ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು ಜಿಲ್ಲೆಯ ಜನರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಇದರಿಂದ ಆಕ್ರೋಶಗೊಂಡ ತುಳಜಾಪೂರ ಗ್ರಾಮದ ಮಹಿಳೆಯರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.
ತುಳಜಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದ್ದು ಗ್ರಾಮ ಪಂಚಾಯತಿಯವರು ನಿರ್ಲಕ್ಷ್ಯ ತೋರಿದ್ದಾರೆ. ಆದ್ದರಿಂದ ಕುಡಿಯಲು ನೀರು ಕೊಡಿ ಎಂದು ಮಹಿಳೆಯರು ಖಾಲಿ ಕೊಡವನ್ನು ಕೈಯಲ್ಲಿ ಹಿಡಿದು ಕೊಂಡು ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿ ಜಿಲ್ಲಾ ಸಚಿವ ಪ್ರಭು ಚವ್ಹಾಣ ವಿರುದ್ಧ ಮತ್ತು ಪಿ ಡಿ ಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಔರಾದ ಪಟ್ಟಣದ ಸಚಿವ ಪ್ರಭು ಚವ್ಹಾಣ ತವರೂರಿನಲ್ಲಿ ಕುಡಿಯಲು ನೀರಿಗಾಗಿ ಹಾಹಾಕಾರ ನಡೆಯುತ್ತಿದೆ. ಔರಾದ ಪಟ್ಟಣದ ತುಳಜಾಪುರ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ನಮಗೆ ಇಪ್ಪತ್ತು ದಿವಸ ಆಯಿತು ಕುಡಿಯಲು ನೀರು ಸಿಗುತ್ತಿಲ್ಲ ನಾವು ಹೇಗೆ ಬದುಕಬೇಕು ಪ್ರತಿಯೊಂದಕ್ಕೂ ನೀರು ಬೇಕಾಗುತ್ತದೆ ಆದರೆ ನೀರಿಲ್ಲದೆ ನಮಗೆ ಬಹಳ ಕಷ್ಟ ಆಗುತ್ತಿದೆ ಎಂದು ಹೇಳುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಒಂದು ಕಡೆ ರಣ ಬಿಸಿಲು ಸುಡುತ್ತಿದ್ದರೆ ದಾಹ ತೀರಿಸಿಕೊಳ್ಳಲು ನೀರಿಲ್ಲದೆ ಜನರು ಪರದಾಡುವಂತಾಗಿದೆ. ಮಹಿಳೆಯರ ಈ ಖಾಲಿಕೊಡ ಪ್ರದರ್ಶನಕ್ಕೆ ಜಿಲ್ಲಾ ಆಡಳಿತ ಮತ್ತು ಸಚಿವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ