ಬೆಂಗಳೂರು: ನಗರದ ಗವಿಪುರ ಸಾಲು ಛತ್ರಗಳ ಎದುರು ಇರುವ ಬೆಂಗಳೂರಿನ ಕೆಂಪೇಗೌಡ ನಗರದ “ಉದಯಭಾನು ಸಾಂಸ್ಕೃತಿಕ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪ್ರೊ ಎಚ್ ಆರ್ ರಾಮಕೃಷ್ಣರಾವ್ ಅವರ ಆತ್ಮಕಥೆ ‘ಅಂಬಿಗಾ ! ದಡ ಹಾಯಿಸು’ ಎಂಬ ಗ್ರಂಥವನ್ನು ಪ್ರಸಾರ ಭಾರತಿ ವಿಶ್ರಾಂತ ಉಪ ಮಹಾನಿರ್ದೇಶಕರಾದ ಡಾ ಎಚ್ ಆರ್ ಕೃಷ್ಣಮೂರ್ತಿ ಅವರು ಲೋಕಾರ್ಪಣೆ ಮಾಡಿ ಮಾತನಾಡುತ್ತಾ, ಇಂದಿನ ಶಿಕ್ಷಣ ವ್ಯವಸ್ಥೆ ಕುರಿತ ದೀರ್ಘಾವಲೋಕನ ಹಾಗೂ ಭೌತವಿಜ್ಞಾನ ಮತ್ತು ವೇದಾಂತ ಎಂಬ ಮಹತ್ವದ ಅಧ್ಯಾಯವಿದ್ದು ಹಾಗೂ ನಮ್ಮ ಪರಂಪರೆಯ ಔನ್ನತ್ಯದ ಅರಿವು ಬೇಕಾದವರು ಓದಲೇಬೇಕಾದ ಒಂದು ಮಹತ್ವದ ಗ್ರಂಥ ಇದಾಗಿದೆ ಎಂದು ನುಡಿದರು.
ಪುಸ್ತಕ ನಿರೂಪಕ,” ವಿಜ್ಞಾನ, ಗಣಿತ ಹಾಗು ವನ್ಯ ಜೀವಿ ಸಂರಕ್ಷಣಾ ಶಿಕ್ಷಕರಾದ ನವೀನ್ ಕಲ್ಗುಂಡಿ ಮಾತನಾಡಿ, ಪ್ರೊ ಎಚ್ ಆರ್ ರಾಮಕೃಷ್ಣರಾವ್ ಅವರ ಆತ್ಮಕಥೆಯನ್ನು ನಿರೂಪಣೆ ಮಾಡಲು ಅವಕಾಶ ಸಿಕ್ಕಿದ್ದು ಅವರ ಜೀವನಗಾಥೆ ಸಾಧನೆಗಳು ಇಲ್ಲಿ ಹದಿನಾರು ಅಧ್ಯಾಯಗಳು ಹಾಗೂ ಎಂಟು ಅನುಬಂಧಗಳಲ್ಲಿ ಮೂಡಿಬಂದಿದೆ. ವೈಯಕ್ತಿಕ ವಿಷಯವೇ ಆಗಿರುವಂತಹ ಆತ್ಮಕತೆಯಲ್ಲಿಯೂ ಸಾರ್ವತ್ರಿಕವಾಗಿ ಸಮಷ್ಠಿ ಹಿತದ ವಿಷಯಗಳೇ ತುಂಬಿದೆ ಎಂದರೆ ಆ ವ್ಯಕ್ತಿಯ ಶ್ರೇಷ್ಠತೆಯ ಮಟ್ಟ ಅರಿವಿಗೆ ಬರುತ್ತದೆ.ಜೀವನದ ಒಂದು ಹಂತದಲ್ಲಿ ಓದನ್ನು ನಿಲ್ಲಿಸಬೇಕಾಗಿ ಬಂದರೂ ಬಂದ ಸವಾಲನ್ನು ಯಶಸ್ವಿಯಾಗಿ ಎದುರಿಸಿ, ಪರಿಸ್ಥಿತಿ ಸರಿಯಾದ ಕೂಡಲೆ ಮತ್ತೆ ಕಾಲೇಜಿಗೆ ಸೇರಿ ತಮ್ಮ ಯೋಜಿತ ಗುರಿ ತಲುಪಿ ಯಶಸ್ಸು ಕಂಡ ಅಧ್ಯಾಪಕನೊಬ್ಬನ ಯಶಸ್ಸು ಕನಿಷ್ಠ ಮೂರು ಪೀಳಿಗೆಯ ಯಶಸ್ಸಾಗಿರುತ್ತದೆ ಎಂಬುದನ್ನು ಮರೆಯಬಾರದು ಎಂದು ಭಾವುಕರಾದರು.
ಪ್ರೊ ಎಚ್ ಆರ್ ರಾಮಕೃಷ್ಣರಾವ್ ಅವರಿಗೆ ಸನ್ಮಾನ
ಉದಯಭಾನು ಸಾಂಸ್ಕೃತಿಕ ಸಭಾಂಗಣದಲ್ಲಿ ಇಂದು ಉದಯಭಾನು ಕಲಾ ಸಂಘದವತಿಯಿಂದ ನಾಡಿನ ಹೆಸರಾಂತ ಭೌತವಿಜ್ಞಾನ ಪ್ರಾಧ್ಯಾಪಕರು, ವಿಜ್ಞಾನ ಲೇಖಕರು, ಸಂವಹನಕಾರರಾದ ಪ್ರೊ. ಎಚ್‌ಆರ್‌ಆರ್ ಅವರನ್ನು ಸನ್ಮಾನಿಸಲಾಯಿತು.
ಪ್ರೊ ಎಚ್ ಆರ್ ರಾಮಕೃಷ್ಣರಾವ್ ಅವರ ಬಗ್ಗೆ…
ಪ್ರೊ. ಎಚ್ ಆರ್ ರಾಮಕೃಷ್ಣರಾವ್ ನಾಡಿನ ಹೆಸರಾಂತ ಭೌತವಿಜ್ಞಾನ ಪ್ರಾಧ್ಯಾಪಕರು, ವಿಜ್ಞಾನ ಲೇಖಕರು, ಸಂವಹನಕಾರರಾದ ಪ್ರೊ.ಎಚ್‌ಆರ್‌ಆರ್ ಈ ಕ್ಷೇತ್ರದ ಬಹುದೊಡ್ಡ ಹೆಸರು. ಬರಹ, ಭೌತವಿಜ್ಞಾನ ಪಠ್ಯಪುಸ್ತಕ ರಚನೆ, ಸ್ನಾತಕೋತ್ತರ ಅಧ್ಯಯನಕ್ಕೆ ಪಠ್ಯಕ್ರಮ ವಿನ್ಯಾಸ, ಆಕಾಶವಾಣಿ, ದೂರದರ್ಶನಗಳಲ್ಲಿ ವಿಜ್ಞಾನ ಬೋಧನೆ ಹಾಗೂ ಖ್ಯಾತ ವಿಜ್ಞಾನಿಗಳ ಸಂದರ್ಶನ ನಡೆಸಿ ಉನ್ನತ ವಿಜ್ಞಾನವನ್ನು ಜನಮಾನಸಕ್ಕೆ ಹತ್ತಿರ ತಂದವರು. ಸಾಕ್ಷ್ಯಚಿತ್ರದಂತಹ ಮಾಧ್ಯಮಗಳಲ್ಲೂ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡವರು.ಕ್ರೈಸ್ಟ್ ಕಾಲೇಜ್ ಕನ್ನಡ ಸಂಘದ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಅಮೂಲ್ಯ ಸೇವೆ ಸಲ್ಲಿಸಿದವರು.
ದೇಶ-ವಿದೇಶಗಳಲ್ಲಿ ವಿಸ್ತ್ರತ ಪ್ರವಾಸ, ಚಾರಣ, ವಿವಿಧ ವಿಶ್ವವಿದ್ಯಾಲಯಗಳಿಗೆ ಭೇಟಿ, ನಿರಂತರ ಜ್ಞಾನಾರ್ಜನೆ ಅವರ ಬದುಕಿನ ಅವಿಭಾಜ್ಯ ಅಂಗ.ಮೇಲಿನೆಲ್ಲವುದರ ಜೊತೆಗೆ ರಾಮಕೃಷ್ಣರಾವ್ ಅವರು ಒಬ್ಬ ಅತ್ಯುತ್ತಮ ಪತಿ, ತಂದೆ, ಬಂಧು, ಸ್ನೇಹಿತ ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಮಾನವೀಯ ಮೌಲ್ಯಗಳುಳ್ಳ ವ್ಯಕ್ತಿ. ದೇಶ-ವಿದೇಶಗಳಲ್ಲಿ ವಿಸ್ತ್ರತ ಪ್ರವಾಸ, ಚಾರಣ, ವಿವಿಧ ವಿಶ್ವವಿದ್ಯಾಲಯಗಳಿಗೆ ಭೇಟಿ, ನಿರಂತರ ಜ್ಞಾನಾರ್ಜನೆ ಅವರ ಬದುಕಿನ ಅವಿಭಾಜ್ಯ ಅಂಗ ಮೇಲಿನೆಲ್ಲವುದರ ಜೊತೆಗೆ ರಾಮಕೃಷ್ಣರಾವ್ ಅವರು ಒಬ್ಬ ಅತ್ಯುತ್ತಮ ಪತಿ, ತಂದೆ, ಬಂಧು, ಸ್ನೇಹಿತ ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಮಾನವೀಯ ಮೌಲ್ಯಗಳುಳ್ಳ ವ್ಯಕ್ತಿ.
ಕೋವಿಡ್ 19 ಮಾರ್ಗ ಸೂಚಿ ಕರ್ನಾಟಕ ಸರ್ಕಾರದ ಘನ ಆದೇಶದಂತೆ ಕಾರ್ಯಕ್ರಮವನ್ನು ಆಚರಿಸಲಾಯಿತು , ಕಾರ್ಯಕ್ರಮಕ್ಕೆ ಬರುವ ಎಲ್ಲರನ್ನು ತಪಾಸಣೆ ಮಾಡಿ ಕಾರ್ಯಕ್ರಮದ ಉದಯಭಾನು ಸಾಂಸ್ಕೃತಿಕ ಸಭಾಂಗಣದ ಒಳಗೆ ಬಿಡಲಾಯಿತು ಹಾಗು ವಿಶೇಷವಾದ ಕಷಾಯವನ್ನು ನೀಡಿ ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಸಂದೇಶವನ್ನು ರವಾನಿಸಲಾಯಿತು.
ಸನ್ಮಾನ ಪತ್ರ
ಡಾ.ಟಿ.ವಿ ರಾಜು ಅವರು ಗ್ರಂಥದ ಸಂಪಾದಕರಾದ ಡಾ.ವೈ.ಸಿ. ಕಮಲ, ಸುಮಂಗಲ ಮುಮ್ಮಿಗಟ್ಟಿ ಹಾಗು ಗ್ರಂಥ ನಿರೂಪಕ ವಿಜ್ಞಾನ, ಗಣಿತ ಹಾಗು ವನ್ಯ ಜೀವಿ ಸಂರಕ್ಷಣಾ ಶಿಕ್ಷಕರಾದ ನವೀನ್ ಕಲ್ಗುಂಡಿ ಅವರಿಗೆ ಸನ್ಮಾನ ಪತ್ರ ವಾಚನ ಮಾಡಿದರು.
ಅಮೆರಿಕಾದ ವಿಶ್ವವಿಖ್ಯಾತ ಕಂಪ್ಯೂಟರ್ ತಂತ್ರಜ್ಞಾನ ವಿಜ್ಞಾನಿ ಡಾ.ಎಸ್.ಎಸ್. ಅಯ್ಯಂಗಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಂಥದ ಸಂಪಾದಕರಾದ ಡಾ.ವೈ.ಸಿ.ಕಮಲ ಸಂಪಾದಕರ ಮಾತುಗಳನ್ನು ನುಡಿದರೆ ಕಾರ್ಯಕ್ರಮಕ್ಕೆ ಉದಯಭಾನು ಕಲಾ ಸಂಘದ ಗೌರವ ಕಾರ್ಯದರ್ಶಿ ಎಂ. ನರಸಿಂಹ ಸ್ವಾಗತಿಸಿದರು.
ನಿರೂಪಣೆಯನ್ನು ಶ್ರೀಮತಿ ಸಿ.ದಾಕ್ಷಾಯಿಣಿ ಹಾಗು ಶ್ರೀಮತಿ ಸುಗುಣ ಎಸ್ ಚಂದ್ರ ಅವರು ನಡೆಸಿಕೊಟ್ಟರೆ ಪ್ರಾರ್ಥನೆ ಮತ್ತು ಕರ್ನಾಟಕ ಭಾಗವತ ಗ್ರಂಥ ದಿಂದ ಆಯ್ದ ಎರಡು ಪದ್ಯಗಳನ್ನು ಶ್ರೀಮತಿ ಕ್ಷಮಾ ವಾಚನ ಮಾಡಿದರು. ಉದಯಭಾನು ಕಲಾಸಂಘದ ಸಹಾಯಕ ಕಾರ್ಯದರ್ಶಿ ಎಚ್. ಎಸ್. ಕಪಿನಯ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ವರಿಗೂ ವಂದನಾರ್ಪಣೆ ಸಲ್ಲಿಸಿದರು.
ಉದಯಬಾನು ಕಲಾ ಸಂಘದ ಬಗ್ಗೆ…
1965 ರಲ್ಲಿ ಪ್ರಾರಂಭವಾದ ಸಂಘವು 2024 ರಲ್ಲಿ ತನ್ನ ವಜ್ರ ಮಹೋತ್ಸವಕ್ಕೆ ಸಿದ್ಧವಾಗುತ್ತಿದೆ.ತಲಾ ಮೂರು ಅಂತಸ್ತುಗಳ ರಜತಮಹೋತ್ಸವ ನೆನಪಿನ ಕಟ್ಟಡ ಮತ್ತು ಸುವರ್ಣಮಹೋತ್ಸವದ ನೆನಪಿನ ಕಟ್ಟಡಗಳು ಸಂಘದ ಚಟುವಟಿಕೆಗಳಿಗೆ ಅವಕಾಶ ನೀಡಿವೆ.
ಉದಯಭಾನು ಕಲಾಸಂಘ ಅನೇಕ ಸಮಾಜಮುಖಿ ಮೇರು ಕೃತಿಗಳನ್ನು ಪ್ರಕಟಿಸಿದೆ ಬೆಂಗಳೂರು ದರ್ಶನ ೧೯೭೫,೨೦೦೫ ಹಾಗೂ ೨೦೧೬, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಸುವರ್ಣ ಪುಸ್ತಕ ಮಾಲಿಕೆ ಅಡಿಯಲ್ಲಿ 50 ಸಾಧಕರ 50 ಕೃತಿಗಳ ಪ್ರಕಟಣೆ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ 20 ಕೃತಿಗಳ ಪ್ರಕಟಣೆ ಹೀಗೆ ಒಟ್ಟು 107 ಹಸ್ತಗಳನ್ನು ಸುಮಾರು 30000 ಕ್ಕೂ ಹೆಚ್ಚು ಪುಟಗಳಲ್ಲಿ ಈ ಎಲ್ಲ ಕೃತಿಗಳು ಮೇರು ಕೃತಿಗಳಾಗಿ ಓದುಗರು ದಾಖಲಿಸಿದ್ದಾರೆ.
ಬೆಂಗಳೂರಿನ ಬಸವನಗುಡಿ ರಸ್ತೆಯ ಹೃದಯಭಾಗದಲ್ಲಿ ಉದಯಭಾನು ಕಲಾಸಂಘ ಆಟದ ಮೈದಾನವನ್ನು ರಕ್ಷಿಸಿ ಉಳಿಸಿ ಬೆಳೆಸಿ ಸುಮಾರು 100 ಕೋಟಿ ರೂಪಾಯಿಗಳು ಆಸ್ತಿಯನ್ನು ನಗರಪಾಲಿಕೆಗೆ ಒದಗಿಸಿದೆ. ಸಂಘದ ಪ್ರಾರಂಭದಿಂದಲೂ ಅಕ್ಷರ ಮತ್ತು ನಾಗರಿಕ ಆರೋಗ್ಯ ಪಾಲನೆಗೆ ಒತ್ತು ನೀಡಿ ಕೆಲಸ ಮಾಡುತ್ತಾ ಬಂದಿದೆ. ಅವಕಾಶ ವಂಚಿತ ಅಶಕ್ತ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಾಠಪ್ರವಚನ, ನಿಗದಿತ ವೇಳಾಪಟ್ಟಿಯಂತೆ ಹಿರಿಯ ವೈದ್ಯರಿಂದ ಸಲಹೆ ಹಾಗೂ ಔಷಧೋಪಚಾರ ಮತ್ತು ನೇತ್ರಾ, ಹೃದಯ, ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಶಿಕ್ಷಣದಲ್ಲಿ ಇಲ್ಲಿಯವರೆಗೆ ಸುಮಾರು ಮೂವತ್ತು ಸಾವಿರ ವಿದ್ಯಾರ್ಥಿಗಳು ಮತ್ತು ಆರೋಗ್ಯ ಪಾಲನೆಯಲ್ಲಿ 44 ಸಾವಿರ ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಸಾಮಾಜಿಕ ವಿಜ್ಞಾನಿಗಳು ಮತ್ತು ನಾಡಿನ ಹಿರಿಯರು ಉದಯಭಾನು ಕಲಾಸಂಘ ಒಂದು ಮುಕ್ತ ವಿಶ್ವವಿದ್ಯಾಲಯ.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಚಿತ್ರಗಳು: ವೆಂಕಟೇಶ್