ಮೂಡಲಗಿ: ಸ್ಥಳೀಯ ಲಕ್ಷ್ಮೀ ನಗರದ ನಿವಾಸಿಗಳ ಬಹು ದಿನದ ಬೇಡಿಕೆಯಾಗಿದ್ದ ಹಾಳು ಬಿದ್ದಿದ್ದ ಪುಠಾಣಿ ಭಾವಿಯನ್ನು ಮುಚ್ಚುವ ಕಾರ್ಯ ಮಂಗಳವಾರ ಸಂಜೆ ಆರಂಭಗೊಂಡಿತು.
ಹಲವಾರು ವರ್ಷಗಳಿಂದ ಈ ಭಾವಿಯ ಉಪಯೋಗ ನಿಂತು ಹೋಗಿದ್ದು ಒಳಗೆಲ್ಲ ಮುಳ್ಳು ಕಂಟಿಗಳು ಬೆಳೆದು ಹಾವುಗಳು ವಾಸ ಮಾಡುವ ತಾಣವಾಗಿತ್ತು ಈ ಬಗ್ಗೆ ಇಲ್ಲಿನ ನಿವಾಸಿಗಳು ಹಲವು ಬಾರಿ ಪುರಸಭೆಯವರಿಗೆ ಮನವಿ ಮಾಡಿಕೊಂಡು ಭಾವಿಯನ್ನು ಮುಚ್ಚಲು ಹೇಳಿದ್ದರೂ ಪುರಸಭೆಯವರು ಮುಚ್ಚಿರಲಿಲ್ಲ.
ಮಂಗಳವಾರದಂದು ಇದೇ ವಿಷಯವನ್ನಿಟ್ಟುಕೊಂಡು ನಿವಾಸಿಗಳು ಮಹಿಳೆಯರೆಲ್ಲ ಸೇರಿಕೊಂಡು ಪುರಸಭೆಗೆ ಮುತ್ತಿಗೆ ಹಾಕಿ ಹಾಳು ಭಾವಿ ಮುಚ್ಚದಿದ್ದರೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಬೆಳಿಗ್ಗೆಯಿಂದ ಪುರಸಭೆಯ ಕಾರ್ಯಾಲಯದ ಎದುರು ಧರಣಿ ಕುಳಿತ ನಿವಾಸಿಗಳು ಭಾವಿಯನ್ನು ಮುಚ್ಚುವವರೆಗೂ ಹೋಗುವುದಿಲ್ಲ ಎಂದು ಹಟ ಹಿಡಿದ ಕಾರಣ ಪುರಸಭೆಯ ಸದಸ್ಯರು, ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿ ಎಲ್ಲರೂ ಸೇರಿ ಸಭೆ ನಡೆಸಿ ಕೊನೆಗೆ ಭಾವಿ ಮುಚ್ಚಲು ತೀರ್ಮಾನ ತೆಗೆದುಕೊಂಡಿದ್ದರಿಂದ ಸಂಜೆಯ ವೇಳೆಗೆ ಜೆಸಿಬಿ ಮೂಲಕ ಭಾವಿ ಮುಚ್ಚುವ ಕೆಲಸ ಆರಂಭಗೊಂಡು ಈಗ ಅರ್ಧ ಕಾಮಗಾರಿ ಮುಗಿದಿದೆ.
ಸ್ಥಳೀಯ ವಾರ್ಡ್ ಸದಸ್ಯರ ಪತಿ ಅನ್ವರ ನದಾಫ ನೇತೃತ್ವದಲ್ಲಿ ಭಾವಿಯನ್ನು ಮುಚ್ಚುವ ಕಾರ್ಯ ಆರಂಭಿಸಲಾಯಿತು. ಸಂತ್ರಾಮ ನಾಶಿ, ಅಶೋಕ ವಾಣಿ, ಮಹಾಂತೇಶ ಕಲ್ಲೋಳಿ ಹಾಗೂ ಅಪಾರ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಸೇರಿದ್ದರು