ಮೂಡಲಗಿ – ಭಾವನೆಯ ಬೆಳಕಿನಲ್ಲಿ ನಡೆಯುವ ಕಾರ್ಯಕ್ರಮ ಈ ಭಾವದೀವಿಗೆ. ಯಾವತ್ತೂ ಸಂಗೀತದ ಬೆಳಕು ಬೀರಲಿ ಎಂದು ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ ಹೇಳಿದರು.
ಇಂಡಿಯನ್ ಮ್ಯೂಜಿಕ್ ಅಸೋಸಿಯೇಶನ್ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಆಶ್ರಯದಲ್ಲಿ ಬುಧವಾರ ಸಂಜೆ ನಡೆದ ಭಾವದೀವಿಗೆ ಸಂಗೀತ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಅತಿ ಶ್ರೀಮಂತ ಕಾವ್ಯ ಪರಂಪರೆಯನ್ನು ಹೊಂದಿರುವುದು ನಮ್ಮ ಕನ್ನಡನಾಡು. ಬೇಂದ್ರೆ, ಕುವೆಂಪು, ಕಣವಿಯಂಥ ಶಬ್ದ ಗಾರುಡಿಗರಿಂದ ಕನ್ನಡದಲ್ಲಿ ಅತ್ಯಂತ ಶ್ರೇಷ್ಠ ಭಾವಗೀತೆಗಳು ಹೊರಬಂದಿವೆ ಅವುಗಳನ್ನು ಇಂದು ಕೇಳುವ ಸೌಭಾಗ್ಯ ಬಂದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ, ಮನುಷ್ಯನ ಪ್ರತಿ ಹಂತದಲ್ಲೂ ಸಂಗೀತದ ಅವಶ್ಯಕತೆ ಇದೆ. ಮಗುವಿಗೆ ತಾಯಿಯ ಲಾಲಿ ಹಾಡಿನಿಂದಲೇ ಆರಂಭವಾಗಿರುತ್ತದೆ. ಮಗುವಿನಿಂದ ಹಿಡಿದು ರೈತನವರೆಗೂ ಎಲ್ಲರೂ ಸಂಗೀತದೊಂದಿಗೇ ಬೆಳೆದಿರುತ್ತಾರೆ ಎಂದು ಹೇಳಿ, ಮೂಡಲಗಿಯ ಲಯನ್ಸ್ ಸಂಸ್ಥೆಯ ಬಗ್ಗೆ ತಿಳಿಸುತ್ತ, ಸುಮಾರು ಇನ್ನೂರು ವರ್ಷಗಳಿಂದ ಲಯನ್ಸ್ ಕ್ಲಬ್ ಸಮಾಜ ಸೇವೆ ಮಾಡುತ್ತ ಬಂದಿದೆ. ಮೂಡಲಗಿಯ ಲಯನ್ಸ್ ಸಂಸ್ಥೆಯು ಅನ್ನ ದಾಸೋಹ, ಪ್ರವಾಹ ಸಂತ್ರಸ್ತರಿಗೆ ಸಹಾಯ, ರಸ್ತೆ ವ್ಯಾಪಾರಿಗಳಿಗೆ ಸಹಾಯ, ಗಿಡ ನೆಡುವುದು….ಹೀಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ ಎಂದರು.
ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಶ್ರೀಧರ ಬೋಧ ಸ್ವಾಮೀಜಿಯವರು ವಹಿಸಿದ್ದರು.
ತಹಶೀಲ್ದಾರ ಡಿ ಜಿ ಮಹಾತ್ ಮಾತನಾಡಿದರು. ಡಾ. ಸಂಜಯ ಶಿಂಧಿಹಟ್ಟಿ ಸ್ವಾಗತಿಸಿದರು. ಮಹಾವೀರ ಸಲ್ಲಾಗೋಳ ನಿರೂಪಿಸಿದರು. ಶಿವಾನಂದ ಕಿತ್ತೂರ ವಂದಿಸಿದರು.
ವೇದಿಕೆಯ ಮೇಲೆ ವೆಂಕಟೇಶ ಸೋನವಾಲಕರ, ಪಿಎಸ್ಐ ಹಾಲಪ್ಪ ಬಾಲದಂಡಿ, ಸಿಪಿಐ ವೆಂಕಟೇಶ ಮುರನಾಳ, ಮಖ್ಯಾಧಿಕಾರಿ ದೀಪಕ ಹರ್ದಿ, ವೆಂಕಟೇಶ ಪಾಟೀಲ, ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ಹಾದಿಮನಿ, ನಿಂಗಪ್ಪ ಫಿರೋಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಮಾರಂಭದ ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ರವೀಂದ್ರ ಸೋರಗಾಂವಿ, ಶಬ್ಬೀರ ಡಾಂಗೆ, ಐಶ್ವರ್ಯ ತಳವಾರ, ಬಸವರಾಜ ಮುಗಳಖೋಡ, ಶ್ರೀಕಾಂತ ನಾಯಕ, ಶಿವಾನಂದ ಬಿದರಿ, ಬಸವಲಿಂಗಯ್ಯ ಹಿಡಕಲ್ ಸುಶ್ರಾವ್ಯವಾಗಿ ಭಾವಗೀತೆಗಳನ್ನು ಹಾಡಿ ಸಂಗೀತದ ರಸದೌತಣ ಉಣಬಡಿಸಿದರು.
ಸಂಗೀತ ಕಾರ್ಯಕ್ರಮವನ್ನು ರಾಮಚಂದ್ರ ಕಾಕಡೆ ನಿರೂಪಿಸಿದರು.