ನೆರೆಯ ಬಾಂಗ್ಲಾ ದೇಶದಲ್ಲಿ ಉಗ್ರರ ಅಟ್ಟಹಾಸ ನಡೆದಿದೆ. ನಿಧಾನವಾಗಿ ಪಾಕಿಸ್ತಾನದಂತೆ ಬಾಂಗ್ಲಾದೇಶವೂ ಮೂಲಭೂತವಾದಿಗಳ ಪ್ರಾಬಲ್ಯಕ್ಕೆ ತುತ್ತಾಗುತ್ತಿದೆ. ಅಲ್ಲಿನ ಹಿಂದೂಗಳ ಸ್ಥಿತಿಯಂತೂ ಕಳವಳಕಾರಿಯಾಗಿದೆ. ಹತ್ಯೆ, ಕನ್ಯಾ ಅಪಹರಣ, ದೌರ್ಜನ್ಯ ಎಲ್ಲವೂ ಎಗ್ಗಿಲ್ಲದೇ ಸಾಗಿದೆ. ಹಿಂದೂಗಳು ವಲಸೆ ಬರುತ್ತಿದ್ದಾರೆ. ಜೀವ ಉಳಿಸಿಕೊಳ್ಳಲು ತಮ್ಮ ಆಸ್ತಿಪಾಸ್ತಿ ಬಿಟ್ಟು ಬರುತ್ತಿರುವ ಅವರ ಕುರಿತು ನಮ್ಮ ಮಾಧ್ಯಮಗಳಾಗಲೀ ಬುದ್ಧಿ ಜೀವಿಗಳಾಗಲೀ ಯಾವುದೇ ಸಹಾನುಭೂತಿ ತೋರುತ್ತಿಲ್ಲ.
ಬಾಂಗ್ಲಾದೇಶಕ್ಕೆ ಈಚೆಗೆ ಲೇಖಕ ಆಗುಂಬೆ ನಟರಾಜ್ ಹೋಗಿ ಬಂದಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಹಿಂದೂ ಮುಸ್ಲಿಂ ಗಲಭೆಯಾಗಿ ಹಿಂದೂಗಳ ಮಾರಣ ಹೋಮವಾದಾಗ ಗಾಂಧೀಜಿ ನೌಖಾಲಿಯಲ್ಲಿ ಪಾದಯಾತ್ರೆ ಮಾಡಿ ಹಿಂದೂ ಮುಸ್ಲಿಂ ಐಕ್ಯತೆಗೆ ಹೆಣಗಿದ್ದರು. ಆ ನೌಖಾಲಿಗೊಂದು “ಮರುಯಾತ್ರೆ” ಎಂಬ ಕೃತಿ ಆಗುಂಬೆ ರಚಿಸಿದ್ದಾರೆ. ಬಾಂಗ್ಲಾದೇಶದ ಸ್ಥಿತಿಗತಿ ತಿಳಿದುಕೊಳ್ಳಲು ಈ ಪುಸ್ತಕ ಸಹಕಾರಿಯಾಗಿದೆ. ನೌಖಾಲಿಯಲ್ಲಿ ಹತ್ಯಾಕಾಂಡ ನಡೆದಿದ್ದು ೧೯೪೬ರಲ್ಲಿ. ಬಹುಸಂಖ್ಯಾತರಾಗಿದ್ದ ಮುಸ್ಲೀಮರು ಅಲ್ಪಸಂಖ್ಯಾತರಾಗಿದ್ದ ಹಿಂದೂಗಳನ್ನು ಅಕ್ಷರಶಃ ಲೂಟಿ ಮಾಡಿದರು. ಕೊಲೆ, ಅತ್ಯಾಚಾರ, ದರೋಡೆ, ಬೆಂಕಿ ಹೀಗೆ ಹಿಂದೂಗಳ ಮೇಲೆ ಎಲ್ಲಾ ಅಸ್ತ್ರಗಳನ್ನೂ ಆಗ ಪ್ರಯೋಗಿಸಲಾಗಿತ್ತು.
ಸ್ವಾತಂತ್ರ್ಯದ ಮುನ್ನಾ ದಿನಗಳಲ್ಲಿ ಜಿನ್ನಾ ಸೇರಿದಂತೆ ಪ್ರತ್ಯೇಕವಾದಿ ನಾಯಕರು ಅಹಿಂಸೆಯಲ್ಲಿ ನಮಗೆ ನಂಬಿಕೆ ಇಲ್ಲ ಎಂದಿದ್ದರು. ನೇರ ಕ್ರಿಯೆಗೆ ಅವರು ಕರೆ ಕೊಟ್ಟಾಗ ಮುಸ್ಲೀಮರಿಂದ ಹಿಂದೂಗಳ ಕಗ್ಗೊಲೆ ಅವ್ಯಾಹತವಾಗಿ ನಡೆಯಿತು. ಶಾಂತಿ ಮಂತ್ರ ಜಪಿಸುತ್ತಿದ್ದ ಕಾಂಗ್ರೆಸ್‌ನಿಂದ ಹಿಂದೂಗಳ ರಕ್ಷಣೆ ಸಾಧ್ಯವಾಗಲಿಲ್ಲ. ಮುಸ್ಲಿಂ ಬಾಹುಳ್ಯವಿರುವಲ್ಲಂತೂ ಭೀಕರ ನರಮೇಧ ನಡೆಯಿತು. ಬಂಗಾಳದಲ್ಲಿ (ಅವಿಭಜಿತ) ಅಧಿಕಾರದಲ್ಲಿದ್ದುದೇ ಮುಸ್ಲಿಂ ಲೀಗ್. ಅಲ್ಲಿನ ಮಂತ್ರಿ ಸುಹ್ರಾವರ್ದಿ ಕಲ್ಕತ್ತಾದ ಎಲ್ಲಾ ಠಾಣೆಗಳ ಹಿಂದೂಗಳನ್ನು ಬೇರೆಡೆ ವರ್ಗಾಯಿಸಿ ಕಗ್ಗೊಲೆಯ ಸಿದ್ಧತೆ ನಡೆಸಿದ್ದ. ಆಗಸ್ಟ್ ೧೬ರಂದು ಸಾರ್ವತ್ರಿಕ ರಜಾ ಘೋಷಿಸಿ ಮುಸ್ಲಿಂ ಲೀಗ್ ಸದಸ್ಯರಿಗೆ ಮಾರಕಾಸ್ತ್ರ ಒದಗಿಸಲಾಯಿತು. ೧೫ರ ಮಧ್ಯರಾತ್ರಿಯಿಂದಲೇ ನರಮೇಧ ಆರಂಭವಾಯಿತು. ಮೂರು ದಿನಗಳ ಪರ್ಯಂತ ಸರ್ಕಾರದ ನೆರವಿನಿಂದ ಭೀಕರ ರಕ್ತಪಾತ ನಡೆಸಲಾಯಿತು. ೩ನೇ ದಿನ ಸೇನೆ ಬರುವ ತನಕ ಪೊಲೀಸರು ಈ ನರಮೇಧ ಮತ್ತು ಅತ್ಯಾಚಾರಕ್ಕೆ ರಕ್ಷಣೆ ಒದಗಿಸಿದ್ದರು. ಕಲ್ಕತ್ತಾದಲ್ಲಿ ಎಲ್ಲೆಂದರಲ್ಲಿ ಹೆಣಗಳೇ. ಸಂಸ್ಕಾರ ಮಾಡಲಸಾಧ್ಯವಾದಷ್ಟು ಶವಗಳು. ಮುಖ್ಯಮಂತ್ರಿ ಸುಹ್ರಾವರ್ದಿಯ ಯೋಜನೆ ಅತ್ಯಂತ ಯಶಸ್ವಿಯಾಗಿ ಜಾರಿಯಾಗಿತ್ತು. ಮೂರು ದಿನದಲ್ಲಿ ಐದಾರು ಸಾವಿರ ಜನರನ್ನು ಕಡಿದು ಕಗ್ಗೊಲೆ ಮಾಡಲಾಗಿತ್ತು. ಗಾಂಧೀಜಿಗೆ ತಮ್ಮ ಹಿಂದೂ ಮುಸ್ಲಿಂ ಸಹೋದರತ್ವ ಮತ್ತು ಅಹಿಂಸೆಯ ವಿಫಲತೆ ಸ್ಪಷ್ಟವಾಗಿ ಅರಿವಾದರೂ ಕಟ್ಟಕಡೆಯ ಹಿಂದೂ ಸಹ ಸತ್ತರೆ ಅದು ಭಾರತದ ಮೋಕ್ಷ ಹಾಗೂ ಇಸ್ಲಾಂನ ಶುದ್ಧೀಕರಣ ಎಂಬ ತಲೆಕೆಟ್ಟ ಹೇಳಿಕೆ ನೀಡಿದರು.
ಸೆಪ್ಟೆಂಬರ್‌ನಲ್ಲಿ ತಮ್ಮ ಮೇಲಾಗಿದ್ದ ಭೀಕರ ಅತ್ಯಾಚಾರದ ವಿರುದ್ಧ ಹಿಂದೂಗಳು ಸೇಡು ತೀರಿಸಿಕೊಂಡರು. ಗಾಂಧೀಜಿಯ ಶಾಂತಿ ಮಂತ್ರ ಅಲ್ಲಿ ಕೆಲಸ ಮಾಡಲಿಲ್ಲ. ಈ ಪ್ರತಿಕಾರದಿಂದ ತಪ್ಪಿಸಿಕೊಂಡು ನೌಖಾಲಿಗೆ ಓಡಿ ಹೋದ ಮುಸ್ಲಿಮರು ತಮ್ಮ ಮೇಲಾದ ಹಿಂಸೆಗೆ ಬಣ್ಣ ಕಟ್ಟಿ ಹೇಳಿದರು. ನೌಖಾಲಿಯಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಬಹುಸಂಖ್ಯಾತರು ಸೇಡು ತೀರಿಸಿಕೊಂಡರು. ೨ನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಮುಸ್ಲಿಂ ನಿವೃತ್ತ ಸೈನಿಕರೂ ಈ ಹತ್ಯಾಕಾಂಡದ ನೇತೃತ್ವ ವಹಿಸಿದ್ದರಾಗಿ ಮತಾಂತರ, ಗೋಮಾಂಸ ಭಕ್ಷಣೆ, ಕೊಲೆ, ಅತ್ಯಾಚಾರ ಮೇರೆ ಮೀರಿ ನಡೆಯಿತು. ೪೦ ಸಾವಿರ ಜನ ಕಲ್ಕತ್ತಾಕ್ಕೆ ಪಲಾಯನ ಮಾಡಿ ಜೀವ ಉಳಿಸಿಕೊಂಡರು. ಅಲ್ಲಿ ಉಳಿದ ಎಲ್ಲಾ ಹಿಂದೂಗಳ ಕಗ್ಗೊಲೆಯಾಯಿತು. ಮದುವೆ ವಯಸ್ಸಿನ ಹುಡುಗಿಯರನ್ನು ಕೆಡಿಸಿ ಕಂಡವರಿಗೆ ದಾನ ನೀಡಲಾಯಿತು. ತನ್ನ ಕಣ್ಣೆದುರೇ ಹೊತ್ತಿ ಉರಿಯುತ್ತಿದ್ದ ಹಿಂಸೆಯನ್ನು ಗಾಂಧೀಜಿ ನಿಸ್ಸಹಾಯಕರಾಗಿ ನೋಡಬೇಕಾಯಿತು.
ಆದರೂ ಅವರೇನಾದರೂ ಮಾಡಬೇಕಿತ್ತು. ಅದಕ್ಕಾಗೇ ಅವರು ಪಾದಯಾತ್ರೆಯ ನಿರ್ಧಾರ ಮಾಡಿದ್ದು. ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಇತ್ತವರ ವರ್ತನೆ. ಅಸಹಾಯಕತೆ ಮತ್ತು ತೀವ್ರ ನೋವು ಅವರ ಚಿಂತನಾ ಶಕ್ತಿಯನ್ನೇ ಕುಗ್ಗಿಸಿತ್ತು. ಪವಾಡ ನಿರೀಕ್ಷಿಸದಿದ್ದರೂ ಅವರು ಸೌಹಾರ್ದತೆಗಾಗಿ ನೌಖಾಲಿಯ ಹಳ್ಳಿ ಹಳ್ಳಿಗಳಲ್ಲೂ ಪಾದಯಾತ್ರೆಗೆ ನಿರ್ಧರಿಸಿದರು.
೧೯೪೬ರ ನವೆಂಬರ್ ೬ರಂದು ಬಂಗಾಳ ಸರ್ಕಾರದ ವಿಶೇಷ ರೈಲಿನಲ್ಲಿ ಗಾಂಧೀಜಿ ನೌಖಾಲಿ ಯಾತ್ರೆ ಆರಂಭವಾಗುತ್ತದೆ. ನೌಖಾಲಿಯಲ್ಲಿ ಇಂದು ಆಗಿದ್ದು ನಾಳೆ ಪಾಕಿಸ್ತಾನ ರಚನೆಯಾದರೆ ನಮ್ಮ ಪಾಡು ಸೂಚಿಸುತ್ತದೆ ಎಂದು ಹಿಂದೂಗಳು ಪ್ರಶ್ನಿಸಿದರೆ ಏನು ಉತ್ತರಿಸಲಿ ಎಂದು ಮುಸ್ಲಿಂ ನಿಯೋಗಕ್ಕೆ ಗಾಂಧೀಜಿ ಪ್ರಶ್ನಿಸಿದರು. ಖುರಾನ್ ಬಲವಂತ ಮತಾಂತರ ಸಲ್ಲದೆಂದಿದ್ದರೂ ಇಲ್ಲಿ ನಡೆದಿದ್ದು ಏನು ಎಂಬ ಅವರ ಪ್ರಶ್ನೆ ಬಾಯಲ್ಲೇ ಉಳಿಯಿತು.ಹಿಂದೂಗಳಿಗ ಮಾತ್ರ ನೀವು ಹೇಡಿಗಳಂತೆ ವಲಸೆ ಹೋಗಬೇಡಿ ಎಂದು ಗಾಂಧಿ ಹೇಳುತ್ತಾ ಹೊರಟರು. ಅಹಿಂಸಾತ್ಮಕವಾಗಿ ಸಾಯುವುದು ಶ್ರೇಯಸ್ಕರ ಎಂಬ ಅವರ ಮಾತು ಗಾಯದ ಮೇಲೆ ಉಪ್ಪು ಸುರಿದಂತಿತ್ತು.
ಗಾಂಧೀಜಿ ಗೋಪಾರಿ ಭಾಗ್ ಎಂಬ ಹಳ್ಳಿಯಿಂದ ಪಾದಯಾತ್ರೆ ಆರಂಭಿಸಿದ್ದು ಅಲ್ಲಿನ ಎಲ್ಲಾ ಹಿಂದೂಗಳ ಮನೆಯೂ ಬೆಂಕಿಗಾಹುತಿಯಾಗಿತ್ತು. ಒಟ್ಟು ೨೪ ಗಂಡಸರಲ್ಲಿ ೨೧ ಜನರ ಹತ್ಯೆಯಾಗಿತ್ತು. ದತ್ತಾಪಾರ ಎಂಬಲ್ಲಿ ೫ ಸಾವಿರ ನಿರಾಶ್ರಿತರು ಹಂದಿಗಳಂತೆ ಬದುಕಿದ್ದರು. ಅವರನ್ನೆಲ್ಲಾ ಹಳ್ಳಿಗೆ ಧೈರ್ಯದಿಂದ ಹಿಂತಿರುಗಿ ಎಂದ ಗಾಂಧಿ ಮಾತು ಕೇಳಲು ಯಾರು ಸಿದ್ಧರಿರಲಿಲ್ಲ. ಧೈರ್ಯವಾಗಿ ಅತ್ಯಾಚಾರಕ್ಕೋ ಕೊಲೆಗೋ ಒಡ್ಡಿಕೊಳ್ಳಿ ಎಂಬ ಅವರ ಉಪದೇಶ ವೈಪರೀತ್ಯದ ಅತಿರೇಕವೆನಿಸಿತ್ತು.
ಗಾಂಧೀಜಿ ಯಾವ ಮುಸ್ಲಿಮರ ಮನ ಒಲಿಸಿ ಸಹೋದರತ್ವ ಸಾಧಿಸುವುದಾಗಿ ಪಾದಯಾತ್ರೆ ಆರಂಭಿಸಿದ್ದರೋ ಆ ಮುಸ್ಲೀಮರೇ ಅವರ ಪಾದಯಾತ್ರೆ ವಿರೋಧಿಸಿದರು. ಅವರ ವಿರುದ್ಧ ಅಸಭ್ಯ ಕರಪತ್ರಗಳನ್ನು ಹಂಚಲಾಯಿತು. ಅವರು ಸಾಗುವ ಮಾರ್ಗದಲ್ಲಿ ಅಮೇದ್ಯವನ್ನು ಸುರಿದಿಡಲಾಗುತ್ತಿತ್ತು. ಜನ ಅವರ ಪಾದಯಾತ್ರೆ ಬರುತ್ತಿದ್ದಂತೆ ಬಾಗಿಲು ಹಾಕಿಕೊಂಡೋ, ಧಿಕ್ಕಾರ ಕೂಗಿಯೋ ಅವರನ್ನು ಎದುರುಗೊಳ್ಳುತ್ತಿದ್ದರು. ಅವರ ಉಪದೇಶ ಉಪನ್ಯಾಸ ಏನಿದ್ದರೂ ಸಂತ್ರಸ್ಥ ಪೀಡಿತ ಹಿಂದೂಗಳು ಮಾತ್ರ ಕೇಳುವಂತಾಯ್ತು. ಹೈಮ್‌ಚಲ್ ಎಂಬ ಹಳ್ಳಿಯಲ್ಲಿ ಅವರ ಪಾದಯಾತ್ರೆ ಅಂತ್ಯಗೊಳಿಸಿದರು. ಗಾಂಧೀಜಿ ಮೊಮ್ಮಗಳು ಮನುಗಾಂಧಿ ಮುಸ್ಲಿಂ ವೃದ್ಧೆಯೊಬ್ಬಳ ಮನೆಗೆ ಹೋದಾಗ ಆಕೆ ಮೀನು ರೊಟ್ಟಿ ನೀಡಿ ಸತ್ಕರಿಸಿದಳು. ತಾನು ಸಸ್ಯಾಹಾರಿ ಎಂದು ಮನುಗಾಂಧಿ ಹೇಳಿದ್ದೇ ಮಹಿಳೆ ಕೆರಳಲು ಕಾರಣವಾಯಿತು. ಹಿಂದೂಗಳನ್ನು ನಂಬಬಾರದೆಂದು ಆ ವೃದ್ಧೆ ಕಿರುಚಾಡಿದಳು. ಪೂರ್ವ ಬಾಂಗ್ಲಾದ ಬಹುಸಂಖ್ಯಾತ ಮುಸಲ್ಮಾನರ ಮನೋಸ್ಥಿತಿಯನ್ನು ಈ ವೃದ್ಧೆ ಪ್ರತಿನಿಧಿಸುತ್ತಿದ್ದಳು. ಇತ್ತ ನೌಕಾಲಿ ಯಾತ್ರೆಯಲ್ಲಿರುವಾಗಲೇ ಅತ್ತ ಬಿಹಾರದಲ್ಲಿ ಹಿಂದೂ ಮುಸ್ಲಿಂ ಗಲಭೆ ಪ್ರಜ್ವಲಿಸಿತು. ಶಾಂತಿ ಮಂತ್ರದ ಪೊಳ್ಳುತನ ದೇಶಕ್ಕೇ ಅರಿವಾದರೂ ಗಾಂಧೀಜಿ ಸೋಲೊಪ್ಪಿಕೊಳ್ಳದಿದ್ದುದೇ ದುರಂತ.
ಆಗುಂಬೆ ನಟರಾಜ್ ಬಾಂಗ್ಲಾದೇಶದಲ್ಲಿ ತಾವು ಅನುಭವಿಸಿದ್ದನ್ನು ನೌಕಾಲಿ ಯಾತ್ರೆ ಮಾಡಿದ್ದನ್ನು ಅಲ್ಲಿನ ಸಾಮಾನ್ಯ ಜನಜೀವನವನ್ನೂ ಕೃಷಿಯನ್ನೂ ಸೊಗಸಾಗಿ ವರ್ಣಿಸಿದ್ದಾರೆ. ಬುರ್ಕಾ ಹಾಕದೇ ಕಾಲೇಜುಗಳಲ್ಲಿ ಬಿಂದಿ ತೊಟ್ಟ ಯುವತಿಯರನ್ನು ಕಂಡು ಡಾಕಾದಲ್ಲಿ ಅವರಿಗೆ ಕಕ್ಕಾಬಿಕ್ಕಿಯಾಗುತ್ತದೆ. ಆದರೆ ಬಿಂದಿ ಆ ಯುವತಿಯರ ಫ್ಯಾಶನ್ ಎಂದು ಮಾರ್ಗದರ್ಶಿ ವಿವರಿಸುತ್ತಾನೆ. ಬಸ್‌ನಲ್ಲಿ ಸಹ ಪ್ರಯಾಣಿಕನೊಬ್ಬ ಇವರಿಗೆ ಮತಾಂತರದ ಪ್ರೋತ್ಸಾಹ ಮಾಡುವ ಸ್ವಾರಸ್ಯಕರ ಪ್ರಸಂಗವೂ ನಡೆಯುತ್ತದೆ. ೭೦ರ ಇಳಿ ವಯಸ್ಸಿನಲ್ಲಿ ಏಕಾಂಗಿಯಾಗಿ ಡಾಕಾಕ್ಕೆ ತೆರಳಿ ಹೋಟೆಲ್‌ಗಳನ್ನು ಹುಡುಕುತ್ತಾ ಬಸ್‌ಗಳಲ್ಲಿ ಸಂಚರಿಸುತ್ತಾ ಅವರು ಸಾಹಸ ಮೆರೆದಿದ್ದಾರೆ. ಬಾಂಗ್ಲಾದ ಪ್ರವಾಸ ಕಥನವಾಗೂ ಈ ಪುಸ್ತಕ ಯಶಸ್ವಿಯಾಗಿದೆ.
ಪುಸ್ತಕದ ೨ನೇ ಭಾಗವನ್ನು ನಟರಾಜ್ ಗಾಂಧೀಜಿಯನ್ನು ವಿಶ್ಲೇಷಿಸಲೇ ಮೀಸಲಿಟ್ಟಿದ್ದಾರೆ. ಗಾಂಧೀಜಿಯವರ ಕುರಿತು ಗೌರವವಿಟ್ಟೇ ಅವರ ತತ್ವಗಳ ವಿಫಲತೆಯನ್ನು ನಟರಾಜ್ ಉದ್ದಕ್ಕೂ ಹೇಳುತ್ತಾ ಸ್ವಾತಂತ್ರ್ಯಪೂರ್ವದ ಅನೇಕ ಘಟನೆಗಳನ್ನು ನಮ್ಮ ಮುಂದೆ ತರುತ್ತಾರೆ. ಇದಕ್ಕಾಗಿ ಅವರಿವರಿಂದ ಹಿಡಿದು ಅನೇಕರ ಪುಸ್ತಕಗಳನ್ನವರು ಅಧ್ಯಯನ ಮಾಡಿದ್ದಾರೆ. ಓದಿದ್ದು ಜಾಸ್ತಿಯಾಗಿದ್ದರಿಂದ ಕೆಲಬಾರಿ ಬರೆದದ್ದು ತಾಳಮೇಳವಿಲ್ಲದಂತಾಗಿದೆಯಾದರೂ ತುಂಬಾ ವಿಷಯ ಅರಿವಾಗುತ್ತದೆ. ಈ ಅಧ್ಯಾಯವಿಲ್ಲದಿದ್ದರೂ ಪುಸ್ತಕದ ಉದ್ದೇಶ ವಿಫಲವಾಗುತ್ತಿರಲಿಲ್ಲ.
ದೇಶದ ಸರ್ವೋತ್ತಮ ಅಭಿವೃದ್ಧಿಗೆ ರಕ್ಷಣೆಗೆ ಗಾಂಧೀಜಿಯ ತತ್ವ ಎಷ್ಟೇ ಉದಾತ್ತವಾಗಿದ್ದರೂ ಅಮೋಘವಾಗಿದ್ದರೂ ಕಾರ್ಯರೂಪದಲ್ಲಿ ಆಚರಣೆಗೆ ತರುವಲ್ಲಿ ಸೋಲುತ್ತದೆ. ಯಾವ ರೀತಿಯಲ್ಲಿ ಹಿಂದೂಗಳು ತಮ್ಮ ಎಲ್ಲಾ ದೇವರಿಗೆ ಶಸ್ತ್ರಾಸ್ತ್ರಗಳನ್ನು ನೀಡಿ ತಾವು ನಿಶ್ಶಸ್ತ್ರರಾಗಿ ನಿಂತು ತಮ್ಮನ್ನು ಕಾಪಾಡಬೇಕೆಂದು ಬೇಡಿಕೊಂಡು ಪರಕೀಯರಿಗೆ ಗುಲಾಮರಾದರೋ ಅದೇ ರೀತಿ ಗಾಂಧೀಜಿ ಅಹಿಂಸಾತತ್ವವನ್ನು ಬೋಧಿಸಿ ಪರರ ಆಕ್ರಮಣ, ಹಿಂಸಾಚಾರ, ಅತ್ಯಾಚಾರ ಅನಾಚಾರಗಳಿಗೆ ಧೈರ್ಯದಿಂದ ತುತ್ತಾಗುವಂತೆ ಸಾರಿದರು. ಗಾಂಧೀಜಿ ಹುತಾತ್ಮರಾದರು. ಅವರ ಅಹಿಂಸಾ ತತ್ವ ಅಮರವಾಗಿದೆ. ಕೇವಲ ಗ್ರಂಥಗಳಲ್ಲಿ ಅನುಸರಿಸಲಾಗದ ಆಚರಿಸಲಾಗದ ಅಮೋಘ ತತ್ವವಾಗಿ ಉಳಿದಿದೆ ಎಂದು ಆಗುಂಬೆ ನಟರಾಜ್ ತೀರ್ಪು ನೀಡಿ ಬಿಟ್ಟಿದ್ದಾರೆ. ಒಪ್ಪುವುದು ಬಿಡುವುದು ನಿಮ್ಮ ಸ್ವಾತಂತ್ರ್ಯ.