ಅತ್ಯಾಚಾರ, ಕೊಲೆ ಖಂಡಿಸಿ ರಾಷ್ಟ್ರಪತಿಗಳಿಗೆ ಮನವಿ
ಸಿಂದಗಿ: ಸಂಗಮ ಸಂಸ್ಥೆ, ಸ್ಪೂರ್ತಿ ತಾಲೂಕ ಮಟ್ಟದ ಒಕ್ಕೂಟದ ಸದಸ್ಯರು ಹಾಗೂ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ದೆಹಲಿಯ ನಾಗರಿಕ ಉದ್ಯೋಗಿಯ ಮತ್ತು ಮುಂಬೈನ ಸಾಕಿನಾಕಾ ಮಹಿಳೆಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ತಾಲೂಕ ದಂಡಾಧಿಕಾರಿ ಸಂಜೀವಕುಮಾರ ದಾಸರ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಅಲ್ವಿನ್ ಡಿಸೋಜ, ಸುಜಾತ ಕಲಬುರ್ಗಿ, ಸಿಂತಿಯಾ ಡಿ ಮೇಲ್ಲೋ ಮಾತನಾಡಿ, ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಒಂದು ಮಾತನ್ನು ಹೇಳಿದ್ದರು ಅದೇನೆಂದರೆ, “ ಈ ದೇಶದಲ್ಲಿ ಒಬ್ಬ ಮಹಿಳೆ ಮಧ್ಯರಾತ್ರಿಯಲ್ಲಿ ಯಾವಾಗ ನಿರ್ಭಯದಿಂದ ತಿರುಗಾಡುತ್ತಾಳೋ ಅವಾಗ ಈ ದೇಶದ ಸ್ವಾತ್ರಂತ್ರ್ಯಕ್ಕೆ ಬೆಲೆ ಬರುತ್ತದೆ”. ಎಂಬ ಮಾತನ್ನು ಹೇಳಿದ್ದರು. ಅಲ್ಲದೇ ಭಾರತ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಮಹಿಳೆಯರಿಗೆ ವಿಶೇಷ ಗೌರವ ಇದೆ. ಹೆಣ್ಣನ್ನೂ ಭೂಮಿ, ನದಿ, ಸರೋವರ, ಪರ್ವತಗಳಿಗೆ ಹೋಲಿಸಿ ಅತ್ಯಂತ ಗೌರವದಿಂದ ಕಾಣುವ ಸಂಸ್ಕ್ರತಿ ಭಾರತೀಯರದ್ದಾಗಿದೆ ಆದರೆ ದೆಹಲಿಯ ನಾಗರಿಕ ರಕ್ಷಣೆ ( ಡಿಸಿಡಿ) ಉದ್ಯೋಗಿಯಾಗಿದ್ದ 21 ವರ್ಷದ ಮುಸ್ಲಿಂ ಯುವತಿಯ ದೇಹದ ಮೇಲೆ 50 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಅತ್ಯಾಚಾರವೆಸಗಿ, ಬರ್ಬರವಾಗಿ ಕೊಲೆ ಮಾಡಲಾಗಿದೆ. ಇಂತಹ ಬರ್ಬರ ಕೃತ್ಯ ನಡೆಸಿದವರನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕು. ಆಗಸ್ಟ್ 26 ರಂದು ದೆಹಲಿಯ ಸಂಗಮ್ ವಿಹಾರ್‍ನಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಕೆಲಸದ ಸ್ಥಳದಿಂದ ಸಬಿಯಾ( ಹೆಸರು ಬದಲಾಯಿಸಲಾಗಿದೆ) ಅವರನ್ನು ಅಪಹರಿಸಿ, ನಂತರ ಫರಿದಾಬಾದ್‍ಗೆ ಕರೆದೊಯ್ದು ಅತ್ಯಾಚಾರವೆಸಗಿ ದೇಹವನ್ನು ವಿರೂಪಗೊಳಿಸಲಾಗಿದೆ. ಅಲ್ಪ ಸಂಖ್ಯಾತ ಸಮುದಾಯದ ಹೆಣ್ಣು ಮಗಳ ಮೇಲೆ ಆದ ಈ ಕೃತ್ಯದ ಕುರಿತು ಮುಖ್ಯವಾಹಿನಿ ಮಾಧ್ಯಮ ನಿರ್ಲಕ್ಷ ತಾಳಿವೆ. ಅತ್ಯಾಚಾರವೆಸಗಿ ಕೊಲೆ ಮಾಡಿದ ಅರೋಪಿಗಳನ್ನು ಕೂಡಲೆ ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ನಮ್ಮ ಹಕ್ಕೊತ್ತಾಯ ಮಾಡಿದರು.
ಮುಂಬೈನ ಉಪನಗರ ಸಾಕಿನಾಕಾ ಎಂಬಲ್ಲಿ ನಿಂತಿದ್ದ ಟೆಂಪೋ ಒಂದರಲ್ಲಿ ಸಪ್ಟೆಂಬರ್ 10 ರಂದು 34 ವರ್ಷದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹೈದ್ರಾಬಾದ್‍ನಲ್ಲಿ 6 ವರ್ಷದ ಮಗುವಿನ ಮೇಲೆ ಆದ ಅತ್ಯಾಚಾರ ಮತ್ತು ಕೊಲೆ ಹಾಗೂ ಅಮಾನವೀಯವಾಗಿ ಚಿತ್ರಹಿಂಸೆ ನೀಡಿ ಚಾಕುವಿನಿಂದ ಹಲವು ಸಲ ಇರಿದು ಅವಳ ಸಾವಿಗೆ ಕಾರಣವಾದ ನೀಚರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ಕೊಟ್ಟು ಅವಳ ಕುಟುಂಬಕ್ಕೆ ಪರಿಹಾರ ಕೊಡಿಸಬೇಕೆಂದು ಅಲ್ಲದೆ ದೆಹಲಿಯ ನಾಗರಿಕ ರಕ್ಷಣೆ ಉದ್ಯೋಗಿಯ ಮತ್ತು ಮುಂಬೈನ ಉಪನಗರ ಸಾಕಿನಾಕಾ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಅರೋಪಿಗಳನ್ನು ಶೀಘ್ರದಲ್ಲಿ ಗಲ್ಲಿಗೇರಿಸಬೇಕು.
ಸದರಿ ಯುವತಿಯ ಮತ್ತು ಮಹಿಳೆಯ ಕುಟುಂಬಕ್ಕೆ ಸರಕಾರ ಸೂಕ್ತ ರಕ್ಷಣೆ ನೀಡಬೇಕು. 30 ದಿನದ ಒಳಗೆ ತನಿಖೆ ಮಾಡಿ ಚಾರ್ಜ್ ಶೀಟ್‍ನ್ನು ಕೋರ್ಟಿಗೆ ಹಾಜರುಪಡಿಸಬೇಕು. ಯುವತಿಯ ಮತ್ತು ಮಹಿಳೆಯ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕಾನೂನು ರೂಪಿಸಬೇಕು. ಸದರಿ ಯುವತಿಯ ಹಾಗೂ ಮಹಿಳೆಯ ಕುಟುಂಬಕ್ಕೆ ತಲಾ ಒಂದು ಕೋಟಿ ನೀಡಬೇಕು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತೇಜಶ್ವಿನಿ ಹಳ್ಳಕೇರಿ, ಶ್ರೀಧರ ಕಡಕೋಳ, ತಾಲೂಕು ಸ್ಪೂರ್ತಿ ಒಕ್ಕೂಟದ ಮಹಿಳಾ ಸಂಘದ ಸದಸ್ಯರು ಹಾಗೂ ವಿವಿಧ ಸಂಘಗಳ ಮಹಿಳೆಯರು ಇದ್ದರು.