ಕವಿಗಳು ಇಂದಿನ ಸಮಾಜದ ದಾರಿದೀಪಗಳು.ಯುವಜನತೆ ಕವಿಗಳ ಜೀವನ ಹಾಗೂ ಅವರ ಕೃತಿಗಳನ್ನು ಅಭ್ಯಸಿಸಿ ತಮ್ಮ ಜೀವನ ರೂಪಿಸಿಕೊಳ್ಳಬೇಕು, ಭವಿಷ್ಯದ ಸುಂದರ ಸಮಾಜ ಕಟ್ಟಬೇಕೆಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.
ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಏರ್ಪಡಿಸಲಾಗಿದ್ದ ವರಕವಿ ದ.ರಾ.ಬೇಂದ್ರೆಯವರ ೧೨೫ ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ವರಕವಿ ದ.ರಾ.ಬೇಂದ್ರೆಯವರದು ಹೋರಾಟದ ಬದುಕು. ತಮ್ಮ ಕವನಗಳ ಮೂಲಕ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯ ಹೋರಾಟದ ಜಾಗೃತಿ ಮೂಡಿಸಿದರು.
ಪರಿಣಾಮವಾಗಿ ದೇಶದ್ರೋಹದ ಆರೋಪದ ಮೇಲೆ ಜೈಲು ಸೇರಿದರು.ಪರಿಣಾಮವಾಗಿ ತಮಗೆ ಜೀವನಾಧಾರ ಕಲ್ಪಿಸಿದ್ದ ಶಿಕ್ಷಕ ಕೆಲಸದಿಂದ ಹೊರಗೆ ಹಾಕಲ್ಪಟ್ಟರು. ನಂತರ ಕೆಲವು ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು. ಅವರು ಸಾಹಿತ್ಯ ರಚನೆಯಿಂದ ವಿಮುಖವಾಗಲಿಲ್ಲ.ಸಾಲುಸಾಲಾಗಿ ಮಕ್ಕಳ ದುರಂತ ಮಯ ಸಾವು ಅವರನ್ನು ಕಂಗೆಡಿಸಿತು.ಆದರೂ ಬರೆಯುವ ಉತ್ಸಾಹ ಕುಗ್ಗಲಿಲ್ಲ. ಅವರ ಕವನಗಳು ಇಂದಿಗೂ ಜನಮಾನಸದಲ್ಲಿ ಹಾಸುಹೊಕ್ಕಾಗಿವೆ. ಕುರುಡು ಕಾಂಚಾಣ ಕುಣಿಯುತಲಿತ್ತ, ಕಾಲಿಗೆ ಬಿದ್ದವರ ತುಳಿಯುತಲಿತ್ತ ಸಮಾಜದಲ್ಲಿ ಹಣದ ದುಷ್ಪರಿಣಾಮ ದ ಬಗ್ಗೆ ಬೇಂದ್ರೆಯವರ ಸುಂದರ ಕವಿತೆ..ಬೇಂದ್ರೆಯವರ ಸರಳ ಜೀವನ, ಸಾಹಿತ್ಯಾತ್ಮಕ ಹಾಗೂ ಸಾಮಾಜಿಕ ಮೌಲ್ಯಗಳು ಇಂದಿನ ಯುವಜನಾಂಗಕ್ಕೆ ದಾರಿದೀಪವಾಗಿವೆ ಎಂದು ನುಡಿದರು.
ಭಗತ್ ಸಿಂಗ್ ಯೂತ್ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಅವರು ಬೇಂದ್ರೆಯವರ ಜೀವನ ಹಾಗೂ ಕೃತಿಗಳ ಬಗ್ಗೆ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಎರಡನೇ ಜ್ಞಾನ ಪೀಠ ಪ್ರಶಸ್ತಿ ತಂದುಕೊಡುವ ಮೂಲಕ ಬೇಂದ್ರೆಯವರು ಕನ್ನಡಿಗರ ಹೃದಯ ಗೆದ್ದಿದ್ದಾರೆ ಎಂದು ಬಣ್ಣಿಸಿದರು. ಸಂಸ್ಥೆಯ ಖಜಾಂಚಿ ಕೃಷ್ಣಯ್ಯ ಅವರು ಮಾತನಾಡಿ ಅಂದಿನ ದಿನಗಳಲ್ಲಿ ಯೆ ಧಾರವಾಡದಲ್ಲಿ ಕವಿಗಳ ಸಭೆಗಳನ್ನು ನಡೆಸುವ ಮೂಲಕ ಹಲವಾರು ಸಾಹಿತಿಗಳನ್ನು ಪ್ರೋತ್ಸಾಹಿಸಿದ ಕೀರ್ತಿ ಬೇಂದ್ರೆಯವರದು ಎಂದು ಬಣ್ಣಿಸಿದರು.
ಭಗತ್ ಸಿಂಗ್ ಯೂತ್ ಫೌಂಡೇಶನ್ ನ ಪದಾಧಿಕಾರಿಗಳಾದ ಧರ್ಮ ಹೊಸೂರು,ಶಿವು,ಚೆಲುವನ್,ಬಸವರಾಜು,ಅಮಿತ್, ಕುಮಾರ್,ಪ್ರಮೋದ್, ಕಿರಣ್,ಆದಿತ್ಯ, ರಾಕೇಶ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಬೇಂದ್ರೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅವರಿಗೆ ಗೌರವ ಸಲಿಸಲಾಯಿತು.