ಎನ್ ಎಸ್ ಎಸ್ ವಿಶೇಷ ಶಿಬಿರ

0
348

ನವಭಾರತ ನಿರ್ಮಾಣ ಸ್ತ್ರೀಶಕ್ತಿಯಿಂದ ಸಾಧ್ಯ – ಜಯಶ್ರೀ ಅಬ್ಬಿಗೇರಿ

ಬೆಳಗಾವಿ: ಬದುಕಿನಲ್ಲಿ ಎಲ್ಲ ಪಾತ್ರಗಳನ್ನು ನಿಭಾಯಿಸುವ ಶಕ್ತಿ ಮಹಿಳೆಗಿದೆ. ಆಕೆ ದಿಟ್ಟೆ. ಉದ್ಯೋಗ, ಮನೆ ಎರಡೂ ಕಡೆ ಜವಾಬ್ದಾರಿ ನಿಭಾಯಿಸಬಲ್ಲಳು. ಆಕೆ ಕ್ಷಮಯಾಧರಿತ್ರಿ. ನವಭಾರತ ನಿರ್ಮಾಣ ಸ್ತ್ರೀಶಕ್ತಿಯಿಂದ ಸಾಧ್ಯ. ಕಿತ್ತೂರ ರಾಣಿ ಚೆನ್ನಮ್ಮ ಒನಕೆ ಓಬವ್ವರಂಥವರ ಹೋರಾಟಗಳು ಮಹಿಳಾ ಸಾಧಕರಿಗೆ ಸ್ಪೂರ್ತಿಯಾಗಿವೆ. ಎಲ್ಲ ಹೆಣ್ಣು ಮಕ್ಕಳಲ್ಲಿ ಯಾವುದಾದರೊಂದು ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಬೈಲಹೊಂಗಲ ತಾಲೂಕಿನ ನಾಗನೂರ ಸರಕಾರಿ ಎಸ್ ಪಿ ಎಮ್ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಜಯಶ್ರೀ ಅಬ್ಬಿಗೇರಿ ಹೇಳಿದರು. 

ಬೆಳಗಾವಿಯ ಸರಕಾರಿ ಸರಸ್ವತಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ವಿಶೇಷ ಶಿಬಿರ ಮುಚ್ಚಂಡಿ ಗ್ರಾಮದಲ್ಲಿ ನಡೆಯಿತು. 

ಈ ಸಂದರ್ಭದಲ್ಲಿ ಜಯಶ್ರೀ ಅಬ್ಬಿಗೇರಿಯವರು  ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಆಧುನಿಕ ಯುಗದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಸ್ತ್ರೀಯರಿಗೆ ರಕ್ಷಣೆಯೇ ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತವೆ. ಇಂತಹ ಹೇಳಿಕೆಗಳಿಂದ ಸ್ವಾವಲಂಬಿ ಮಹಿಳೆಯರ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಏನೆಲ್ಲ ಸಾಧನೆ ಮಾಡಿದ್ದಾರೆ ಎಂದು ಸಾರುವ ನಿಟ್ಟಿನಲ್ಲಿ ಅನೇಕ ಸಾಧಕ  ಮಹಿಳೆಯರು ಸಾಕ್ಷಿಯಾಗಿದ್ದಾರೆ ಮತ್ತು ಎಲ್ಲರ ಗಮನ ಸೆಳೆದಿದ್ದಾರೆ.

ಮಹಿಳೆಯರು ಏನೂ ಕಮ್ಮಿಯಿಲ್ಲ. ಶಿಕ್ಷಣ ಪಡೆದು ಸ್ವಯಂ ಸಬಲೀಕರಣಗೊಂಡು ಮತ್ತೊಬ್ಬರಿಗೆ ಸಬಲೀಕರಣದ ಅರಿವನ್ನು ಮೂಡಿಸಬೇಕು. ಹಾಗೆಯೇ ಆರ್ಥಿಕ ಭದ್ರತೆಯನ್ನು ಹೊಂದಿ ಸ್ವಾವಲಂಬನೆಯ ಜೀವನವನ್ನು ನಡೆಸಬೇಕೆಂದು ಸಲಹೆ ನೀಡಿದರು. 

ಎನ್ ಎಸ್ ಎಸ್ ಸ್ವಯಂ ಸೇವಕಿ ಅರ್ಪಣಾ ಪಾಟೀಲ ಮಹಿಳೆಯರು ಋತು ಚಕ್ರವನ್ನು ನಿರ್ವಹಿಸುವುದರ ಕುರಿತಾಗಿ ಜಾಗೃತಿ ಮೂಡಿಸಿದರು. 

ಅಧ್ಯಕ್ಷತೆ ವಹಿಸಿದ್ದ ಸುಜಾತಾ ಮಡಿವಾಳ, ಹೆಣ್ಣುಮಕ್ಕಳು ಕೇವಲ ಮನೆಗೆಲಸಗಳಿಗೆ ಮಾತ್ರ ಸೀಮಿತರಾಗದೇ ಸಂಗೀತ, ಸಾಹಿತ್ಯದಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಅತಿಥಿ ಸ್ಥಾನದಲ್ಲಿ ಉಪನ್ಯಾಸಕಿ ಅನುಪಮಾ. ಎನ್ ವ್ಹಿ, ಪ್ರತಿಭಾ ಕುಂಡೇಕಾರ, ಅಶ್ವಿನಿ ಚೌಗಲೆ, ಬಸವರಾಜ ಬಾಗಲಕೋಟಿ ಇದ್ದರು.

ಎನ್ ಎಸ್ಎಸ್ ಕಾರ್ಯಕ್ರಮಾಧಿಕಾರಿ ಅನಸೂಯಾ ಬಿ ಹಿರೇಮಠ ಅವರ ನೇತೃತ್ವದಲ್ಲಿ ಶಿಬಿರಾರ್ಥಿಗಳು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.