ಸಿಂದಗಿ– ಸತತ ಎಡರು ವರ್ಷಗಳಿಂದ ಮಹಾಮಾರಿ ಕರೋನಾ ರೋಗದಿಂದ ತತ್ತರಿಸಿ ಗ್ರಾಮೀಣ ಮತ್ತು ನಗರದ ಜನತೆಗೆ ದುಡಿಯಲು ಕೆಲಸವಿಲ್ಲದೆ ಊಟಕ್ಕೂ ಪರಿತಪಿಸುತ್ತಿರುವ ಸಂದರ್ಭದಲ್ಲಿ ಜನತೆಗೆ ಆರೋಗ್ಯ ಜಾಗೃತಿ, ಆರೋಗ್ಯ ತಪಾಸಣೆ ಶಿಬಿರಗಳು ಅತ್ಯಂತ ಪ್ರಯೋಜನಕಾರಿಯಾಗಿವೆ ಎಂದು ಮನಗೂಳಿ ಆಸ್ಪತ್ರೆಯ ವೈದ್ಯ ಡಾ.ಶಾಂತವೀರ ಮನಗೂಳಿ ಹೇಳಿದರು.
ಪಟ್ಟಣದ ಟಿಎಸ್‍ಪಿ ಮಂಡಳಿಯ ಆಯುರ್ವೇದಿಕ ಮೆಡಿಕಲ್ ಕಾಲೇಜು ಮತ್ತು ಮನಗೂಳಿ ಆಸ್ಪತ್ರೆ, ಎಮ್.ಸಿ.ಮನಗೂಳಿ ಪೌಂಡೇಷನ್ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿರುವ ಉಚಿತ ಹೃದಯರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದಕಲ್ಲು ಕಾಯಿಲೆ ಸೇರಿದಂತೆ ಅನೇಕ ರೋಗಗಳ ಚಿಕಿತ್ಸೆಗಾಗಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಬಡವರಿಗೆ, ಮಧ್ಯಮ ವರ್ಗದ ಜನತೆಗೆ ವರದಾನವಾಗಿವೆ. ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸದಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ. ಕಾರಣ ಪ್ರತಿಯೊಬ್ಬರು ಮೊದಲು ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರಬೇಕು. ಮುಂಬರುವ ದಿನಗಳಲ್ಲಿ ತಾಲೂಕಿನ ವಿವಿಧ ಕಡೆಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಆಶಯ ವ್ಯಕ್ತಪಡಿಸಿದರು.
ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಹೃದಯರೋಗ ತಜ್ಞ ವೈದ್ಯ ಡಾ. ಹಣಮಂತಯ್ಯ ಮಾತನಾಡಿ, ಆರೋಗ್ಯದಿಂದ ಇದ್ದಲ್ಲಿ ನಾವು ಏನೆಲ್ಲವನ್ನು ಸಾಧಿಸಬಹುದು. ಇಂದು ನಮ್ಮ ಆಹಾರ ಪದ್ದತಿ ಬದಲಾಗಿದೆ ಅದರಲ್ಲಿಯೂ ನಾವು ಸೇವಿಸುವ ಆಹಾರ ಸತ್ವಯುತವಾಗಿಲ್ಲ ಇದರಿಂದ ನಮ್ಮ ದೇಹಕ್ಕೆ ಯಾವುದೆ ರೀತಿಯ ಜೀವಸತ್ವ, ಪ್ರೋಟಿನ್‍ಗಳು ಸಿಗುತ್ತಿಲ್ಲ ಇದರಿಂದ ದೇಹ ನಿತ್ಯ ಬದಲಾಗುತ್ತಾ ಸಾಗುತ್ತದೆ ಆರೋಗ್ಯದ ವಿಚಾರದಲ್ಲಿ ನಾವು ಎಚ್ಚರವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದರು.
ಈ ಸಂದರ್ಭದಲ್ಲಿ ಸುಮಾರು 300 ಕ್ಕೂ ಅಧಿಕ ಜನರಿಗೆ ವಿವಿಧ ರೋಗಗಳ ತಪಾಸಣೆಯನ್ನು ಮಾಡಲಾಯಿತು. ಇದರಲ್ಲಿ 22 ಜನ ರೋಗಿಗಳು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಗೆ ಸಂಬಂಧಿಸಿದ ಉಚಿತ ಶಸ್ತ್ರಚಿಕಿತ್ಸೆಯನ್ನು ಪಡೆಯಲಿದ್ದಾರೆ.
ಶಿಬಿರದಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆವುಳ್ಳವರು, ಇಸಿಜಿ, ಇಕೋ ಸ್ಕ್ಯಾನಿಂಗ್, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರ ವಿಸರ್ಜನೆಯ ವೇಳೆ ಉರಿ, ರಕ್ತ, ಬೆನ್ನು ನೋವು, ಕುತ್ತಿಗೆ ನೋವು, ಮೆದುಳಿನ ಗಡ್ಡೆ, ಸ್ತ್ರೀ ರೋಗ ಸಮಸ್ಯೆ, ಗರ್ಭಕೊಶದ ಉದರ ಶಸ್ತ್ರಚಿಕಿತ್ಸೆ, ಕೀಲು ಮತ್ತು ಮೂಳೆ, ಕಿವಿ ಗಂಟಲು, ಥೈರಾಯ್ಡ್ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ರೋಗಗಳಿಗೆ ಉಚಿತ ತಪಾಸಣೆ ಮಾಡಲಾಯಿತು.
ಶಿಬಿರದಲ್ಲಿ ಮನಗೂಳಿ ಆಸ್ಪತ್ರೆಯ ಡಾ.ಸಂಧ್ಯಾ ಮನಗೂಳಿ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಡಾ.ಅರವಿಂದ, ಡಾ.ಗುರುಪ್ರಸಾದ.ಜಿ, ಡಾ. ಟೀನಾ, ಡಾ.ವಿಶ್ವನಾಥರೆಡ್ಡಿ ಮತ್ತು ಕುಮಾರ ಬಗಲಿ, ಪೀರಾ ಮಗರಬಿ, ಶ್ರೀಶೈಲ ಅಂಬಲಗಿ, ಬಸವರಾಜ, ಮೀನಾಕ್ಷಿ ನಾಯ್ಕೋಡಿ, ಚನ್ನು ರಾಯಚೂರ ಸೇರಿದಂತೆ ಅನೇಕರು ಇದ್ದರು.