ಸಿಂದಗಿ: ತಾಲೂಕಿನ ಹಿಕ್ಕಣಗುತ್ತಿ ಗ್ರಾಮ ಪಂಚಾಯತ ಕಾರ್ಯದರ್ಶಿ ಮಾಹಿತಿ ಹಕ್ಕು ಅಧಿನಿಯಮದಡಿ ನಿಗದಿತ ಸಮಯದಲ್ಲಿ ಮಾಹಿತಿಯನ್ನು ಪೂರೈಸದೇ ಇರುವುದರಿಂದ ಅವರಿಗೆ ಕರ್ನಾಟಕ ಮಾಹಿತಿ ಆಯೋಗದ ನ್ಯಾಯಾಲಯವು ದಂಡ ವಿಧಿಸುವುದಲ್ಲದೇ ಸೂಕ್ತ ಸಮಯದಲ್ಲಿ ಮಾಹಿತಿಯನ್ನು ಒದಗಿಸುವಂತೆ ಆದೇಶಿಸಿದೆ ಎಂದು ಆರ್‌ಟಿಐ ಕಾರ್ಯಕರ್ತ ಅಂಬರೀಷ್ ಸುಣಗಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ, ತಾಲೂಕಿನ ಹಿಕ್ಕಣಗುತ್ತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ೧೪ನೇ ಹಣಕಾಸು ಯೋಜನೆಯಡಿ ಕೈಗೊಂಡಿದ್ದ ಕ್ರಿಯಾಯೋಜನೆ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಕಾಮಗಾರಿಗಳ ಬಿಲ್ ಓಚರ್ ನಕಲು ಪ್ರತಿ, ಕ್ಯಾಶ್ ಬುಕ್ ನಕಲು ಪ್ರತಿಗಳನ್ನು ಪೂರೈಸುವಂತೆ ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿ ಅಧಿಕಾರಿಯಾಗಿದ್ದ ಗ್ರಾಮ ಪಂಚಾಯತ ಕಾರ್ಯದರ್ಶಿಗೆ ಮಾಹಿತಿ ಕೇಳಿದ್ದು ಆದರೆ, ಅವರು ನಿಗದಿತ ಸಮಯದಲ್ಲಿ ಮಾಹಿತಿಯನ್ನು ಪೂರೈಸದೇ ಇರುವುದರಿಂದ ಅವರ ವಿರುದ್ಧ ಪ್ರಥಮ ಮೇಲ್ಮನವಿ ಸಲ್ಲಿಸಿದ್ದರೂ ಕೂಡಾ ನನಗೆಮಾಹಿತಿಯನ್ನು ನೀಡುವಲ್ಲಿ ವಿಳಂಬ ನೀತಿ ಮುಂದುವರೆಸಿದ ಪರಿಣಾಮ ಮತ್ತೆ ಕರ್ನಾಟಕ ಮಾಹಿತಿ ಆಯೋಗದ ನ್ಯಾಯಾಲಯದ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಜ.೨೭ರಂದು ಬೆಳಗಾವಿ ಸುವರ್ಣಸೌಧದಲ್ಲಿರುವ ಮಾಹಿತಿ ಆಯೋಗದ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಹಿಕ್ಕಣಗುತ್ತಿ ಗ್ರಾಮ ಪಂಚಾಯತ ಕಾರ್ಯದರ್ಶಿಗೆ ನ್ಯಾಯಾಧೀಶರು ರೂ.೧೦ಸಾವಿರ ದಂಡ ವಿಧಿಸಿದ್ದಾರೆ ಎಂದರು.
ಅಲ್ಲದೇ ದಂಡದ ಹಣವನ್ನು ಗ್ರಾಮ ಪಂಚಾಯತ ಕಾರ್ಯದರ್ಶಿ ಸಂಬಳದಲ್ಲಿ ಕಡಿತಗೊಳಿಸಿ ಏಕಕಂತಿನಲ್ಲಿ ಸರಕಾರದ ಲೆಕ್ಕ ಶೀರ್ಷಿಕೆ ವಿಭಾಗಕ್ಕೆ ಭರಣಾ ಮಾಡುವಂತೆ ಹಾಗೂ ಶೀಘ್ರದಲ್ಲಿಯೇ ಕೇಳಿರುವ ಮಾಹಿತಿಯನ್ನು ಪೂರೈಸಬೇಕು ಎಂದು ಸೂಚಿಸಿ ಮುಂದಿನ ವಿಚಾರಣೆಯನ್ನು ಮಾ.೦೯ರವರೆಗೆ ಮುಂದೂಡಿದ್ದಾರೆಂದು ಅವರು ತಿಳಿಸಿದ್ದಾರೆ.