ಸಿಂದಗಿ: ಹಸಿರೇ ಉಸಿರು ಎನ್ನುವ ಮಾತಿನಂತೆ ದಿನನಿತ್ಯದ ಬದುಕಿನಲ್ಲಿ ಹಸಿರು ಪರಿಸರ ಬೆಳೆಸುವ ಪಣದೊಂದಿಗೆ ಪರಿಸರ ನಮಗೆ ಅನಿವಾರ್ಯ, ನಾವು ಪರಿಸರಕ್ಕೆ ಅನಿವಾರ್ಯವಲ್ಲ ಎಂಬ ಸತ್ಯ ಅರಿತು ನಡೆಯಬೇಕು ಎಂದು ಆರ್ ಡಿ. ಪಾಟೀಲ ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಹೇಳಿದರು.
ಪಟ್ಟಣದ ನೇತಾಜಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗ ಹಮ್ಮಿಕೊಂಡಿದ್ದ 23 ನೇ ವಾರದ ಪರಿಸರ ಜಾಗೃತಿ ಆಂದೋಲನದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾವು ನಮ್ಮ ಹಾಗೂ ಮಕ್ಕಳ ಹುಟ್ಟುಹಬ್ಬಕ್ಕೆ ಸಾವಿರ ರೂಪಾಯಿ ಖರ್ಚು ಮಾಡುತ್ತೇವೆ ಮರುದಿನ ಅದನ್ನು ಮರೆತುಬಿಡುತ್ತೇವೆ. ಆದರೆ ಹತ್ತಾರು ವರ್ಷ ಬಾಳುವ ಸಸಿಯೊಂದನ್ನು ನಮ್ಮ ಹಾಗೂ ಮಕ್ಕಳ ಜನ್ಮದಿನದಂದು ನೆಟ್ಟು ಪೋಷಿಸಿ ಬೆಳೆಸಿದರೆ ಆ ಜನ್ಮದಿನ ಸಾರ್ಥಕವಾಗುತ್ತದೆ. ಸಸ್ಯ ನಮಗೆ ಗಾಳಿ ನೆರಳು ಹಣ್ಣುಗಳನ್ನು ಹಾಗೂ ಉರುವಲು ಕೊಡುವುದಲ್ಲದೆ ಆದರೆ ಶೇಕಡ 75ರಷ್ಟು ಔಷಧಿಗಳು ಸಸ್ಯ ಮೂಲಗಳಿಂದಲೇ ತಯಾರಾಗುತ್ತದೆ. ತನ್ನ ಆಹಾರವನ್ನು ತಾನೇ ತಯಾರಿಸಿಕೊಂಡು ಜೀವಿಗಳಿಗೆ ಆಹಾರ ಒದಗಿಸುವ ಅತ್ಯಮೂಲ್ಯ ಸಸ್ಯರಾಶಿಯನ್ನು ಉಳಿಸಿ ಬೆಳೆಸುವ ಹಾಗೂ ಅದರ ಮಹತ್ವವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ತಿಳಿಹೇಳಿ ಜಾಗೃತಿ ಮೂಡಿಸುವ ಕಾರ್ಯವನ್ನು ಶಾಲಾ-ಕಾಲೇಜುಗಳು ಮಾಡಬೇಕೆಂದು ಸಲಹೆ ನೀಡಿದರು.
ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ದಲಿಂಗ ಚೌದರಿ ಪ್ರಾಸ್ತಾವಿಕ ಮಾತನಾಡಿ, ಸಾಲುಮರದ ತಿಮ್ಮಕ್ಕ ನಮಗೆಲ್ಲ ಮಾದರಿ, ಮನೆಗೊಂದು ಮರ ಊರಿಗೊಂದು ವನ ಎನ್ನುವ ಹಾಗೆ ನಾವು ಸಸಿನೆಟ್ಟು ಊಟ ಮಾಡಿ ಕೈಗಳನ್ನು ಸಸಿಗಳ ಬುಡದಲ್ಲಿ ತೊಳೆದರೂ ಕೂಡಾ ಸಸ್ಯಗಳು ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಮಹಾದೇವಿ ಹಿರೇಮಠ, ಶಿಕ್ಷಕ ಎಸ್ ಎಸ್ ಗಡಂಚಿ, ಶಕುಂತಲಾ ಹಿರೇಮಠ, ವಿಜಯಲಕ್ಷ್ಮಿ ಮಠ, ಸಬಿಯಾ ಮರ್ತುರ, ಬಸವರಾಜ ಅಗಸರ,ಪ್ರಕಾಶ ರಾಗರಂಜಿನಿ, ಎಸ್ ಆರ್ ಪಾಟೀಲ, ಪರಶುರಾಮ ಪೂಜಾರಿ, ಅಭಿಷೇಕ ಚೌಧರಿ ಸೇರಿದಂತೆ ಹಲವರಿದ್ದರು.
ಶಿಕ್ಷಕ ಸಾಯಿಬಣ್ಣ ದೇವರಮನಿ ನಿರೂಪಿಸಿ ವಂದಿಸಿದರು.