ವಚನ ಗ್ರಂಥಗಳಲ್ಲಿ ಜೀವನ ಮೌಲ್ಯಗಳು ಅನಾವರಣಗೊಂಡಿವೆ – ಶ್ರೀಮತಿ ರತ್ನಪ್ರಭಾ ವಿಶ್ವನಾಥ ಬೆಲ್ಲದ

Must Read

ಬೆಳಗಾವಿ: ೧೨ನೆಯ ಶತಮಾನದ ಶರಣರ ವಚನಗಳನ್ನು ಜನರ ಮನಗಳಿಗೆ ಮುಟ್ಟಿಸುವ ಸದುದ್ದೇಶವನ್ನು ಇಟ್ಟುಕೊಂಡು ಹೊರತರಲಾದ ವಚನ ಸಂಪುಟಗಳಲ್ಲಿ ಜೀವನ ಮೌಲ್ಯಗಳು ಅನಾವರಣಗೊಂಡಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ರತ್ನಪ್ರಭಾ ವಿಶ್ವನಾಥ ಬೆಲ್ಲದ ಹೇಳಿದರು.

ಬೆಳಗಾವಿ ನಗರದ ಲಿಂಗಾಯತ ಭವನದಲ್ಲಿ ಕೇಂದ್ರ ಬಸವ ಸಮಿತಿ ಪ್ರಕಟಿಸಿದ ವಚನ ಗ್ರಂಥಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಬದುಕಿನ ವಿವಿಧ ಆಯಾಮಗಳನ್ನು ತೋರಿಸುವ ಈ ಉತ್ಕೃಷ್ಠ ಗ್ರಂಥದಲ್ಲಿ ವಿಶ್ವಗುರು ಬಸವಣ್ಣ, ಅಲ್ಲಮಪ್ರಭುದೇವ, ಚೆನ್ನಬಸವಣ್ಣ, ಸಿದ್ಧರಾಮೇಶ್ವರ, ಅಕ್ಕಮಹಾದೇವಿ, ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ದುಗ್ಗಳೆ, ನಾಗಲಾಂಬಿಕೆ, ಮುಕ್ತಾಯಕ್ಕ, ಮೋಳಿಗೆ ಮಹಾದೇವಿ, ಸತ್ಯಕ್ಕ, ಅಂಬಿಗರ ಚೌಡಯ್ಯ, ಉರಿಲಿಂಗದೇವ, ಕರುಳ ಕೇತಯ್ಯ, ಗುಹೇಶ್ವರಯ್ಯ, ಬಾಲಸಂಗಯ್ಯ, ಜಕ್ಕಣಯ್ಯ, ಹೇಮಗಲ್ಲ ಪಂಪ ಹೀಗೆ ಬಸವಯುಗ ಮತ್ತು ಬಸವೋತ್ತರ ಯುಗದ ಅನೇಕ ಶರಣರ ಆಯ್ದ ವಚನಗಳು ಮನಸ್ಸಿಗೆ ಸ್ಪೂರ್ತಿಯ ಸೆಲೆಗಳಾಗಿ ಗೋಚರಿಸುತ್ತವೆ ಎಂದರು.

ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರೂ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಮೂಲಪಠ್ಯವನ್ನು ಸಿದ್ಧಪಡಿಸುವಲ್ಲಿ ಡಾ. ಎಂ.ಎಂ ಕಲಬುರ್ಗಿಯವರ ಆಸಕ್ತಿ, ಬದ್ಧತೆ, ಪರಿಶ್ರಮ ಮೆಚ್ಚುವಂತದ್ದು ಎಂದು ಹೇಳಿದರು. ವಚನ ಕನ್ನಡ ಆವೃತ್ತಿ ಪ್ರಥಮ ಬಾರಿಗೆ ೨೦೧೨ ರಲ್ಲಿ ಮುದ್ರಣಗೊಂಡು ೫೦೦೦ ಪ್ರತಿಗಳು ಮಾರಾಟವಾಗಿ ಇಂದು ಚತುರ್ಥ ಆವೃತ್ತಿಯಾಗಿ ಪ್ರಕಟವಾಗಿರುವುದು ವಚನಗಳ ಮಹತ್ವ, ಮೌಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು.

ಪ್ರಗತಿಪರ ಕೃಷಿಕರಾದ ಚನಗೌಡ ಮರಲಿಂಗನವರ ಮಾತನಾಡಿ, ಹರಿವ ನೀರಿನಂತೆ ನಿರಂತರವಾಗಿ ಜರುಗುವ ಕೇಂದ್ರ ಬಸವ ಸಮಿತಿಯ ರಚನಾತ್ಮಕ ಹಾಗೂ ನಾವಿನ್ಯಯುತ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಅಭಿಪ್ರಾಯಪಟ್ಟರು. ವಿವಿಧ ಭಾಷೆಗಳಲ್ಲಿ ಶಿವಶರಣರ ವಚನಗಳನ್ನು ಅನುವಾದಿಸುವುದರ ಮೂಲಕ ಬಸವ ಸಮಿತಿ ದೇಶ ವಿದೇಶಗಳಲ್ಲಿ ಶರಣ ಸಂಸ್ಕೃತಿಯನ್ನು ಪಸರಿಸುತ್ತಿರುವುದು ಅಭಿಮಾನದ ಸಂಗತಿ ಎಂದು ಅವರು ಹೇಳಿದರು.

ಸ್ವಾವಲಂಬನ ಫೌಂಡೇಶನ್ ಅಧ್ಯಕ್ಷರಾದ ಸಂತೋಷ ಕೊಳವಿ ಮಾತನಾಡಿ ಅನೇಕ ತಜ್ಞರನ್ನೊಳಗೊಂಡ ತಂಡವನ್ನು ರಚಿಸಿ ಸಾವಿರಾರು ವಚನಗಳನ್ನು ಒಂದೆಡೆ ಸೇರಿಸಿ ಅಮೂಲ್ಯ ಗ್ರಂಥಗಳನ್ನು ಪ್ರಕಟಿಸಿದ್ದು ಸಾಮಾನ್ಯ ವಿಷಯವಲ್ಲ ಎಂದರು. ಬದುಕಿನ ಸತ್ಯಗಳನ್ನೊಳಗೊಂಡ ವಚನಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಹೇಳಿದರು. ಹಿರಿಯ ಸಹಕಾರಿ ಈಶ್ವರಗೌಡ ಶಂಕರಗೌಡ ಪಾಟೀಲ ಸ್ವಾಗತಿಸಿದರು. ಪ್ರವೀಣ ತಾವಕರಿ ವಂದಿಸಿದರು.

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group