ಮೂಡಲಗಿ – ಕೋವಿಡ್ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆಗೆ ವಿಧಿಸಲಾಗಿದ್ದ ಹಲವು ನಿಯಮಗಳಲ್ಲಿ ಒಂದಾದ ಐದು ದಿನ ಗಣೇಶೋತ್ಸವ ನಿಯಮವನ್ನು ರದ್ದುಪಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇದರಿಂದ ಇನ್ನು ಮೇಲೆ ಗಣೇಶನನ್ನು ಐದಕ್ಕಿಂತಲೂ ಹೆಚ್ಚು ದಿನಗಳವರೆಗೆ ಕೂರಿಸಬಹುದಾಗಿದೆ ಆದರೆ ಉಳಿದಂತೆ ಕೊರೋನಾದ ಎಲ್ಲ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ಎಮ್. ಜಿ. ಹಿರೇಮಠ ಅವರು, ಶ್ರೀ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ತಡೆಗಟ್ಟಲು ಅನುಸರಿಸಬೇಕಾದ ಪರಿಷ್ಕೃತ ಮಾರ್ಗಸೂಚಿಗಳನ್ನು ಮಾನ್ಯ ಸರ್ಕಾರವು ಉಲ್ಲೇಖ (1) ರಲ್ಲಿನ ದಿ. 05.09.2021 ರಡಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಅದರಂತೆ ಸದರಿ ಆದೇಶವನ್ನು ಜಾರಿಗೊಳಿಸಲು ಜಿಲ್ಲೆಯ ಎಲ್ಲ ಸಾರ್ವಜನಿಕರು, ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ಹಾಗೂ ಸಂಬಂಧಿಸಿದ ಎಲ್ಲ ಇಲಾಖಾ ಮುಖ್ಯಸ್ಥರುಗಳಿಗೆ ಕ್ರಮ ಕೈಗೊಳ್ಳಲು ಉಲ್ಲೇಖ (2) ರಡಿ ತಿಳಿಸಲಾಗಿರುತ್ತದೆ.
ಮುಂದುವರೆದು ಉಲ್ಲೇಖ 1 ರಲ್ಲಿನ ದಿ. 05.09.2021 ರಡಿ ಹೊರಡಿಸಲಾದ ಮಾರ್ಗಸೂಚಿಗಳಲ್ಲಿನ ಮಾರ್ಗಸೂಚಿ ನಂ 3 ರಲ್ಲಿ ಶ್ರೀ ಗಣೇಶ ಆಚರಣೆಯನ್ನು ಗರಿಷ್ಠ 5 ದಿನಗಳಿಗಿಂದ ಹೆಚ್ಚಿನ ದಿನ ಆಚರಿಸುವಂತಿಲ್ಲ ಎಂಬುವುದನ್ನು ಸಡಿಲಿಕೆಗೊಳಿಸಿ ಉಳಿದ ಎಲ್ಲ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಉಲ್ಲೇಖ (1) ರಲ್ಲಿನ ದಿ.13.09.2021 ರಡಿ ಆದೇಶಿಸಿರುತ್ತಾರೆ.
ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಪಾರಂಪರಿಕವಾಗಿ ಆಚರಿಸಲಾದಂತೆ ದಿನಗಳಿಗೆ ಸಿಮೀತಗೊಳಿಸಿ ಆಚರಿಸಲು ಮತ್ತು ಉಲ್ಲೇಖಿತ ಆದೇಶಗಳಲ್ಲಿನ ಇನ್ನುಳಿದ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈ ಮೂಲಕ ಆದೇಶಿಸಿದೆ.
ಈ ವಿಷಯವಾಗಿ ಮೇಲಿನ ಆದೇಶವನ್ನು ಜಾರಿಗೊಳಿಸಲು ಜಿಲ್ಲೆಯ ಎಲ್ಲ ಸಾರ್ವಜನಿಕರು, ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು, ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ಬೆಳಗಾವಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಬೆಳಗಾವಿ, ಆಯುಕ್ತರು, ಮಹಾನಗರ ಪಾಲಿಕೆ, ಬೆಳಗಾವಿ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಬೆಳಗಾವಿ, ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲದಾರರು ಹಾಗೂ ಸಂಬಂಧಪಟ್ಟ ಎಲ್ಲ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳುವದು.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.