ವರದಿ: ಪಂಡಿತ ಯಂಪೂರೆ
ಸಿಂದಗಿ: 2023ರ ವಿಧಾನಸಭಾ ಚುನಾವಣೆ ಇನ್ನೂ ನಾಲ್ಕು ತಿಂಗಳಿರುವಾಗಲೇ ಸಿಂದಗಿ ಮತಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದೆ. ಜೆಡಿಎಸ್ ಪಕ್ಷ ಅಭ್ಯರ್ಥಿ ಘೋಷಣೆ ಮೂಲಕ ರಣಕಹಳೆ ಮೊಳಗಿಸಿದ್ದು, ಕಾಂಗ್ರೆಸ್, ಜೆಡಿಎಸ್ ಬಿಜೆಪಿ ತ್ರಿಕೋನ ಸ್ಪರ್ಧೆಗಳು ನಡೆಯುವ ಸಾಧ್ಯತೆಗಳು ಹೆಚ್ಚಿವೆ ಆದಾಗ್ಯೂ ಮೂರೂ ಪಕ್ಷಗಳು ಆಯಾ ಪಕ್ಷಗಳ ಸಾಧನೆಗಳನ್ನು ಜನರ ಮುಂದಿಟ್ಟುಕೊಂಡು ಕ್ಷೇತ್ರದ ಸುತ್ತಾಟ ನಡೆಸಿ ವಿವಿಧ ಪಕ್ಷಗಳ ಮುಖಂಡರನ್ನು ಸೆಳೆಯುವುದರಲ್ಲಿ ರಾಜಕೀಯ ರಂಗ ತಾಲೀಮಿಗೆ ಮುನ್ನುಡಿ ಬರೆದಂತಾಗಿದೆ.
ಹೌದು. ಕಾಂಗ್ರೆಸ್ ಪಕ್ಷದ ಮುಖಂಡ ಅಶೋಕ ಮನಗೂಳಿ, ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜ್ಯಾಳ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸಂಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮತದಾರರ ಮನವೊಲಿಕೆಗೆ ಈಗಲೇ ಮುಂದಾಗಿದ್ದು, ತಮ್ಮ ಬೆಂಬಲಿಗರೊಂದಿಗೆ ಚುನಾವಣಾ ರಣತಂತ್ರ ರೂಪಿಸುತ್ತಿದ್ದಾರೆ. ಮತ ಬೇಟೆಗೆ ಇನ್ನಿಲ್ಲದ ಕಸರತ್ತಿಗೆ ಕೈ ಹಾಕಿದ್ದು, ತಂತ್ರ ಪ್ರತಿತಂತ್ರ ರೂಪಿಸುತ್ತ ಈ ಬಾರಿ ಶತಾಯಗತಾಯ ಗೆಲುವು ಸಾಧಿಸಲೇಬೇಕೆಂಬ ಪಣದೊಂದಿಗೆ ಶ್ರಮಪಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಅಶೋಕ ಮನಗೂಳಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ, ಮಾಜಿ ಶಾಸಕ ಅಶೋಕ ಶಾಬಾದಿ, ವಿದ್ಯಾವತಿ ಅಂಕಲಗಿ, ಜ್ಯೋತಿ ಕೋಳಿ, ರಾಕೇಶ ಕಲ್ಲೂರ ಆಕಾಂಕ್ಷಿಗಳಾಗಿದ್ದರೆ, ಆಡಳಿತಾರೂಢ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವೇನಿಲ್ಲ ಎನಿಸುತ್ತಿದ್ದು, ಹಾಲಿ ಶಾಸಕ ರಮೇಶ ಭುಸನೂರ ಅವರಿಗೆ ಬಹುತೇಕ ಮಣೆ ಹಾಕಲಿದೆ ಎಂಬುದು ಕ್ಷೇತ್ರದ ಜನಾಭಿಪ್ರಾಯವಾಗಿದೆ.
ತೆರೆಮರೆಯಲ್ಲಿ ಬಿಜೆಪಿ ಮುಖಂಡರಾದ ಕಾರ್ಮಿಕ ವಲಯದ ಜಿಲ್ಲಾ ಪ್ರಕೋಷ್ಠಕ ಮುತ್ತು ಶಾಬಾದಿ, ರಾಜ್ಯ ಕಾನೂನು ಪ್ರಕೊಷ್ಠಕ ಶಂಭು ಕಕ್ಕಳಮೇಳ ಟಿಕೆಟ್‍ಗಾಗಿ ಪೈಪೋಟಿ ನಡೆಸುತ್ತಿರುವುದು ಕೇಳಿ ಬರುತ್ತಿದ್ದರೂ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು, ಗೆಲುವಿಗೆ ಸಹಕಾರಿಯಾಗಲಿದೆ ಎಂಬುದು ಬಿಜೆಪಿಗರ ಭರವಸೆಯಾದರೆ ಕ್ಷೇತ್ರದ ಜನತೆ ಮಾತ್ರ ಹೊಸ ಮುಖಕ್ಕೆ ಮಣೆ ಹಾಕುವ ಸಾಧ್ಯತೆಗಳು ಹೆಚ್ಚಿವೆ ಎನ್ನುವ ಗುಮಾನಿಗಳು ಜನರ ಮಧ್ಯೆ ಗುಲ್ಲೆಬ್ಬಿಸಿವೆ.
ಕಳೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಸರಕಾರದ ಎಲ್ಲ ಸಚಿವರು ಈ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿ ಬಿಜೆಪಿ ಗೆಲ್ಲಲು ಕಾರಣರಾಗಿದ್ದು ಸದ್ಯ 14 ತಿಂಗಳ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಕೈ ಹಿಡಿಯುತ್ತವೆ ಅಥವಾ ಕಾಂಗ್ರೆಸ್ ಪಕ್ಷದ ಹಿಂದಿನ ಸಿಎಂ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿನ 168 ಯೋಜನೆಗಳು ಹಾಗೂ ಈ ಕ್ಷೇತ್ರ ಹಲವು ಚುನಾವಣೆಗಳಲ್ಲಿ ಮೂರನೇ ಸ್ಥಾನದಲ್ಲಿತ್ತು ಅದನ್ನು 2ನೇ ಸ್ಥಾನಕ್ಕೆ ತಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿಯುತ್ತವೆಯೋ ಅಥವಾ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಅಚ್ಚಳಿಯದ ಕಾರ್ಯಗಳನ್ನು ಮಾಡಿದೆ ಆ ಹಿನ್ನೆಲೆಯಲ್ಲಿ ಪ್ರಾದೇಶಿಕ ಜೆಡಿಎಸ್ ಪಕ್ಷಕ್ಕೆ ಮಣೆ ಹಾಕುತ್ತೋ ಕಾದು ನೋಡಬೇಕಾಗಿದೆ.
ಜೆಡಿಎಸ್ ಪಕ್ಷ ಮಾತ್ರ ಈ ಬಾರಿ ಪ್ರಬಲ ಗಾಣಿಗ ಸಮುದಾಯದ ಅಭ್ಯರ್ಥಿ ಮಾಜಿ ಸೈನಿಕ ಶಿವಾನಂದ ಪಾಟೀಲ ಸೋಮಜ್ಯಾಳ ಅವರಿಗೆ ಟಿಕೇಟ್ ನೀಡಿ ಹೊಸ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ ಆದರೆ ಕಾಂಗ್ರೆಸ್ ಪಕ್ಷ ಅಶೋಕ ಮನಗೂಳಿ ಅವರ ಹೆಸರು ಮೊದಲ ಪಟ್ಟಿಯಲ್ಲಿದೆ ಅದರಿಂದ ಇನ್ನುಳಿದ ಆಕಾಂಕ್ಷಿಗಳು ವರಿಷ್ಠರಲ್ಲಿ ಹೊಸ ತಂತ್ರಗಳನ್ನು ಹಣೆಯುವಲ್ಲಿ ತಲ್ಲೀನರಾಗಿದ್ದಾರೆ. ಬಿಜೆಪಿ ಪಕ್ಷದಲ್ಲಿ ಹಾಲಿ ಶಾಸಕ ರಮೇಶ ಭೂಸನೂರ ಅವರನ್ನು ಗುರುತಿಸುತ್ತೋ ಅಥವಾ ಹೊಸ ಅಭ್ಯರ್ಥಿಗೆ ಗಾಳ ಹಾಕುತ್ತೋ ಎನ್ನುವುದು ಜನತೆಯಲ್ಲಿ ಸಂಶಯ ವ್ಯಕ್ತವಾಗುತ್ತಿದೆ.
ಕಾಂಗ್ರೆಸ್‍ನಲ್ಲಿ ಮುಸುಕಿನ ಗುದ್ದಾಟ:
ಕಾಂಗ್ರೆಸ್ ಮನೆಯಲ್ಲಿ ಟಿಕೆಟ್‍ಗಾಗಿ ಮುಸುಕಿನ ಗುದ್ದಾಟ ಜೋರಾಗಿದ್ದು, ಹೈಕಮಾಂಡ್ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ಕಂಡು ಬರುತ್ತಿದೆ. ಕಾಂಗ್ರೆಸ್‍ನಲ್ಲಿ ಆಕಾಂಕ್ಷಿಗಳ ದಂಡು ಹೆಚ್ಚಾಗಿದ್ದು, ಅಭ್ಯರ್ಥಿ ಆಯ್ಕೆ ಪಕ್ಷಕ್ಕೂ ತಲೆ ನೋವಾಗಿದೆ. ಚುನಾವಣಾ ಸಮಯದಲ್ಲಿ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಬಾರದು ಕಾಂಗ್ರೆಸ್ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.