ಸಿಂದಗಿ: ಸಾಹಿತ್ಯ ನಿಂತ ನೀರಾಗಬಾರದು ಅದು ಎಲ್ಲರ ಮನೆ ಮನೆಯಲ್ಲಿ ಪಸರಿಸುವ ವೇದಿಕೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲಿಕಾರ ಅವರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಯಾವುದೇ ಸಮುದಾಯಕ್ಕೆ ನೋವಾಗದ ರೀತಿಯಲ್ಲಿ ಸರ್ವರಿಗೂ ಸಮಪಾಲು ನೀಡಿ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ನೂತನ ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಜೇತವನದಲ್ಲಿ ಪತ್ರಿಕಾ ಬಳಗದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಿಂದಗಿ ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತು ಹೆಮ್ಮರವಾಗಿ ಬೆಳೆದಿದ್ದಲ್ಲದೆ ಸಾಹಿತಿಗಳ ದತ್ತಿ ನಿಧಿಗಳು ಇದ್ದು ಮುಂದೆ ತೆರೆಮರೆಯಲ್ಲಿದ್ದ ಸಾಹಿತಿಗಳನ್ನು ಲೇಖಕರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ ಎಂದರು.
ಪತ್ರಕರ್ತ ಪಂಡಿತ ಯಂಪೂರೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕೆಲವರ ಸ್ವತ್ತಾಗದೇ ಎಲ್ಲರಿಗೂ ಸ್ಪಂದಿಸುವ ಮನೆಯಾಗಬೇಕು ಹಿಂದಿರುವ ಜಿಲ್ಲಾಧ್ಯಕ್ಷರು ಮೇಲ್ವರ್ಗದ ಜಾತಿಗೆ ಮಣೆ ಹಾಕಿ ಮೆಚ್ಚಿಗೆ ಪಡೆದುಕೊಂಡಿದ್ದರು. ಸದಸ್ಯತ್ವ ನೊಂದಣಿಯಲ್ಲಿಯೂ ಕೂಡ ತಾರತಮ್ಯ ಮಾಡಿದ್ದಾರೆ. ಒಂದೊಂದು ಬಾರಿ ಒಂದು ನೆಪದಲ್ಲಿ ಆಯ್ಕೆಯಾಗಿದ್ದೇ ಅವರ ದೊಡ್ಡ ಸಾಧನೆ. ಯುವ ಸಾಹಿತಿಗಳನ್ನು ಬೆಳೆಸುವಲ್ಲಿ ವಿಫಲರಾಗಿದ್ದಾರೆ ಅದಕ್ಕೆ ಈ ಬಾರಿ ಅವರಿಗೆ ಸಾಹಿತಿಗಳು ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಲೀಮಪಟೇಲ ಮರ್ತೂರ, ಮಹಿಬೂಬ ಮುಲ್ಲಾ, ವಸೀಮ ಮರ್ತೂರ, ದಲಿತ ಸೇನೆ ತಾಲೂಕಾಧ್ಯಕ್ಷ ಬಾಲಕೃಷ್ಣ ಚಲವಾದಿ, ತೌಸೀಪ ನಾಟೀಕಾರ ಇದ್ದರು.