ಹೇ ಶುಭಾಂಗಿ,
ಚೆಂದದ ಚೆಲುವನ್ನೆಲ್ಲ ಎರಕ ಹೊಯ್ದು ಮಾಡಿದ ಚೆಲುವಿ ನೀನು. ನಿನ್ನ ಚೆಲುವಿಕೆ ಕಂಡು ಕನಸು ಕಾಣದ ಗಂಡು ಹೈಕ್ಳಿಲ್ಲ ಅಂತನೇ ಹೇಳಬೇಕು. ಚೆಲುವಿಕೆಗೆ ಚುಕ್ಕಿ ಇಟ್ಟಂತೆ ಮೃದು ಸ್ವಭಾವ. ಯಾರ ಮನಸ್ಸಿಗೂ ನೋಯಿಸದಂತೆ ಮಾತನಾಡುವ ಕಲೆಯನ್ನು ಅದೆಲ್ಲಿ ಕಲಿತಿದ್ದಿಯೋ ಗೊತ್ತಿಲ್ಲ.
ನಾನೇ ಎಂದು ಅಹಂಕಾರದಿಂದ ತಿರುಗುವವರು ನಿನ್ನತ್ತ ನೋಡುವ ಹಾಗೆ ಮಾಡುವ ಗತ್ತು ನಿನ್ನಲ್ಲಿದೆ. ಆ ನಿನ್ನ ಗತ್ತು ಮೈಗೆ ತಂಗಾಳಿ ತೀಡಿದಂತೆ ಅನಿಸುತ್ತದೆ. ನಿನ್ನ ಮಾತಿನ ಮುತ್ತು ಮೊದಲ ಮಳೆಯ ಪುಟ್ಟ ಹನಿಯಿದ್ದಂತೆ. ಕಿವಿಗೆ ಕೇಳಲು ಇಂಪು ಅಷ್ಟೇ ಅಲ್ಲ, ಆ ಘಮವೂ ಮನದಲ್ಲಿ ಹಾಗೆ ಉಳಿದುಬಿಡುತ್ತದೆ. ಎದೆಗೆ ತಂಪು ನೀಡುತ್ತದೆ.
ಎದೆಯ ಕಾಲುದಾರಿ ತುಂಬೆಲ್ಲ ನಿನ್ನದೇ ಹೆಜ್ಜೆ ಗುರುತು ತುಂಬಿರುವಾಗ ಬೇರೆ ಯಾವುದಕ್ಕೂ ಜಾಗವೇ ಇಲ್ಲ. ಲವಲವಿಕೆಯಿಂದ ಇರುವ ಜಾಲಿ ಸ್ವಭಾವದವಳು. ಕನಸಿನಲ್ಲಿ ಜಂಟಿಯಾಗಿ ಕಾಡಿಸುವವಳು. ಎದೆಯ ಗದ್ದೆಯಲ್ಲಿ ಕನಸನ್ನು ಬೆಳೆಸಿದವಳು ನಾನು ಮದುವೆ ಆಗುವ ಹುಡುಗಿ ನಿನ್ನ ಹಾಗಿರಬೇಕು ಎನ್ನುವ ಕನಸು ಕಣ್ಣಿನಲ್ಲಿ ಬಿತ್ತಿದವಳು. ಪ್ರೀತಿ ಅನ್ನೋದು ಎಲ್ಲಿ ಯಾರಿಗೆ ಯಾವಾಗ ಹೇಗೆ ಹುಟ್ಟುತ್ತದೆ ಅಂತ ಹೇಳುವುದು ಕಷ್ಟ. ಜಗತ್ತು ನಿಂತಿರುವುದೇ ಪ್ರೀತಿ ಎನ್ನುವ ಸವಿಯ ಮೇಲೆ. ಅದನ್ನು ಹೊರತು ಪಡಿಸಿದರೆ ಜೀವನವೇ ಶೂನ್ಯ. ಅದೊಂದು ಬಿಡಿಸಲಾಗದ ಬಾಂಧವ್ಯ.ಈ ಬಾಂಧವ್ಯ ಎರಡು ಮನಸುಗಳ ಮಿಲನದಿಂದ ಮಾತ್ರ ಚೆಂದಗಾಣುತ್ತದೆ. ಎಂದೆಲ್ಲ ಸವಿ ಸವಿ ಮಾತನಾಡುತ್ತ ಮನಸ್ಸಿನಲ್ಲಿ ಮನೆ ಮಾಡಿದವಳು. ನಿನ್ನ ಬಗ್ಗೆ ಅದೆಷ್ಟು ಹೇಳಿದರೂ ಕಮ್ಮಿಯೇ ಬಿಡು.
ನಿನ್ನ ಅಂದದ ನೋಟ ಚೆಂದದ ಮಾಟ ಮೋಹಕ ನಗು ನೋಡಲು ಎರಡು ಕಣ್ಣು ಸಾಲದು ಸೌಂದರ್ಯ ರಾಶಿ ಯಾವ ವಯಸ್ಸಿನವರನ್ನಾದರೂ ಸರಿ ಒಂದು ಸಲ ತಿರುಗಿ ನೋಡುವ ಹಾಗೆ ಮಾಡುವಂಥದ್ದು. ಹೀಗಿರುವಾಗ ಹರೆಯದ ಹೈದರಿಗೆ ಕಾಡದೇ ಬಿಡುತ್ತದೆಯೇನು? ಸದಾ ಓದು ಬರಹದಲ್ಲಿ ದಿನಗಳೆಯುತ್ತಿದ್ದ ನನಗೆ ಹೊರ ಜಗತ್ತನ್ನು ನೋಡುವಂತೆ ಮಾಡಿದವಳೇ ನೀನು. ನಿನ್ನ ಪ್ರೀತಿಯ ಒರತೆ ಅಪ್ಯಾಯತೆಗಳು ನನ್ನನ್ನು ನಿನ್ನತ್ತ ವಾಲುವಂತೆ ಮಾಡಿದವು. ಜೀವನದ ಕುರಿತು ಇನ್ನಷ್ಟು ಮತ್ತಷ್ಟು ಬೆಟ್ಟದಷ್ಟು ಆಸೆ ಆಕಾಂಕ್ಷೆಗಳನ್ನು ಕಟ್ಟಿಕೊಳ್ಳುವ ಹಾಗೆ ಮಾಡಿದೆ. ಎಷ್ಟೆಷ್ಟೋ ಸುಂದರಿಯರು ನನ್ನ ಜಾಣ್ಮೆಗೆ ಒಲಿದು ತಾವಾಗಿಯೇ ಒಲವು ಕೇಳಿಬಂದಿದ್ದರೂ ಕ್ಯಾರೆ ಅನ್ನದ ನಾನು ನಿನ್ನನ್ನು ಬರಬರುತ್ತ ಅವಶ್ಯಕತೆಗೆ ಹೆಚ್ಚು ಹಚ್ಚಿಕೊಂಡಿದ್ದೇನೆ ಅನಿಸಿದರೂ ಅದರಲ್ಲಿ ಏನೋ ಒಂಥರ ಖುಷಿಯಿತ್ತು. ಸಂತೋಷವಿದ್ದರೂ ನಾನೆಲ್ಲಿ ದಾರಿ ತಪ್ಪುತ್ತಿದ್ದೇನೋನೋ ಎಂದು ಒಂದೊಂದು ಸಲ ಗಾಬರಿಯಾಗುತ್ತಿತ್ತು. ಅದನ್ನು ನಿನ್ನ ಮುಂದೆ ಹೇಳಬೇಕೆಂದರೆ ಹೆದರಿಕೆ ಅಡ್ಡ ಬರುತ್ತಿತ್ತು. ನಿಜವಾದ ಪ್ರೀತಿ ಎಂದಿಗೂ ಸಾಯುವುದಿಲ್ಲ. ಎಂದು ಅಂದು ನೀ ಹೇಳಿದ ಮಾತು ನನಗೀಗಲೂ ಮಾಸಲಾಗದ ಸವಿನೆನಪುಗಳ ಹೂರಣದಂತಿದೆ.
ಕಿತ್ತು ತಿನ್ನುವ ಬಡತನದ ಅವಮಾನಗಳನ್ನು, ಯಾರೊಂದಿಗೂ ಹಂಚಿಕೊಳ್ಳಲಾಗದ ವಿಷಯಗಳನ್ನು ಸಲೀಸಾಗಿ ಸಲುಗೆಯಿಂದ ನಿನ್ನೊಂದಿಗೆ ಮಾತ್ರ ಹಂಚಿಕೊಳ್ಳುತ್ತಿದ್ದೆ. ಬಡತನದ ಸಮಯದಲ್ಲಿ ನಮ್ಮೊಡನೆ ಇರದವಳು ಮಡದಿಯೇ ಅಲ್ಲ ಅನ್ನೋ ಮಾತನ್ನು ಕೇಳಿದ್ದೆ. ಗೆಳತಿಯಾಗಿ ಕಷ್ಟದ ಸಮಯದಲ್ಲಿ ನನಗೆ ಸಹಾಯಕ್ಕೆ ಬರುವಂತೆ ನಿನ್ನಪ್ಪನಿಗೆ ಹೇಳಿ ಕಾಲೇಜಿನ ಫೀಸು ಕಟ್ಟಿದ್ದು ಪುಸ್ತಕ ಕೊಡಿಸಿದ್ದು ಮರೆಯುವುದಾದರೂ ಹೇಗೆ? ಕ್ಷಣಿಕ ಸುಖಕ್ಕೋಸ್ಕರ ಜನಪ್ರಿಯತೆಯ ಹುಚ್ಚು ಗೀಳಿಗೋಸ್ಕರ ಎಂದೂ ಮೌಲ್ಯಗಳನ್ನು ದೂರ ತಳ್ಳಿ ನಡೆಯುವ ಸ್ವಭಾವ ನಿನ್ನದಲ್ಲ.
ಅದೊಮ್ಮೆ ಕಾಲೇಜಿನಿಂದ ಪ್ರವಾಸಕ್ಕೆ ಹೋದಾಗ ಕಾಡಿನ ನಡುವೆ ಸಾಗುತ್ತಿದ್ದೆವು. ದೃಷ್ಟಿಗೆ ನಿಲುಕದ ಎತ್ತರಕ್ಕೆ ಬೆಳೆದ ಬೃಹದಾಕಾರದ ಮರಗಳು. ಅವುಗಳ ಅಡಿಯಲ್ಲಿ ಪೊದೆಯಾಗಿ ಬೆಳೆದ ಗುರುತಿಸಲಾಗದ ಚಿಕ್ಕ ಪುಟ್ಟ ಸಸ್ಯಗಳ ನಡುವೆ ನಿಂತ ನಾವುಗಳು. ಸುತ್ತಲಿನ ಮರವನ್ನು ಹಬ್ಬಿಕೊಂಡು ನಿಂತ ಬಳ್ಳಿಗಳು. ತಮ್ಮಂತೆ ನಮ್ಮನ್ನು ತಬ್ಬಿಕೊಳ್ಳಿ ಎಂದು ಹೇಳುತ್ತಿವೆ ಅನಿಸಿತು. ನನಗೆ ಗೊತ್ತಿಲ್ಲದಂತೆ ಮೆಲ್ಲಗೆ ಎರಡು ತೋಳುಗಳು ಚಾಚಿದವು. ನಡುಗಿಸುವ ಗಾಳಿಗೆ ತಡೆಯಲಾರದೆ ಬೆಚ್ಚಗಿನ ಹಿತ ಬೇಕೆನಿಸಿ ನಾಚುತ್ತ ತೋಳತಕ್ಕೆಯಲ್ಲಿ ಬಿದ್ದಿದ್ದೆ.
ಆ ದಟ್ಟ ಕಾಡಿನಲ್ಲಿ ದಾರಿ ತಪ್ಪಿಸಿಕೊಂಡಿದ್ದೇವೆಯೋ ಏನೋ ಎಂದೆನಿಸಿ ಎದೆ ಝಲ್ ಎಂದಿತು. ನೀನು ಮಾತ್ರ ಕಂಗಾಲಾಗದೇ ಧೈರ್ಯದಿಂದಿದ್ದೆ. ಹಾಕಿಕೊಂಡಿದ್ದ ಜರ್ಕಿನ್‍ನ್ನು ಅಂದದ ತೆಳ್ಳನೆಯ ಶರೀರಕ್ಕೆ ಸುತ್ತಿಕೊಂಡಿದ್ದೆ. ಮಸುಕು ಮಸುಕು ಬೆಳಕಿನಲಿ ಒಲಿದ ಮೈಮನಗಳ ಚೆಲ್ಲಾಟ ನಿಜವೋ ಮಜವೋ ತಿಳಿಯದ ಗೊಂದಲವಿದ್ದರೂ ಹೊಸತು ಅನುಭವದ ಆಸೆಯಿಂದ ಅದರಕೆ ಅದರ ಕೂಡಿಸಬೇಕೆನ್ನುವಷ್ಟರಲ್ಲಿ ಮೇರೆ ಮೀರದಿರಲಿ ಸುಖದ ಸಖ್ಯ ಸಖ ಎಂದು ಉಸುರಿದೆ.
ಬರಬರುತ್ತ ಅಪ್ಪುಗೆಯ ಸೆಳೆತ ಹೆಚ್ಚಾಯಿತು. ತುಸು ಹೊತ್ತಿನಲ್ಲಿ ಪ್ರೀತಿಯ ಮಂಪರು ಕವಿದಿತ್ತು. ಅಷ್ಟರಲ್ಲಿ ಇಬ್ಬರನ್ನು ಎಚ್ಚರಿಸುವಂತೆ ಮಿಂಚೊಂದು ಮಿಂಚಿತು. ಮಿಂಚನ್ನು ಕಂಡಿದ್ದೇ ತಡ ಆಶ್ಚರ್ಯ ಭಯ ಕೌತುಕಗಳೆಲ್ಲ ಬೆರೆತ ಮಿಶ್ರಭಾವ ಅನುಭವಿಸಿದಂತಾಗಿ ಸಣ್ಣಗೆ ನಡುಗಿದೆ. ಆದರೂ ನಿನ್ನ ಬಗ್ಗೆ ಮತ್ತಷ್ಟು ಪ್ರೀತಿ ಉಕ್ಕಿತು. ಒಳಮನಸ್ಸಿನ ಅನಿಸಿಕೆಯನ್ನು ಓದಬಲ್ಲ ಬುದ್ಧಿಮತ್ತೆ ನಿನ್ನಲ್ಲಿದ್ದುದರಿಂದ ಮೆಲ್ಲಗೆ ನನ್ನ ತೋಳತೆಕ್ಕೆಯಿಂದ ಬಿಡಿಸಿಕೊಂಡು ಮೂರು ಗಂಟಿನ ನಂಟಿನಲ್ಲಿ ಜಂಟಿಯಾಗಿ ಜಂಟಿ ಆಟ ಆಡೋಣವೆಂದು ನಗು ಚೆಲ್ಲಿ ದೂರ ಸರಿದೆ.
ಅಬ್ಬಬ್ಬಾ ! ಆದೆಂಥ ಮೋಹಕತೆ ಇತ್ತು ನಿನ್ನ ಪ್ರೀತಿಯಲ್ಲಿ ಅನಿಸಿತ್ತು. ಏನೂ ಆಗಿಲ್ಲವೇನೋ ಎನ್ನುವ ರೀತಿಯಲ್ಲಿ ಎಂದಿನಂತೆ ಕಾಲ್ಗೆಜ್ಜೆ ದನಿಯ ತೋರುತ್ತ ಮುಂದೆ ಸಾಗಿದ್ದೆ. ಅಂದಿನಿಂದ ಹೃದಯ ಜೋಕಾಲಿಯಾಗಿದೆ. ಮೇಲಕ್ಕೇರಿ ಕೆಳಕ್ಕಿಳಿಯುತ್ತಿದೆ. ನಿನ್ನ ಭೇಟಿ ಬರೀ ಮಾತಿನ ಮಂಟಪವನ್ನೇನೂ ಸೃಷ್ಟಿಸಲಿಲ್ಲ. ನೀನೇ ಬೇಕು ಬರುವ ಮುಂದಿನ ಎಲ್ಲ ಜನುಮಕೂ ಮನಸ್ಸನ್ನು ಗೆದ್ದಿರುವೆ ಹೃದಯವನ್ನು ಕದ್ದಿರುವೆ. ಚೆಲುವೆ ಸಣ್ಣ ನೋವು ಕಾಡದಂತೆ ಕಾಪಿಟ್ಟುಕೊಳ್ಳುವೆ. ಮನದ ಮಾತು ಕದ್ದ ನಿನ್ನ ಕಣ್ಣಂಚಿನಲ್ಲಿ ಕಣ್ಣೀರ ಹನಿ ಜಾರದಂತೆ ನೋಡಿಕೊಳ್ಳುವೆ. ನಿನ್ನಾಸೆಯಂತೆ ನಾನೀಗ ಪೋಲಿಸ್ ಸಬ್ ಇನ್‍ಸ್ಪೆಕ್ಟರ್. ಮಂಗಳಸೂತ್ರ ಕಟ್ಟಲು ಕಾದು ನಿಂತಿರುವೆ.
ಜೀವನ ಪೂರ್ತಿ ಮನಸಾರೆ ಜಂಟಿಯಾಗಿ ಜಂಟಿ ಆಟ ಆಡಲು ತಯಾರಾಗಿ ಬಾ ಸಖಿ ಸರಸದ ರಂಗಮಂಚಕೆ. ಮಳೆ ನಿಂತರೂ ನಿಲ್ಲದ ತುಂತುರು ಹನಿಗಳಂತೆ. ಮಧುರ ನೆನಪುಗಳು ಮನಸ್ಸನ್ನು ತುಂಬಿ ಕಾಡುತಿವೆ. ಚಳಿಗಾಲ ಅಂತ್ಯಗೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಚಳಿಯಿಂದ ಕಂಗೆಟ್ಟಿದ್ದೇನೆ. ಶೀತಲ ಗಾಳಿ ಕೊರೆಯುತ್ತಿದೆ. ಬೆಚ್ಚನೆಯ ಆಟಕ್ಕೆ ಬೇಗ ಜೊತೆಯಾಗು ಬಾ ಸಖಿ. ನಿನಗೆಂದೆ ತೆರೆದಿದೆ ಎದೆಯ ಪರದೆ ಬಂದು ಬಿಡು ಶುಭಾಂಗಿ. ಹೂವಿನ ಹಂದರದ ಕೆಳಗೆ ಒಂದಾದ ಜೀವಗಳು ಹೂವಾಗಲಿ.
– ಇಂತಿ ನಿನ್ನವ ಶುಭಾಂಕ
ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142