ಮೂಡಲಗಿ: ಪರಿಕರ ಮಾರಾಟಗಾರರು ರೈತರಿಗೆ ಕೀಟನಾಶಕ -ಗೊಬ್ಬರಗಳ ಸರಿಯಾದ ಮಾಹಿತಿ ನೀಡಬೇಕು, ಯಾವುದೇ ರೀತಿಯಲ್ಲಿಯೂ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು ಒಂದು ವೇಳೆ ಅಂತಹ ಪ್ರಕರಣಗಳ ಮಾಹಿತಿ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ ಸಿ.ಆಯ್.ಹೂಗಾರ ಅವರು ತಾಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.
ಮೂಡಲಗಿಯಲ್ಲಿ ಶ್ರೀ ಶಿವಭೋದರಂಗ ಅರ್ಬನ್ ಸೊಸೈಟಿಯಲ್ಲಿ ಜರುಗಿದ ಮೂಡಲಗಿ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.
ಗೋಕಾಕ-ಮೂಡಲಗಿ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ ತಡವಾಗಿ ಬಿತ್ತಿದ ಗೋಧಿ,ಸದಕ ಬೆಳೆಗಳಿಗೆ ಕೀಟ ರೋಗಗಳ ಮುಂಜಾಗೃತಾ ಹತೋಟಿ ಕ್ರಮಗಳನ್ನು ಸರಿಯಾದ ಸಮಯದಲ್ಲಿ ನಿರ್ವಹಿಸಿದಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾದ್ಯ ಎಂದರು.
ಪರಿಕರ ಮಾರಾಟಗಾರರಿಗೆ ತಮ್ಮ ಅಂಗಡಿಗಳಲ್ಲಿ ಗೊಬ್ಬರಗಳ ದರಪಟ್ಟಿ ಕಡ್ಡಾಯವಾಗಿ ಲಗತ್ತಿಸಲು ಸೂಚಿಸಿದರು.
ತುಕ್ಕಾನಟ್ಟಿ ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ: ಡಿ.ಸಿ ಚೌಗಲಾ ಮಾತನಾಡಿ, ಗೋದಿ, ಸದಕ ಬೆಳೆಯಲ್ಲಿ ತುಕ್ಕುರೋಗ ಹಾಗೂ ಹಾಗೂ ಇನ್ನಿತರ ಹಿಂಗಾರು ಬೆಳೆಗಳ ಸಕಾಲದಲ್ಲಿ ಬೀಜೋಪಚಾರ ಹಾಗೂ ಕೀಟರೋಗ ನಿರ್ವಹಣೆಗಳ ಕುರಿತು ಪರಿಕರ ಮಾರಾಟಗಾರರಿಗೆ ವಿವರವಾದ ಮಾಹಿತಿ ನೀಡಿದರು.
ಸಭೆಯ ವೇದಿಕೆಯಲ್ಲಿ ಅರಭಾವಿ ರೈತ ಸಂಪರ್ಕ ಕೇಂದ್ರ ಶಂಕರ ಹಳ್ಳದಮನಿ, ಗೋಕಾಕ ಕೃಷಿ ಅಧಿಕಾರಿ ಎಮ್.ಆಯ್.ಪತ್ತಾರ ಹಾಗೂ ಸಭೆಯಲ್ಲಿ ಮೂಡಲಗಿ ತಾಲೂಕಿನ ಎಲ್ಲ ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿದರು.

