ಸಿಂದಗಿ: ಪಟ್ಟಣದಲ್ಲಿ ಸ್ಥಾಪನೆಗೊಂಡ ಚೆನ್ನವೀರ ಸ್ವಾಮೀಜಿ ರೈತ ಉತ್ಪಾದಕರ ಕೇಂದ್ರ, ರೈತ ಉತ್ಪಾದಕರ ಕಂಪನಿಗಳು ಜಂಟಿಯಾಗಿ ರೈತರಿಂದ ನೇರವಾಗಿ ತೊಗರಿ ಖರೀದಿಸಿ ಅತ್ಯಧಿಕ ಬೆಂಬಲ ಬೆಲೆ ನೀಡುವುದು. ಯಾವುದೇ ದಲ್ಲಾಳಿಗಳ ತೊಂದರೆ ಇಲ್ಲದೇ ರೈತರೇ ಸರ್ಕಾರದ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳಬಹುದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅವರಣದಲ್ಲಿರುವ ಶ್ರೀ ಚೆನ್ನವೀರ ಸ್ವಾಮೀಜಿ ರೈತ ಉತ್ಪಾದಕರ ಕೇಂದ್ರದಲ್ಲಿ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ರೈತ ಉತ್ಪಾದಕರ ಕಂಪನಿಗೆ ಸರ್ಕಾರದಿಂದ ಎರಡು ನಿವೇಶನ ಹಾಗೂ ಲಿಂಬೆ ಅಭಿವೃದ್ದಿಗಾಗಿ ಅರು ಎಕರೆ ಮಂಜೂರು ಮಾಡಿಸುವುದಾಗಿ ಶಾಸಕರು ಭರವಸೆ ನೀಡಿದರು.
ಸಾರಂಗಮಠದ ಪೀಠಾಧ್ಯಕ್ಷ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಲಿಂಬೆ ಅಭಿವೃದ್ಧಿ ಮಂಡಳಿ, ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಸಕಾಲಕ್ಕೆ ಮಳೆಯಾಗದೇ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅಥವಾ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ದೊರಕದ ರೈತರು ಮಾಡಿದ ಸಾಲವನ್ನು ತಿರಿಸಲಿಕ್ಕಾಗದೇ ಆತ್ಮಹತ್ಯೆಯಂಥ ಅನೇಕ ಅವಘಡಗಳು ಸಂಭವಿಸುತ್ತಿದ್ದು ಅದಕ್ಕೆ ಸರಕಾರ ರೈತರಿಂದ ನೆರವಾಗಿ ಖರೀದಿ ಮಾಡಲು ತೊಗರಿ ಖರೀದ ಕೇಂದ್ರ ಪ್ರಾರಂಭಿಸಲಾಗಿದ್ದು ಎಲ್ಲ ರೈತ ಬಾಂಧವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ರೈತರಿಂದ ನೇರ ತೊಗರಿ ಖರೀದಿ ಕ್ವಿಂಟಲ್ ತೊಗರಿಗೆ ರೂ. 6,300 ಪ್ರೋತ್ಸಾಹ ಧನ ನೀಡಿ ಖರೀದಿಸಲಾಗುವುದು. ಯಾವುದೇ ದಲ್ಲಾಳಿಗಳ ಪ್ರವೇಶ ಇಲ್ಲ. ರೈತರಿಂದ ನೇರವಾಗಿ ಖರೀದಿಸಲಾಗುವುದು. ಈಗಾಗಲೇ 100 ರೈತರು ಹೆಸರು ನೋಂದಾಯಿಸಿದ್ದಾರೆ. ಒಂದು ಸಾವಿರ ರೈತರು ಹೆಸರು ನೋಂದಾಯಿಸಿ ಸದಸ್ಯತ್ವ ಪಡೆದುಕೊಳ್ಳುವುದು ನಮ್ಮ ಗುರಿಯಾಗಿದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸಿದ್ದಣ್ಣ ಹಿರೇಕುರುಬರ, ರೈತ ಉತ್ಪಾದಕರ ಕಂಪನಿ ನಿರ್ದೇಶಕರಾದ ಶೈಲಜಾ ಸ್ಥಾವರಮಠ, ಸುಭಾಸ ಜಲವಾದಿ, ಗಂಗಾರಾಮ ಪವಾರ, ಮಹಾದೇವ ಅಂಬಲಿ, ರಮೇಶ ಬಡಾನೂರ, ಶ್ರೀಶೈಲ ಯಳಮೇಲಿ, ರಾಜಶೇಖರ ಪೂಜಾರಿ, ದಶರಥಸಿಂಗ ರಜಪೂತ, ಗಿರಿಮಲ್ಲಪ್ಪ ಗೊಲ್ಲೂರ ಅನೇಕರು ಇದ್ದರು.