ಬೀದರ – ಸರ್ಕಾರಿ ಜಮೀನಿನ ನಕ್ಷೆ ತಿರುಚಿ ಅಕ್ರಮವಾಗಿ ಬೇರೆಯವರಿಗೆ ಮಾರಿದ ಘಟನೆ ಬೀದರ್ ನಲ್ಲಿ ನಡೆದಿದೆ.
ಬೀದರ್ ನಗರದ ಹೊರವಲಯದಲ್ಲಿ ಕೆಇಬಿ ಲೇಔಟ್ ನ ಸರ್ವೆ ನಂಬರ್ 156/B ಜಾಗವನ್ನು ಪುಷ್ಪಾ ಅಲಿಯಾಸ್ ರೇಣುಕಾ ಸುಭಾಶ್ ಹೊನ್ನ ಎನ್ನುವರು ಸರ್ಕಾರಿ ಜಮೀನು ತಮ್ಮದು ಎಂದು ನಕಲು ನಕ್ಷೆ ಮಾಡಿ ಬೇರೆಯವರಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗೊಲ್ಮಾಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜಾಗವನ್ನು ಖರೀದಿಸಿದ ಅರ್ಶದ್ ಅಲಿ ಎಂಬುವರು ತಮ್ಮ ಜಾಗದಲ್ಲಿ ನಗರಸಭೆಯವರು ಬೇಲಿ ಹಾಕಿದ್ದನ್ನು ಕಂಡು ದಿಗ್ಭ್ರಾಂತರಾಗಿ ಈ ವಿಚಾರವಾಗಿ ನಗರಸಭೆಯವರನ್ನ ವಿಚಾರಿಸಿದಾಗ ಸರ್ಕಾರಿ ಜಮೀನು ನಕ್ಷೆ ನಕಲು ಮಾಡಿ ಮಾರಾಟ ಮಾಡಿ ಮೋಸ ಮಾಡಿದ ಘಟನೆ ಗೊತ್ತಾಗಿದೆ. ಇನ್ನು ಸಾಕಷ್ಟು ಕಡೆ ಇದೇ ರಿತಿ ಹಲವಾರು ಜನರಿಗೆ ಆ ಮಹಿಳೆ ವಂಚಿಸಿದ್ದಾಳೆ ಎನ್ನುವ ಗುಮಾನಿಗಳು ಕೇಳಿ ಬರುತ್ತಿವೆ. ಈ ಎಲ್ಲಾ ವಿಚಾರಗಳು ಬುಡಾ ಅಧ್ಯಕ್ಷ ಬಾಬು ವಾಲಿ ಅವರ ಗಮನಕ್ಕೆ ಇದ್ದರೂ ಕೈ ಕಟ್ಟಿ ಕುಳಿತಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇನ್ನು ರೇಖಾ ಸುಭಾಷ್ ಹೊನ್ನ ಎನ್ನುವವರು ಪ್ರಭಾವಿ ರಾಜಕಾರಣಿಯ ಸಂಬಂಧಿಕರು ಎನ್ನಲಾಗಿದೆ. ಸದ್ಯ ವಂಚನೆ ಕುರಿತು ಅರ್ಶದ್ ಅಲಿಯವರು ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.ಇತ್ತ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ಅಧಿಕಾರಿಗಳು ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿ ಸರ್ಕಾರಿ ಜಮೀನನ್ನು ತಮ್ಮ ಸುಪರ್ದಿಗೆ ತಗೆದುಕೊಳ್ಳುತ್ತಾರೋ ಅಥವಾ ಪ್ರಭಾವಿ ರಾಜಕಾರಣಿಗಳ ಸಂಬಂಧಿಕರು ಎಂದು ಅಷ್ಟಕ್ಕೆ ಕೈ ಬಿಟ್ಟು ಸುಮ್ಮನಾಗುತ್ತಾರೋ ಎಂದು ಕಾದು ನೋಡಬೇಕಿದೆ.
ಇನ್ನು ಪೊಲೀಸರು ಈ ವಂಚನೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸರ್ಕಾರಿ ಜಮೀನು ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಿದ್ದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಂಡು ನೊಂದವರಿಗೆ ನ್ಯಾಯ ಒದಗಿಸುತ್ತಾರಾ ಎನ್ನುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದ್ದು ಎಲ್ಲರ ಚಿತ್ತ ಈಗ ಜಿಲ್ಲಾ ಆಡಳಿತದತ್ತ ಹೊರಳಿದೆ. ಜಿಲ್ಲಾ ಆಡಳಿತ ಬಡವರ ಬಗ್ಗೆ ಕಾಳಜಿ ವಹಿಸುವುದೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ