ಅಪ್ಪನ ಕಣ್ಣಲ್ಲಿ
ಯಾವತ್ತೂ
ನೀರಿಲ್ಲ
ಅಪ್ಪ ನೋವು
ನುಂಗಿ
ಇಂಗಿದ ಬಾವಿ !
ನಾವು
ಅಳುವಾಗಲೆಲ್ಲಾ
ಅಪ್ಪ ಸಂತೈಸುತ್ತಿದ್ದ
ಅಪ್ಪ ಅಳುವುದಿಲ್ಲ
ಸಂತೈಸಲು
ಅಪ್ಪನಿಗೆ ಅಪ್ಪನಿಲ್ಲ !
ಅಪ್ಪ ಒಬ್ಬನೇ
ನಕ್ಕಿಲ್ಲ
ನಗುವಾಗ ನಗಿಸುತ್ತಿದ್ದ
ನೋವು ಹಂಚಲಿಲ್ಲ
ಮರೆಯಲ್ಲೇ
ನುಂಗಿದ್ದ !
ಅಮ್ಮನ ಕಣ್ಣೀರಿಗೆ
ಅಪ್ಪ ಕರಗುವ
ಮೌನಿಯಾಗಿ….
ಗೋಡೆ ನೋಡುತ್ತಾ
ಸೋತು
ಒರಗುವ !.
ಅಪ್ಪನ ಮಾತಿಗೆ
ಮನೆ ತುಂಬಾ
ಮೌನ
ಅಪ್ಪನ ಮೌನಕ್ಕೆ
ಮನೆಯೇ
ಸ್ಮಶಾನ !.
ಅಪ್ಪನ ಸಾಧನೆಗೆ
ಅಮ್ಮನಿಗೂ
ಸನ್ಮಾನ
ಅಪ್ಪ ಸೋತಾಗ
ಅಮ್ಮನಿಗೂ..
ಅನುಮಾನ !
ಅಪ್ಪ ಗಂಧದ
ಕೊರಡು…
ಮನೆ ತುಂಬಾ
ಪರಿಮಳ
ತೇದು ತೇದು
ಸವೆದಿದ್ದು
ಯಾರಿಗೂ
ತಿಳಿಯಲಿಲ್ಲ!
ಅಪ್ಪನ ಏಟು
ನಮ್ಮ ತಪ್ಪಿಗೆ
ನೋವು ಮರೆಸಿದ್ದು
ಮದ್ದಲ್ಲ….
ಅಪ್ಪನ ಅಪ್ಪುಗೆ!
ಅಪ್ಪನ ಬಗ್ಗೆ
ಒಂದಿಷ್ಟು
ಸಣ್ಣವನ ಮಾತು
ಅಪ್ಪ
ಸಣ್ಣವನಲ್ಲ
ದೇವರಿಗೂ ಗೊತ್ತು!
ಅಪ್ಪಾ ….
ಲೋಕ ಮೆಚ್ಚದಿರಬಹುದು
ನಿನ್ನ…..
ನನಗಂತೂ
ನೀನು ಅಪರಂಜಿ
ಅಪ್ಪಟ
ಚಿನ್ನ !!.
ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಮೊದಲ ಹೀರೋ ಅವರ ಅಪ್ಪನೇ. ಪಿತೃದೇವೋಭವ.
– ಅನಾಮಿಕ.