ಸೊನ್ನ ಬ್ಯಾರೇಜ್ ನಲ್ಲಿ 1ಲಕ್ಷ 21 ಸಾವಿರ ಒಳಹರಿವು; ಭೀಮಾ ನದಿಗೆ ಪ್ರವಾಹ

0
279

ಸಿಂದಗಿ: ಮಹಾರಾಷ್ಟ್ರದ ಉಜನಿ ಮತ್ತು ವೀರ ಜಲಾಶಯಗಳಿಂದ ಭೀಮಾನದಿಗೆ ಹರಿಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ನಿನ್ನೆಗಿಂತ ಇಂದೂ ಕೂಡಾ ಹೆಚ್ಚಳ ಕಂಡು ಬಂದಿದೆ ಹೀಗಾಗಿ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕೆಲ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ತಾಲೂಕಿನ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್ ನಲ್ಲಿ ರವಿವಾರ ಸಂಜೆ 6ಕ್ಕೆ 1ಲಕ್ಷ 21 ಸಾವಿರ ಒಳಹರಿವು ಇದ್ದು, 14 ಗೇಟ್ ಗಳ ಮೂಲಕ ನೀರು ನದಿಯ ಕೆಳ ಭಾಗಕ್ಕೆ ಬಿಡಲಾಗುತ್ತಿದೆ ಎಂದು ಸೊನ್ನ ಬ್ಯಾರೇಜ್‍ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇವಣಗಾಂವದ ಕೇಂದ್ರೀಯ ಜಲಮಾಪನ ಕೇಂದ್ರದ ಭೀಮಾ ಸೇತುವೆಯ ಮಾಪನ ಪಟ್ಟಿಯಲ್ಲಿ ಶನಿವಾರ ಸಂಜೆ 4 ಕ್ಕೆ 6.00ಮೀ. ಹರಿಯುತ್ತಿದ್ದ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿ ರವಿವಾರ ಸಂಜೆ 6ಕ್ಕೆ 7.150 ಮೀ. ನೀರು ಹರಿಯುತ್ತಿದೆ ಎಂದು ಕೇಂದ್ರೀಯ ಜಲಮಾಪನ ಕೇಂದ್ರದ ಅಧಿಕಾರಿ ನಾಗರಾಜ ಬಸೆಟ್ಟಿ, ಎಂ.ವೆಂಕಟಣ್ಣ ತಿಳಿಸಿದ್ದಾರೆ.

ದೇವಣಗಾಂವ ಕೇಂದ್ರೀಯ ಜಲ ಮಾಪನ ಪಟ್ಟಿಯಲ್ಲಿ 8 ಮೀ. ಮೇಲ್ಪಟ್ಟು ನೀರು ಹರಿದರೆ ಅದು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಘೋಷಿಸಲಾಗುತ್ತದೆ 8 ಮೀ. ನೀರು ಹೆಚ್ಚಾಗಿದೆ ಹಳೆತಾರಾಪುರ ಮತ್ತು ಶಂಬೆವಾಡ ಗ್ರಾಮಗಳ ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.

ರೈತರು ತಮ್ಮ ಪಂಪಸೆಟ್ ಗಳ ತೆರವು ಮುಂದುವರೆಸಿದ್ದಾರೆ ಕೆಲ ರೈತರ ಪಂಪಸೆಟ್‍ಗಳು ನೀರಿಗೆ ಆಹುತಿಯಾಗಿವೆ. ಅಲ್ಲದೇ ನದಿತೀರದ ತಗ್ಗು ಪ್ರದೇಶಗಳ ಜಮೀನುಗಳಿಗೆ ನೀರು ನುಗ್ಗುತ್ತಿದ್ದು ಕಬ್ಬು, ಹತ್ತಿ, ತೊಗರಿ ಮುಂತಾದ ಬೆಳೆಗಳು ನೀರಿಗೆ ಆಹುತಿಯಾಗಿವೆ.

ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ಶಂಬೆವಾಡ, ಕಡ್ಲೇವಾಡ, ಕುಮಸಗಿ, ಗ್ರಾಮಗಳ ಜನವಸತಿ ಪ್ರದೇಶಗಳ ಸಮೀಪ ಕ್ರಮೇಣ ನೀರು ಆವರಿಸುತ್ತಿದ್ದು ವಿಷ ಜಂತುಗಳ ಕಾಟ ಹೆಚ್ಚಾಗಿ ಜನ ಭಯಭೀತಗೊಂಡಿದ್ದಾರೆ.

ಬಾರಕೇಡ ಬೀಳಗಿ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆ ಮೇಲೆ ಶಿರಸಗಿ ಸಮೀಪದ ಶಿರಸಗಿ- ದೇವರನಾವದಗಿ ಗ್ರಾಮಗಳ ಮಧ್ಯದ ಹೆಬ್ಬಳ್ಳ ಕ್ಕೆ ಅಪಾರ ನೀರು ಒತ್ತೇರಿ ಬಂದಿದ್ದು ಸಂಪರ್ಕ ಕಡಿತಗೊಂಡಿದೆ. ಇದರಿಂದ ಮೋರಟಗಿ ಆಲಮೇಲ ಭಾಗದ ಸಂಪರ್ಕ ಕಡಿತವಾಗಿದೆ ಅಲ್ಲದೇ ಈ ಹೆಬ್ಬಳ್ಳದ ಸುತ್ತಲಿನ ಬಗಲೂರು, ಶಿರಸಗಿ ಗ್ರಾಮಗಳ ಸಾವಿರಾರು ಎಕರೆ ಬೆಳೆ ನೀರಿನಲ್ಲಿ ನಿಂತಿದೆ.

ದೇವಣಗಾಂವ -ಶಿವಪೂರ ಬ್ಯಾರೆಜ್‍ಗಳು ಸಂಪುರ್ಣ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ