spot_img
spot_img

ಸರಳ ಸಜ್ಜನಿಕೆಯ ಸಾಕಾರಮೂರ್ತಿ ಮೋಹನ ಪಾಟೀಲರು

Must Read

spot_img
- Advertisement -

ಮಾನವನಾದರೆ ಸಾಕು ಮಹಾತ್ಮನಾಗುವುದು ಯಾರಿಗೆ ಬೇಕು ಇದ್ದ ನೆಲವನರಿತರೆ ಸಾಕು ಇಲ್ಲದ ಸಗ್ಗ ಯಾರಿಗೆ ಬೇಕು

-ಜಂಬಣ್ಣ ಅಮರಚಿಂತ

ಈ ಮೇಲಿನ ಗಜಲ್‍ನ ಸಾಲುಗಳು ಇಂದಿನ ವಾಸ್ತವ ಪ್ರಪಂಚದಲ್ಲಿ ಮಹಾತ್ಮನಾಗುವುದಕ್ಕಿಂತಲೂ ಮನುಷ್ಯನಾಗುವುದು ಬಹುಮುಖ್ಯ ಎಂಬುದರ ಕುರಿತು ಅರ್ಥೈಸುತ್ತವೆ. ‘ಏನಾದರೂ ಆಗು ಮೊದಲು ಮಾನವನಾಗು’ ಎಂದು ಕವಿ ಸಿದ್ಧಯ್ಯ ಪುರಾಣಿಕರು ಹೇಳಿದ್ದೂ, ಎಲ್ಲರನ್ನು ಬಿಗಿದಪ್ಪುವ, ಸರಿಸಮದಲ್ಲಿ ಕರೆದೊಯ್ಯುವ ಮಾನವೀಯತೆ, ಅಂತಃಕರಣವುಳ್ಳ ಮನುಷ್ಯರು ಈಗ ಬೇಕಿದ್ದಾರೆ ಎಂಬ ಅರ್ಥದಲ್ಲಿಯೇ. ‘ಕೆರೆಯ ನೀರನು ಕೆರೆಗೆ ಚೆಲ್ಲು’ ಎಂದು ಹಿರಿಯರು ಹೇಳುವಂತೆಯೇ ಇಲ್ಲಿಂದ ಪಡೆದದ್ದನ್ನು ಇಲ್ಲಿಯೇ ನೀಡಿ ಹೋಗಬೇಕು. ಕೈಲಾದಷ್ಟು ಒಳಿತನ್ನೇ ಮಾಡಬೇಕು. ಶರಣರ ಮಾತಿನಂತೆ ನಡೆ-ನುಡಿ ಒಂದಾಗುವಂತೆ ಬದುಕಬೇಕು. ಅತ್ಯಂತ ಸರಳವಾಗಿ ನೆಲದ ಮೇಲೆ ಕಾಲು ತಾಕುವಂತೆ ಬಾಳುವೆ ನಡೆಸಬೇಕು. ಬೆನ್ನ ಹಿಂದೆ ಬಿರುನುಡಿಗಳು ಕೇಳಿ ಬಂದರೂ ಸರಿಯೇ ಆತ್ಮಸಾಕ್ಷಿಗೆ ಅನುಗುಣವಾಗಿಯೇ ಈಸಬೇಕು, ಇದ್ದು ಜೈಸಬೇಕು ಎಂಬ ಆದರ್ಶ-ತತ್ವಗಳನ್ನು ಇಟ್ಟುಕೊಂಡು ಬದುಕುತ್ತಿರುವ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೋಹನ ಬಸನಗೌಡ ಪಾಟೀಲರ ವ್ಯಕ್ತಿತ್ವ ಅನುಕರಣೀಯವಾದುದು.

- Advertisement -

ಬಹುಶಃ ನನಗೆ ಸೂಕ್ತ ಸಮಯದಲ್ಲಿ ಸಿಗದೇ ಇದ್ದರೆ, ನನ್ನ ಇಷ್ಟೆಲ್ಲ ಸಾಹಿತ್ಯಿಕ ಸಾಧನೆಗಳು ಸಾಧ್ಯವಾಗುತ್ತಲೇ ಇರಲಿಲ್ಲ. ನನಗೆ ಒಮ್ಮೊಮ್ಮೆ ಅನ್ನಿಸಿದ್ದುಂಟು; ಅಷ್ಟು ಎತ್ತರದ ಸಾಧನೆ ಮಾಡಿರುವ ವ್ಯಕ್ತಿ ಇಷ್ಟು ಸರಳವಾಗಿ, ಸಾಮಾನ್ಯರೊಂದಿಗೆ ಸಾಮಾನ್ಯರಾಗಿ ಇರಲು ಹೇಗೆ ಸಾಧ್ಯ? ಅದಕ್ಕೆ ಅವರ ಮುಗ್ಧ ನಗೆಯೇ ಉತ್ತರ.

ನಾನು ಬರೆಯಲು ತೊಡಗಿದ್ದು 2000 ಇಸವಿಯಿಂದ. ಬದುಕಿನ ದಟ್ಟ ಅನುಭವಗಳೇ ಕೈಹಿಡಿದು ಬರೆಸಲು ಪ್ರಾರಂಭಿಸಿದವು. ನಾಡಿನ ಪತ್ರಿಕೆಗಳಲ್ಲಿ ನನ್ನ ಬರಹಗಳು ಪ್ರಕಟವಾಗುತ್ತಿದ್ದ ಸಂದರ್ಭವದು. 2007 ನೇ ಇಸವಿ ಇರಬಹುದು. ಪತ್ರಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಜಿಲ್ಲಾಮಟ್ಟದ ಕಾವ್ಯಸ್ಪರ್ಧೆಗೆ ಕವಿತೆಗಳನ್ನು ಆಹ್ವಾನಿಸಲಾಗಿತ್ತು. ನಾನೂ ಕೂಡ ಒಂದು ಕವಿತೆ ಕಳಿಸಿದ್ದೆ. ತದನಂತರ ಆಯೋಜಕರು ಗೊತ್ತುಪಡಿಸಿದ ದಿನಾಂಕದಂದು ಕಾರ್ಯಕ್ರಮ ಇಟ್ಟುಕೊಂಡು ‘ನೀವು ಬಂದು ಕವಿತೆ ಓದಬೇಕೆಂದು’ ಆಹ್ವಾನಪತ್ರಿಕೆ ಕೂಡ ಕಳಿಸಿದರು. ನಾನಾಗ ಬೈಲಹೊಂಗಲ ತಾಲ್ಲೂಕಿನ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ ಉಡಿಕೇರಿಯಲ್ಲಿ ಸಹಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೆ. ಅನಿವಾರ್ಯ ಕಾರಣದಿಂದ ನನಗೆ ಆ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ. ಒಂದಷ್ಟು ದಿನಗಳ ನಂತರ ಒಂದು ಫೋನ್ ಕರೆ ಬಂತು. “ನೀವು ಕವಿಗೋಷ್ಠಿ ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ, ನೀವು ಕಳಿಸಿದ ಕವಿತೆ ತುಂಬಾ ಚೆನ್ನಾಗಿತ್ತು. ನೀವು ಅಂದು ಬಂದು ಕವಿತೆ ಓದಿದ್ದರೆ ಪ್ರಥಮ ಬಹುಮಾನ ನಿಮಗೇ ಬರುತ್ತಿತ್ತು. ಮುಂದಿನ ಸಲ ಆಯೋಜಿಸಲಾಗುವ ಕವಿಗೋಷ್ಠಿಯನ್ನು ತಪ್ಪಿಸಿಕೊಳ್ಳಬೇಡಿ” ಎಂದು ಅತ್ತಲಿಂದ ಮಾತನಾಡುತ್ತಿದ್ದರೆ ನಾನು ಉಬ್ಬಿ ಹೋಗಿದ್ದೆ. ಕವಿಗೋಷ್ಠಿ ತಪ್ಪಿಸಿಕೊಂಡಿದ್ದಕ್ಕೆ ಪಶ್ಚಾತ್ತಾಪ ಕೂಡ ಆಗಿತ್ತು. ಆ ಕರೆಯನ್ನು ಮಾಡಿ ಮಾತನಾಡಿದವರು ಬೇರೆ ಯಾರೂ ಆಗಿರಲಿಲ್ಲ. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮೋಹನ ಬಸನಗೌಡ ಪಾಟೀಲರಾಗಿದ್ದರು. ಅಂದು ಶುರುವಾದ ನನ್ನ ಅವರ ಒಡನಾಟ, ಬಾಂಧವ್ಯ ಇಂದಿಗೂ ನಿರಂತರವಾಗಿದೆ.

ಇಂದಿಗೂ ಕೂಡ ಆ ಘಟನೆ ನನಗೆ ಕಣ್ಣಲ್ಲಿ ಅಚ್ಚೊತ್ತಿದಂತಿದೆ. ಒಂದು ಸಣ್ಣ ಅಧಿಕಾರ ಸಿಕ್ಕರೆ ನೆಲದ ಮೇಲೆ ನಿಲ್ಲದ ವ್ಯಕ್ತಿಗಳು ಇಂದಿನ ಯುಗದಲ್ಲಿರುವುದನ್ನು ನಾನು ಕಣ್ಣಾರೆ ನೋಡುತ್ತಿರುವುದರಿಂದ, ಆಗಿನಿಂದ ಈಗಿನವರೆಗೂ ಸ್ವಭಾವ, ಗುಣ, ಮಾತು, ಸಣ್ಣವರನ್ನು ಪ್ರೀತಿಯಿಂದ ಕಾಣುವ ರೀತಿ ಯಾವುದರಲ್ಲೂ ಬದಲಾವಣೆಯಾಗದ ಮೋಹನ ಸರ್ ನನಗಿಂದಿಗೂ ಒಂದು ಅಚ್ಚರಿಯಂತೆ ಕಾಣಿಸುತ್ತಾರೆ. 2008 ರ ಜನವರಿ ತಿಂಗಳಲ್ಲಿ ಗಣರಾಜ್ಯೋತ್ಸವ ನಿಮಿತ್ತ ಏರ್ಪಡಿಸಿದ ಕವಿಗೋಷ್ಠಿಯಲ್ಲಿ ನಾನು ವಾಚಿಸಿದ ಕವಿತೆಗೆ ಪ್ರಥಮ ಸ್ಥಾನ ಬಂದ ನೆನಪು ಹಚ್ಚಹಸಿರಾಗಿದೆ. ಆನಂತರ ಮೋಹನ ಬಸನಗೌಡ ಪಾಟೀಲರು ಆಯೋಜಿಸಿದ ಲೆಕ್ಕಕ್ಕೆ ಸಿಗಲಾರದಷ್ಟು ಕವಿಗೋಷ್ಠಿಯಲ್ಲಿ ನಾನು ಭಾಗವಹಿಸಿದೆ. ಪ್ರತಿ ಕವಿಗೋಷ್ಠಿಯಿಂದ ಕವಿಗೋಷ್ಠಿಗೂ ನನ್ನ ಕವಿತೆ ಮಾಗುತ್ತ, ಪಕ್ವವಾಗುತ್ತ ಹೋಯಿತು.

- Advertisement -

ಎಪಿಎಂಸಿ ಮಾರ್ಕೇಟ್‍ನಲ್ಲಿರುವ ಅವರ ಅಂಗಡಿಗೆ ಅದೆಷ್ಟೋ ಬಾರಿ ಹೋಗಿದ್ದೇನೆ. ಅದೇ ತುಂಬು ನಗುಮೊಗದಿಂದ ಬರಮಾಡಿಕೊಂಡು, ಚಹಾ ತರಿಸಿ, ಕುಡಿಸಿ, ಸಾಹಿತ್ಯಿಕ ಚರ್ಚೆಯಲ್ಲಿ ಭಾಗವಹಿಸಿದ್ದಿದೆ. ಎಷ್ಟೋ ಸಾಹಿತ್ಯಿಕ ಕಾರ್ಯಕ್ರಮಗಳ ರೂಪುರೇಷೆ ಅಲ್ಲಿಯೇ ತಯಾರಾಗಿದ್ದುಂಟು. ಅನೇಕ ಹಿರಿ-ಕಿರಿ ಸಾಹಿತಿಗಳ ಒಡನಾಟ ಕೂಡ ಅವರಿಂದಲೇ ಸಾಧ್ಯವಾದದ್ದು. ತಮಗೆ ಬರುವ ಸಾಹಿತ್ಯಿಕ ಪತ್ರಿಕೆಗಳನ್ನೆಲ್ಲ ನಮಗೆ ಓದಲು ಕೊಟ್ಟು ಬರವಣಿಗೆಗೆ ಪ್ರೋತ್ಸಾಹ ನೀಡುತ್ತಿದ್ದರು. ಪತ್ರಿಕೆಗೆ ವರದಿ ಬರೆಯುವುದು ಹೇಗೆ ಎಂಬುದನ್ನು ನಾನು ಅವರಿಂದಲೇ ಕಲಿತೆ. ಹಿರಿಯ ಸಾಹಿತಿಗಳ ಮನೆಗೆ ನನ್ನನ್ನು ಕರೆದೊಯ್ದು ಪರಿಚಯಿಸಿ, ಅವರು ಪಡೆದ ಪ್ರಶಸ್ತಿ, ಪುರಸ್ಕಾರಗಳ ಫಲಕಗಳನ್ನು ತೋರಿಸಿ, ‘ನೋಡಿ ನಾಗೇಶ್ ಅವರೆ, ನೀವು ಕೂಡ ಈ ಎಲ್ಲ ಪ್ರಶಸ್ತಿಗಳನ್ನು ಪಡೆಯುವಂತಾಗಬೇಕು. ಚೆನ್ನಾಗಿ ಓದಿ’ ಎಂದು ಹುರಿದುಂಬಿಸುತ್ತಿದ್ದರು.

ನನಗಿಂದಿಗೂ ಚೆನ್ನಾಗಿ ನೆನಪಿದೆ, ನನ್ನ ಮೊದಲ ಕವನ ಸಂಕಲನ ‘ನೀನೊಂದು ಮುಗಿಯದ ಸಂಭ್ರಮ’ ಪ್ರಕಟವಾಗಲು ಮೋಹನ ಪಾಟೀಲ ಅವರೇ ಕಾರಣ. ಖ್ಯಾತ ಹನಿಗವಿ ಜರಗನಹಳ್ಳಿ ಶಿವಶಂಕರ್ ಅವರು ತಮ್ಮ ಮಗಳ ಹೆಸರಿನಲ್ಲಿ ‘ಶುಭದಾ’ ಪ್ರಕಾಶನ (ಬರೀ ಕಾವ್ಯಕ್ಕಾಗಿಯೇ ಮೀಸಲಾಗಿರುವ ಪ್ರಕಾಶನ)ಪ್ರಾರಂಭಿಸಿದ್ದರು.

ನನ್ನ ಕವಿತೆಗಳು ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರಿಂದ ಅವನ್ನೆಲ್ಲ ಒಟ್ಟುಗೂಡಿಸಿ ಮೋಹನ ಸರ್ ಹತ್ತಿರ ತೆಗೆದುಕೊಂಡು ಹೋಗಿ ತೋರಿಸಿ ಸಂಕಲನ ಮಾಡ್ಬೇಕು ಸರ್ ಎಂದೆ. ಆಗ ಅವರು ತಮಗೆ ತೀರಾ ಪರಿಚಿತರಾಗಿದ್ದ ಜರಗನಹಳ್ಳಿ ಶಿವಶಂಕರ್ ಅವರಿಗೆ ಹೇಳಿ ನನ್ನ ಸಂಕಲನ ಪ್ರಕಟವಾಗಲು ಸಹಾಯ ಮಾಡಿದರು. ಮುನ್ನುಡಿ ಯಾರಿಂದ ಬರೆಸಬೇಕು ಎಂದು ಆಲೋಚಿಸಿದಾಗ ನನ್ನನ್ನು ಧಾರವಾಡಕ್ಕೆ ಕಳಿಸಿ, ಅಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹನಿರ್ದೇಶಕರಾಗಿದ್ದ ಕೆ.ಎಚ್.ಚೆನ್ನೂರು ಅವರಿಗೆ ಶಿಫಾರಸು ಮಾಡಿ, ನನ್ನನ್ನು ಖ್ಯಾತ ಹಿರಿಯ ಕವಿ ಚೆನ್ನವೀರ ಕಣವಿ ಅವರ ಮನೆಗೆ ಕರೆದೊಯ್ಯಲು ಹೇಳಿ, ಅವರಿಂದ ಮುನ್ನುಡಿ ಬರೆಸುವ ಪ್ರಯತ್ನ ಮಾಡಿಸಿದರು. ಒಬ್ಬ ಹಿರಿಯ ಕವಿಯನ್ನು ಕಣ್ಣಾರೆ ಕಂಡದ್ದು ಅದೇ ಮೊದಲು. ಅವರಿಗೆ ತುಂಬಾ ವಯಸ್ಸಾಗಿದ್ದರಿಂದ ‘ಮುನ್ನುಡಿ ಬೇರೆ ಯಾರಿಂದಲಾದರೂ ಬರೆಸಿ, ನನಗೀಗ ಓದಲು ಕಷ್ಟವಾಗುತ್ತಿದೆ. ನಾನು ಆಶಯ ನುಡಿಗಳನ್ನು ಬರೆದುಕೊಡುತ್ತೇನೆ’ ಎಂದರು. ಕೊನೆಗೆ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಖ್ಯಾತ ಕಥೆಗಾರರಾದ ಡಾ. ಬಸು ಬೇವಿನಗಿಡದ ಅವರಿಂದ ನನ್ನ ಕವನ ಸಂಕಲನಕ್ಕೆ ಮುನ್ನುಡಿ ಬರೆಸಿ, ಶುಭದ ಪ್ರಕಾಶನದಿಂದ ಸಂಕಲನ ಹೊರಬರಲು ಕಾರಣವಾದವರು ಮೋಹನ ಬಸನಗೌಡ ಪಾಟೀಲರು.

ಸಂಕಲನ ಬೆಂಗಳೂರಿನಲ್ಲಿಯೇ ಬಿಡುಗಡೆಯಾದ್ದು ನನ್ನ ಭಾಗ್ಯ. ಹೀಗೆ ನನ್ನ ಪ್ರತಿ ಯಶಸ್ಸಿನ ಹಿಂದೆ ಅವರ ನೆರಳಿದೆ.

ಗದಗನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಲು ಅವಕಾಶ ಸಿಕ್ಕಿದ್ದು ಅವರಿಂದ. ಮಾರನೇ ವರ್ಷವೂ ನನಗೆ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ಓದುವ ಅವಕಾಶ ದೊರೆಯಿತು. ಆಕಾಶವಾಣಿಯಲ್ಲಿ ಅವಕಾಶ ಒದಗಿಸಿದ್ದು ಮೋಹನ ಸರ್ ಅವರೇ ಎಂದು ಧನ್ಯತಾ ಭಾವದಿಂದ ನೆನೆಯುತ್ತೇನೆ. ಮುಂದೆ ನನಗೆ ದೂರದರ್ಶನ ಚಂದನ ವಾಹಿನಿಯಲ್ಲಿ ನೇರ ಸಂದರ್ಶನದ ಅವಕಾಶ ದೊರೆತಾಗ ಅವರ ಹೆಸರನ್ನು ಸ್ಮರಿಸಿಕೊಂಡೆ. ಹಾಗೆಯೇ ಮೂಡಬಿದರೆಯ ಆಳ್ವಾಸ್ ನುಡಿಸಿರಿ ಸಮ್ಮೇಳನದ ಕವಿಸಮಯ ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಾಗಲೂ ಮೋಹನ ಸರ್ ಅವರ ಪ್ರೋತ್ಸಾಹ ನೆನಪಿಸಿಕೊಂಡೆ.

ಅವರು ಸದಾ ಹೇಳುತ್ತಿದ್ದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಿರುತ್ತವೆ. ‘ಬೆಳೆಸಿದವನು ಮಾತ್ರ ಬೆಳೆಯುತ್ತಾನೆ’, ‘ವೈಯಕ್ತಿಕವಾಗಿ ಬೆಳೆಯುವುದು ಬೆಳವಣಿಗೆ ಅಲ್ಲ, ನಾಲ್ಕು ಜನರನ್ನು ಬೆಳೆಸುತ್ತಲೇ ಬೆಳೆಯುವುದು ನಿಜವಾದ ಬೆಳವಣಿಗೆ’, ‘ಸಣ್ಣವನಾಗುವುದರಲ್ಲಿಯೇ ದೊಡ್ಡತನವಿದೆ’. ಈ ಎಲ್ಲ ಮಾತುಗಳಿಗೂ ಆದರ್ಶಪ್ರಾಯವಾಗುವಂತೆ ಮಾದರಿಯಾಗಿ ಬದುಕುತ್ತಿರುವ ಅವರು ಅದೆಷ್ಟೋ ಎಲೆಮರೆಯ ಕಾಯಂತಿರುವ ಬರಹಗಾರರಿಗೆ ವೇದಿಕೆ ಒದಗಿಸಿದ್ದಾರೆ. ಇಂದಿಗೂ ಬೆಳೆಸುತ್ತಲೇ ಇದ್ದಾರೆ. ಅಧಿಕಾರ ಮುಖ್ಯವಲ್ಲ, ಅಧಿಕಾರದಲ್ಲಿರುವಾಗ ಎಷ್ಟು ಜನರಿಗೆ ಒಳ್ಳೆಯದನ್ನು ಮಾಡಿದೆವು ಎನ್ನುವುದು ಮುಖ್ಯ ಎಂದು ನಂಬಿರುವ, ‘ಎನಗಿಂತ ಕಿರಿಯರಾರಿಲ್ಲ’ ಎನ್ನುವ ಬಸವ ತತ್ವದಂತೆ ಮುಕುಟಪ್ರಾಯರಾಗಿ ಬಾಳುತ್ತಿರುವ ಅವರ ಬಗ್ಗೆ ನನ್ನ ಎದೆಯಾಳದ ಅಭಿಮಾನದ ಮಾತುಗಳನ್ನು ಬರೆಯಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಅವರು ನಮ್ಮ ಜೊತೆ ಹೀಗೆ ನೂರ್ಕಾಲ ಆರೋಗ್ಯವಾಗಿ, ನಗುನಗುತ್ತಾ ಇರಲಿ ಎಂದು ಪ್ರಾರ್ಥಿಸುತ್ತೇನೆ.

ತುಂಬ ವರ್ಷಗಳ ಹಿಂದೆ ಅವರ ವ್ಯಕ್ತಿತ್ವವನ್ನು ಬಣ್ಣಿಸುವ ಕವಿತೆ ಒಂದನ್ನು ಬರೆದಿಟ್ಟಿದ್ದೆ. ತೋರಿಸಿದರೆ ಏನನ್ನುತ್ತಾರೋ ಎಂಬ ಸಂಕೋಚದಿಂದ ತೋರಿಸಿರಲಿಲ್ಲ. ಅವರ ಹುಟ್ಟು ಹಬ್ಬದ ಈ ಸುಸಂದರ್ಭದಲ್ಲಿ ಆ ಕವಿತೆಯನ್ನು ಅವರಿಗೆ ಅರ್ಪಿಸುತ್ತೇನೆ, ಒಪ್ಪಿಸಿಕೊಳ್ಳಿ ಸರ್.

ಸಕ್ಕರೆ ನಾಡಿನ ಹಿರಿಮೆ ಮೋಹನ ಪಾಟೀಲರು

ಬೆಳೆವ ಪೈರು
ಬೀಸುವ ಗಾಳಿಗೆ
ತಲೆ ಬಾಗುವ ಹಾಗೆ
ಎತ್ತರೆತ್ತರಕ್ಕೇರಿದರೂ
ನೆಲದ ನಂಟಿನ ಸೌಖ್ಯವ
ಮರೆಯದ ನಿಮ್ಮ ಘನತೆಗೆ
ಮಾರು ಹೋಗದವರಿಲ್ಲ

ಕಣ್ಮುಂದೆ ಬೆಳೆದ
ಪಡ್ಡೆ ಹೈಕಳೆಲ್ಲ
ಏರಿದ ಏಣಿ ಒದ್ದು
ಮೆರೆದರೂ…..
ಮೌನವಾಗಿಯೇ ನುಂಗಿ
ಮುಗುಳ್ನಕ್ಕು, ಬೆನ್ನು ಸವರಿ
ಹುರಿದುಂಬಿಸುವ ಗುಣ
ನಿಮ್ಮ ನೋಡಿಯೇ ಕಲಿಯಬೇಕು

ಅಲ್ಪ ಕಾಲದಲ್ಲಿಯೇ
ಅಧಿಕ ಸಾಧನೆಗೈದ ಕೀರ್ತಿ
ನಿಮ್ಮ ಹೆಗಲಿಗೇರಿದರೂ
ಜನಸಾಮಾನ್ಯರ ನಡುವೆ
ಸಾಮಾನ್ಯನಾಗಿ ಬೆರೆತು
ಅತಿವಿನಯನಂತೆ
ಹಲವರ ಅಳಲಿಗೆ
ಹೆಗಲು ಕೊಡುವ
ಕರುಣಾಮಯಿ ನೀವು

ಸಕ್ಕರೆ ನಾಡಿನ ಹಿರಿಮೆ
ಬೆಳಗಾವಿಯ ಗರಿಮೆ
ಉತ್ತರೋತ್ತರ ಹಬ್ಬಲಿ
ನಿಮ್ಮಯ ಸಾಧನೆಯ ಗೆಲುಮೆ
ಸದಾ ಹೀಗೆಯೇ ಇರಲಿ
ಕಿರಿಯರ ಮೇಲೆ
ತಮ್ಮಯ ಒಲುಮೆ!


ನಾಗೇಶ್ ಜೆ. ನಾಯಕ ಶಿಕ್ಷಕರು,
ಶ್ರೀ ರಾಮಲಿಂಗೇಶ್ವರ ಹೈಸ್ಕೂಲ್,
ಉಡಿಕೇರಿ-೫೯೧೧೦೪ ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ. ಮೊಬೈಲ್-9900817716

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group