತಿಕ್ಷಣ ಏನಾದರೂ ಒಂದನ್ನು ಯೋಚಿಸುತ್ತಲೇ ಇರುತ್ತದೆ. ಮಲಗಿಕೊಂಡಾಗಲೂ ಅದಕ್ಕೆ ವಿಶ್ರಾಂತಿ ಇಲ್ಲ. ಬಹಳಷ್ಟು ಸಾರಿ ಸಣ್ಣ ಸಣ್ಣ ವಿಚಾರಕ್ಕೂ ಅತಿಯಾಗಿ ಯೋಚಿಸಿ ಇತರರು ಅಪಹಾಸ್ಯ ಮಾಡುವಂತಹ ಪ್ರಸಂಗಗಳು ನಡೆಯುತ್ತವೆ. ಹೀಗೆ ಅಪಹಾಸ್ಯಕೊಳಗಾಗಬಾರದೆಂದು ಮತ್ತೆ ಮತ್ತೆ ವಿಚಾರ ಮಾಡುವದು ಸರಿಯೆನಿಸಿದರೂ ಇದು ಅನೇಕ ಬಾರಿ ಆತಂಕಕ್ಕೆ ತಳ್ಳುತ್ತದೆ. ಕೆಲವು ಬಾರಿ ಎಲ್ಲವೂ ಸರಿಯಾಗಿ ನಡೆಯುತ್ತಿದ್ದರೂ ಎಲ್ಲಿ ಕೆಲಸ ಅರ್ಧಕ್ಕೆ ನಿಂತು ಬಿಡುತ್ತೇನೋ, ಕೆಟ್ಟು ಬಿಡುತ್ತೆನೋ ಎಲ್ಲಿ ಮುಖಭಂಗಕ್ಕೆ ಒಳಗಾಗಬೇಕಾಗುತ್ತೆನೊ? ಎಂದು ಅತಿಯಾದ ಯೋಚನೆಗಳಿರುವ ಗೊಂದಲದ ಹೊಂಡದಲ್ಲಿ ಮುಳುಗಿ ನೋವು ಅನುಭವಿಸುತ್ತೇವೆ.

ಕೆಲಸ ಸುಲಲಿತವಾಗಿ ನಡೆಯುತ್ತಿರವಾಗಲೂ ಅದರ ಬಗ್ಗೆ ಅನುಮಾನ ಪಡುವದು ಅಯ್ಯೋ! ಈ ಕೆಲಸ ಇಷ್ಟು ಸುಗಮವಾಗಿ ನಡೆಯುತ್ತೆ ಅಂತ ಅನಿಸಿರಲೇ ಇಲ್ಲ. ಸರಳವಾಗಿ ನಡೆತಿರೋದನ್ನು ನನ್ನ ಕೈಲಿ ನಂಬೋಕೆ ಆಗ್ತಿಲ್ಲ. ಅಂತ ಹಲವರು ಹಲುಬುತ್ತಾರೆ. ಹೀಗೆ ಅತಿಯಾದ ಯೋಚನೆ ಶುಭ್ರವಾದ ಸರೋವರದಂತಿರುವ ಮನಸ್ಸನ್ನು ಕೆಸರಿನ ಹೊಂಡವನ್ನಾಗಿಸಿ ಬಿಡುತ್ತದೆ. ಇದರಿಂದ ಸಣ್ಣ ಸಣ್ಣ ಕೆಲಸಗಳು ದೊಡ್ಡ ಗುಡ್ಡವನ್ನು ಕಡಿದಂತೆ ಶ್ರಮದಾಯಕವೆನಿಸುತ್ತವೆ. ಆತಂಕ ಹೆಚ್ಚಾಗಿ ಖಿನ್ನತೆಗೆ ದಾರಿ ಮಾಡಿಕೊಡುತ್ತವೆ. ಖಿನ್ನತೆಯಿಂದ ಉತ್ಸಾಹ ಉಲ್ಲಾಸ ಎಲ್ಲವೂ ಮಾಯವಾಗುತ್ತದೆ.

ನಿಜವಾಗಲೂ ನಾವು ಇಷ್ಟೆಲ್ಲ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇದೆಯಾ? ದೈಹಿಕವಾಗಿ ಮತ್ತು ಮಾನಸಿಕವಾಗಿ ನಮಗೆ ನಾವೇ ತೊಂದರೆ ಕೊಟ್ಟುಕೊಳ್ಳೋದು ಎಷ್ಟೊಂದು ಸರಿ? ಸತ್ಯವೇನೆಂದರೆ ಅತಿಯಾಗಿ ಯೋಚಿಸುವದು ಒಂದು ಕೆಟ್ಟ ಚಟ ಅಂತ ನಾವು ಅಂದುಕೊಳ್ಳೊದೇ ಇಲ್ಲ. ಭಯದ ರೂಪದಲ್ಲಿರುವ ಈ ಅತಿಯಾದ ಯೋಚಿಸುವಿಕೆ ನಮ್ಮ ಸಂತೋಷವನ್ನು ಕೊಲ್ಲುತ್ತದೆಂದು ಬಲ್ಲವರು ಹೇಳಿದ್ದನ್ನು ಕೇಳಿದಾಗಷ್ಟು ಗೋಣು ಅಲ್ಲಾಡಿಸಿ ನಂತರ ಉದಾಸೀನತೆ ತೋರುವ ಚಟವನ್ನು ರೂಡಿಯಾಗಿಸಿಕೊಂಡು, ನಾವು ತೋಡಿದ ತಗ್ಗಿನಲ್ಲಿ ನಾವೇ ಬಿದ್ದು ನರಳುತ್ತಿದ್ದೇವೆ. ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತ ಅನುಭವ.

ಜಾಣರು ಅಕಸ್ಮಾತ್ತಾಗಿ ತಗ್ಗಿನಲ್ಲಿ ಬಿದ್ದರೆ ಬಲಿಯಲ್ಲಿ ಸಿಕ್ಕ ಬಿದ್ದ ಇಲಿಯಂತೆ ಒದ್ದಾಡಿ ಸಾಯದೆ, ತಾವು ಓದಿದ, ಅನುಭವಿಸಿ ಕಲಿತ ತಂತ್ರಗಳನ್ನುಪಯೋಗಿಸಿ ಹೊರ ಬರುತ್ತಾರೆ. ಗಿಳಿಮರಿಯೊಂದು ಬೇಟೆಗಾರನ ಕೈಯಲ್ಲಿ ಸಿಕ್ಕು ನೋವನ್ನು ಅನುಭವಿಸುತ್ತಿತ್ತು.. ಒಂದು ದಿನ ಬೇಟೆಗಾರ ಗಿಳಿಯ ಬಳಗವನ್ನು ಕಂಡು ಬಂದು, ನಿನ್ನನ್ನು ಕಳೆದುಕೊಂಡ ನಿನ್ನ ಬಳಗ ತೀರಾ ದುಃಖದಲ್ಲಿದೆ. ನೀನು ನನ್ನ ಪಂಜರದಲ್ಲಿರುವ ಸುದ್ದಿಯನ್ನು ಕೇಳುತ್ತಲೇ ನಿನ್ನ ತಂದೆ ತಾಯಿ ಸತ್ತು ಬಿದ್ದರು.. ಎಂದನು ಇದನ್ನು ಕೇಳಿದ ಗಿಳಿ ಮರಿ ವಿಲ ವಿಲ ಒದ್ದಾಡಿ ಸತ್ತಿತು. ಅಯ್ಯೋ! ಈ ಗಿಳಿ ಮರಿಯೂ ಸತ್ತು ಹೋಯಿತೆಂದು ಬೇಟೆಗಾರ ಗಿಳಿಮರಿಯನ್ನು ಪಂಜರದಿಂದ ಹೊರತೆಗೆದ. ತಕ್ಷಣವೆ ಗಿಳಿಮರಿಯು ಪುರ್ರನೆ ಹಾರತೊಡಗಿತು. ಅಯ್ಯೋ! ನೀನು ಸತ್ತಿದ್ದಿಯಾ ಎಂದು ಹೊರತೆಗೆದೆ ಅಂದ. ಅದಕ್ಕೆ ಗಿಳಿಮರಿ “ನನ್ನ ತಂದೆ ತಾಯಿಯೂ ಸತ್ತಿಲ್ಲ ಅವರು ಕೊಟ್ಟ ಐಡಿಯಾದಿಂದನೇ ನಾನು ಬಚಾವಾದೆ. ಎನ್ನುತ್ತ ಹಾರಿಹೋಯಿತು. ಸರಿಯಾದ ದಿಕ್ಕಿನಲ್ಲಿ ಯೋಚಿಸಿ ಪರಿಹಾರೋಪಾಯ ಕಂಡುಕೊಳ್ಳುವದು ಮುಖ್ಯ. ಅತಿಯಾಗಿ ಯೋಚಿಸಿ ಲಾಭವಿಲ್ಲ ಎನ್ನುವ ಸಂಗತಿ ಈ ದೃಷ್ಟಾಂತದಿಂದ ತಿಳಿದು ಬರುತ್ತದೆ.

ಈಜಲು ಬಾರದವನು ನೀರಲ್ಲಿ ಬಿದ್ದರೆ ಕೈ ಕಾಲು ಬಡಿಯುತ್ತಾನೆ. ನನ್ನನ್ನು ಕಾಪಾಡಿ ಎಂದು ಜೋರಾಗಿ ಚೀರುತ್ತಾನೆ. ಸನಿಹದಲ್ಲಿದ್ದವರು ಬಿದ್ದವನನ್ನು ರಕ್ಷಿಸಲು ದಾವಿಸುತ್ತಾರೆ. ಹೊರತು ಯೋಚಿಸುತ್ತಾ ಕುಳಿತುಕೊಳ್ಳುವದಿಲ್ಲ. ಮನೆಗೆ ಬೆಂಕಿ ಬಿದ್ದಾಗಲೂ ಅದು ಇದು ಎಂದು ಯೋಚಿಸದೆ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಅವರು ಬರುವವರೆಗೂ ಕಾಯದೆ, ಬಕೆಟ್ಟಿನಿಂದ ಬೆಂಕಿಗೆ ನೀರು ಗೊಜ್ಜುತ್ತಲೇ ಇರುತ್ತೇವೆ. ನಾರ್ಮನ್ ವಿನ್ಸಂಟ್ ಪೀಲೆ ಹೇಳಿದಂತೆ ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಂಡರೆ ಇಡೀ ಜಗತ್ತೆ ಬದಲಾಗುವದು ಖರೆ. ಎಂಬ ಮಾತು ಸತ್ಯವೆನಿಸತೊಡಗುತ್ತದೆ.

ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪ್ರಯಣಿಸುತ್ತಿರುವಾಗ ನಮ್ಮ ಕಣ್ಣ ಮುಂದೆ ದಾಟಿ ಹೋಗುವಂತೆ ಕಾಣುವ ಗಿಡ ಮರ ಹಳ್ಳ ಹೊಳೆ ತೊರೆ ನದಿ ಗುಡ್ಡಗಳನ್ನು ಯಾವುದೇ ಭಾವನೆಗಳಿಲ್ಲದೇ ನೋಡಿ ಆಸ್ವಾದಿಸುವ ಹಾಗೆ. ಸಮುದ್ರಗಳ ಅಲೆಗಳಂತೆ ನಿರಂತರವಾಗಿ ಹುಟ್ಟುವ ಆಲೋಚನೆಗಳಿಗೆ ಇಂಬುಕೊಟ್ಟು ಅದರ ಕುರಿತೇ ಅತಿಯಾಗಿ ಯೋಚಿಸುವದಕ್ಕಿಂತ ಆಲೋಚನೆಗೆ ತಕ್ಕಂತೆ ಪ್ರತಿಕ್ರಿಯಿಸುವದು ಒಳಿತು. ಅತಿಯಾದ ಯೋಚನೆಗೆ ಪೂರ್ಣ ವಿರಾಮ ಹಾಕಿ ಸಂಪೂರ್ಣವಾಗಿ ಆರಾಮವಾಗಿರಬೇಕೆಂದರೆ ಆತ್ಮವಿಶ್ವಾಸ, ಜೀವನ ಪ್ರೀತಿ ಹೆಚ್ಚಿಸುವ ಧ್ಯಾನ ಮತ್ತು ದೈವಿಕ ಭಕ್ತಿಯೂ ಅತ್ಯಗತ್ಯ. ಎನ್ನುವದರಲ್ಲಿ ಎರಡು ಮಾತಿಲ್ಲ. ಓಗ್ ಮಂಡಿನೊ ಹೇಳಿದಂತೆ ಸದಾ ಒಳಿತನ್ನು ಯೋಚಿಸಿ ಒಳಿತನ್ನು ಮಾಡಿ. ಒಳಿತಿನ ಫಲ ತಡವಾಗಿ ದಕ್ಕಬಹುದು ಆದರೆ ದಕ್ಕುವದು ನಿಶ್ಚಿತ…


ಜಯಶ್ರೀ. ಅಬ್ಬಿಗೇರಿ
ಆಂಗ್ಲ ಭಾಷಾ .ಉಪನ್ಯಾಸಕರು.

RELATED ARTICLES

Most Popular

error: Content is protected !!
Join WhatsApp Group