ಬೀದರ – ಸಾಮರಸ್ಯದ ಗುರು ಎನಿಸಿಕೊಂಡ ಬಸವಣ್ಣನವರು ನಡೆದಾಡಿದ ಭೂಮಿಯಲ್ಲೀಗ ಹಿಜಾಬ್ ಹೆಸರಿನಲ್ಲಿ ನಡೆಯುತ್ತಿರುವ ಗಲಾಟೆ ಪ್ರಸಂಗಗಳು ಕ್ಷೇತ್ರಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸುತ್ತಿವೆ.
ಹಿಜಾಬ್ ಘಟನೆ ನಡೆದಾಗ ಶಾಲೆ ಆಡಳಿತ ಮಂಡಳಿಯು ಯಾಕೆ ಬೇಕು ಎಲ್ಲಾ ಗಲಾಟೆ ಎಂದು ಭಾವಿಸಿ ಶಾಲೆ ರಜೆ ಘೋಷಣೆ ಮಾಡಿದರು. ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಕಾರಣ ವಿದ್ಯಾರ್ಥಿಗಳ ಪಾಲಕರು ಹಾಗೂ ಕಾಲೇಜು ಆಡಳಿತ ಮಂಡಳಿ ಮಧ್ಯೆ ಕೆಲ ಕಾಲ ವಾಗ್ವಾದ ನಡೆದು ಕಾಲೇಜಿನ ತರಗತಿಗಳಿಗೆ ದಿಢೀರನೆ ರಜೆ ಘೋಷಿಸಿದ ಘಟನೆ ನಗರದ ಎಸ್.ಎಸ್ .ಕೆ.ಬಿ ಕಾಲೇಜಿನಲ್ಲಿ ಇಂದು ನಡೆದಿದೆ.
ಕಾಲೇಜಿನಲ್ಲಿ ಬಿಎ, ಬಿಎಸ್ಸಿ ಸೇರಿದಂತೆ ವಿವಿಧ ಪದವಿ ಹಂತದಲ್ಲಿ ಓದುತ್ತಿರುವ ಮುಸ್ಲಿಂ ಧರ್ಮದ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಇಂದು ಬೆಳಿಗ್ಗೆ ಕಾಲೇಜಿಗೆ ಆಗಮಿಸಿದ್ದಾರೆ.
ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸುತ್ತಿದ್ದಂತೆ ಕಾಲೇಜಿನ ಆಡಳಿತ ಮಂಡಳಿಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ಯಾವುದೇ ಧರ್ಮದ ಧಾರ್ಮಿಕ ಸಂಕೇತ ಸೂಚಿಸುವ ಸಮವಸ್ತ್ರ ಧರಿಸಲು ಅವಕಾಶವಿಲ್ಲ ಎಂದು ತಿಳಿಸಿದರು. ಈ ವಿಷಯ ಅರಿತ ವಿದ್ಯಾರ್ಥಿನಿಯರ ಪಾಲಕರು ಕಾಲೇಜಿಗೆ ಧಾವಿಸಿದ್ದಾರೆ. ಆಡಳಿತ ಮಂಡಳಿಯ ಆಕ್ಷೇಪಣೆಯನ್ನು ತೀವ್ರವಾಗಿ ವಿರೋಧಿಸಿದ ವಿದ್ಯಾರ್ಥಿನಿಯರು ಹಾಗೂ ಪಾಲಕರು’ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಬಾರದು ಎನ್ನುವ ಆದೇಶ ಎಲ್ಲಿದೆ ತೋರಿಸಿ ಎಂದು ಪಟ್ಟು ಹಿಡಿದಿದ್ದಾರೆ.
ಹೀಗಾಗಿ ಕೆಲ ಕಾಲ ಕಾಲೇಜಿನ ಆವರಣದಲ್ಲಿ ಗೊಂದಲದ ಜೊತೆಗೆ ಬಿಗುವಿನ ಜಿ ನಿರ್ಮಾಣಗೊಂಡಿತ್ತು.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಿಪಿಐ ಗೋಪಾಲ್ ನಾಯಕ್ ನೇತೃತ್ವದ ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ವಾತಾವರಣ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನಿರೀಕ್ಷಿತವಾಗಿ ನಡೆದ ಘಟನೆಯಿಂದಾಗಿ ಕಾಲೇಜಿನ ಪದವಿ ತರಗತಿಗಳಿಗೆ ರಜೆ ಘೋಷಿಸಿದ ಕಾಲೇಜಿನ ಆಡಳಿತ ಮಂಡಳಿಯು, ಮುಂದಿನ 3 ದಿನಗಳ ಕಾಲ ಕಾಲೇಜಿಗೆ ರಜೆ ಘೋಷಿಸಿ, ಆನ್ ಲೈನ್ ತರಗತಿ ನಡೆಸಲು ನಿರ್ಧರಿಸಿದೆ ಎಂದು ಕಾಲೇಜಿನ ಮೂಲಗಳಿಂದ ತಿಳಿದು ಬಂದಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ