ಮೂಡಲಗಿ: ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶ ಕಟ್ಟುವ ರೂವಾರಿಗಳಾಗಿರುವಾಗ ಸಿಕ್ಕ ಅವಕಾಶಗಳಲ್ಲೇ ಸರಕಾರಿ ಶಾಲೆಯಲ್ಲಿ ಸಿಗುವ ಹಲವಾರು ಸೌಲಭ್ಯಗಳನ್ನು, ಕಲಿಕೆಯನ್ನು ಉಪಯೋಗಿಕೊಂಡು ಮುಂದಿನ ಭವಿಷ್ಯ ಉತ್ತಮವಾಗಿ ಕಟ್ಟಿಕೊಳ್ಳೋಣ ಎಂದು ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ಸಪ್ನಾ ಹರಿಜನ ಹೇಳಿದರು.
ಅವರು ತುಕ್ಕಾನಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜವಾಹರಲಾಲ್ ನೆಹರೂರವರ ಜನ್ಮ ದಿನದ ಅಂಗವಾಗಿ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಪಾರುಪತ್ಯವಹಿಸಿದ್ದ ಹಳ್ಳಿ ಸಂಸ್ಕೃತಿ ಹಳ್ಳಿ ಊಟ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರಕಾರಿ ಶಾಲೆಯಲ್ಲಿ ಗುಣಮಟ್ಟ ಶಿಕ್ಷಣದೊಂದಿಗೆ ಸಂಪೂರ್ಣ ಉಚಿತವಾಗಿ ಕಲಿಕಾ ಸೌಲಭ್ಯಗಳು, ಅಕ್ಷರದಾಸೋಹ, ಕ್ಷೀರ ಬಾಗ್ಯ, ಇಂತಹ ಹಲವಾರು ಕಾರ್ಯಕ್ರಮಗಳನ್ನು ಗುರುಗಳ ಮಾರ್ಗದರ್ಶನ ಪಡೆದುಕೊಂಡು ನಾವೆಲ್ಲ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಳ್ಳೋಣ ಎಂದರು.
ಮುಖ್ಯ ಅತಿಥಿಗಳಗಿ ಆಗಮಿಸಿದ್ದ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಒಂದಿನ ಮಕ್ಕಳ ದಿನಾಚರಣೆಯಲ್ಲಿ ಮಕ್ಕಳೇ ಸಾರಥ್ಯ ವಹಿಸಿರುವುದು ಹಾಗೂ ಹಳ್ಳಿ ಸಂಸ್ಕೃತಿ ಹಳ್ಳಿ ಊಟ ಎಂಬ ಶೀರ್ಷಿಕೆಯಡಿ ಇಲ್ಲಿ ಮಕ್ಕಳಿಗಾಗಿ ವಿವಿಧ ಬಗೆಯ ಭಕ್ಷ್ಯ ಭೋಜನಗಳನ್ನು ತಯಾರಿಸಿ ಬಡ ಮಕ್ಕಳ ಒಡಲನ್ನು ತುಂಬಿಸಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವದರಿಂದ ಇಲ್ಲಿನ ಮಕ್ಕಳು ಭಾಗ್ಯವಂತರು ಎಂದು ಹೇಳಿದರು.
ಇಲ್ಲಿನ ಸರಕಾರಿ ಯೋಜನೆಗಳಾದ ಅಕ್ಷರದಾಸೋಹ, ಕ್ಷೀರ ಭಾಗ್ಯ, ವಿದ್ಯಾಗಮ, ವಠಾರ ಶಾಲೆ, ಬಯಲು ಮುಕ್ತ ಶೌಚಾಲಯ ಮುಂತಾದ ಸರಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಹೆಚ್ಚಿಸಲಾಗಿದೆ ಎಂದರು.
ಮತ್ತೋರ್ವ ಅತಿಥಿ ಗೋಕಾಕ ತಾಲೂಕಾ ಅಕ್ಷರದಾಸೋಹದ ನಿರ್ದೇಶಕರಾದ ಅಶೋಕ ಮಲಬನ್ನವರ ಮಾತನಾಡಿ, ಸರಕಾರಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಸರಕಾರದ ಉದ್ದೇಶ ಸಾಕಾರಗೊಳ್ಳುವದು ಎಂಬುದಕ್ಕೆ ಈ ಶಾಲೆಯ ಅಕ್ಷರದಾಸೋಹ ಉತ್ತಮ ಉದಾಹರಣೆಯಾಗಿದೆ ಎಂದರು. ಇಲ್ಲಿ ಮದ್ಯಾಹ್ನದ ಬಿಸಿಯೂಟ ಕೇವಲ ಅನ್ನ ಸಾಂಬಾರಕ್ಕೆ ಸೀಮಿತವಾಗದೇ ಬಡ ವಿದ್ಯಾರ್ಥಿಗಳು ಬಯಸಿದ ವಿವಿಧ ರೀತಿಯ ಆಹಾರವನ್ನು ಮಕ್ಕಳಿಗೆ ಕೊಡುವುದರ ಮಖಾಂತರ ಗುರುವಿನ ಸಾರ್ಥಕತೆಯನ್ನು ಮೆರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಗುರುಗಳಾದ ಎ.ವ್ಹಿ.ಗಿರೆಣ್ಣವರ ಕಲ್ಲೋಳಿ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಕೆ. ಉಪ್ಪಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಉಪನಾಯಕ ಕುಮಾರ ಬಾಳೇಶ ದೇಮಣ್ಣವರ ವಹಿಸಿದ್ದರು. ಕಾರ್ಯಕ್ರಮದ ಎಲ್ಲ ನಿರ್ವಹಣೆಯನ್ನು ವಿದ್ಯಾರ್ಥಿಗಳೇ ಮಾಡಿದರು.
ಈ ಸಂದರ್ಭದಲ್ಲಿ ಸುಮಾರು 750 ವಿದ್ಯಾರ್ಥಿಗಳಿಗೆ ಗೋವಿನಜೊಳದ ಕಡಕ್ ರೊಟ್ಟಿ, ಬದನೇಕಾಯಿ ಪಲ್ಯ, ಹೆಸರುಕಾಳು ಪಲ್ಯ, ಗುರೆಳ್ಳ ಹಿಂಡಿ, ಅಗಸಿ ಚಟ್ನಿ, ಸೇಂಗಾ ಚಟ್ನಿ, ಬಳ್ಳೋಳಿ ಖಾರ, ಮೊಸರುಗಾಯಿ ಪಲ್ಯ, ಬದಾಮಪುರಿ, ಜೀರಾ ರೈಸ್ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹಾದೇವ ಗೋಮಾಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್, ಶಂಕರ ಲಮಾಣಿ, ಶೀಲಾ ಕುಲಕರ್ಣಿ, ಕೆ.ಆರ.ಭಜಂತ್ರಿ, ಸಂಗೀತಾ ತಳವಾರ, ಎಮ್.ಕೆ.ಕಮ್ಮಾರ, ಎಮ್.ಡಿ. ಗೋಮಾಡಿ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಪಾಲ್ಗೊಂಡಿದ್ದರು.