ಬೀದರ – ಬೀದರ ಉತ್ಸವದ ನಿಮಿತ್ತ ಬಹುಮನಿ ಕೋಟೆ ಸಿಂಗಾರಗೊಂಡು ಸಾರ್ವಜನಿಕರನ್ನು ಉತ್ಸವಕ್ಕೆ ಸಜ್ಜಾಗಿ ಕೈ ಮಾಡಿ ಕರೆಯುತ್ತಿದ್ದು ದಶಕಗಳ ನಂತರ ಗಡಿ ಬೀದರ್ ಜಿಲ್ಲೆಯ ಜನರಲ್ಲಿ ಸಂಭ್ರಮ ಮನೆ ಮಾಡಿದೆ.
ಮೂರು ದಿನಗಳ ಕಾಲ ನಡೆಯಲಿರುವ ಬೀದರ ಉತ್ಸವಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿರುವ ಜಿಲ್ಲಾಡಳಿತದ ಪರವಾಗಿ ಇಂದು ಸಾಯಂಕಾಲ ಸಂಜೆ 5.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಕೇಂದ್ರದ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಬೀದರ್ ಜಿಲ್ಲೆಯ ಜನರಿಗೆ ರಸದೌತಣ ಉಣಿಸಲು ಬರುತ್ತಿದ್ದಾರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಖ್ಯಾತ ಸಂಗೀತಗಾರರು ಮತ್ತು ಚಲನಚಿತ್ರ ನಟ ನಟಿಯರು. ಇತ್ತ ಬೀದರ ಉತ್ಸವದ ಅಂಗವಾಗಿ ಪಾರಂಪರಿಕ ನಡಿಗೆ ಅದ್ದೂರಿಯಾಗಿ ನಡೆಯಿತು . ಕೇಂದ್ರ ಸಚಿವರಾದ ಭಗವಂತ ಖೂಬಾ ಬರಿದಶಾಹಿ ಉದ್ಯಾನವನದಿಂದ ಚಾಲನೆ ನೀಡಿದರು.
ಪಾರಂಪರಿಕ ನಡಿಗೆಯು, ವೀರಗಾಸೆ ಕುಣಿತ, ಹಗಲು ವೇಷ ಸೇರಿದಂತೆ ಹಲವಾರು ಕಲಾತಂಡದೊಂದಿಗೆ ನಗರದ ಬರಿದಶಾಹಿ ಉದ್ಯಾನವನದಿಂದ ಗುರುನಾನಕ ಗೇಟ್, ಮಡಿವಾಳ ವೃತ್ತ,ರೋಟರಿ ವೃತ್ತ, ಜನರಲ್ ಕಾರಿಯಪ್ಪ ವೃತ್ತ,ಅಂಬೇಡ್ಕರ ವೃತ್ತ, ಭಗತಸಿಂಗ್ ವೃತ್ತ, ನಯಾಕಮಾನ, ಚೌಬಾರಾ ಮಾರ್ಗವಾಗಿ ಐತಿಹಾಸಿಕ ಬೀದರ ಕೋಟೆ ತಲುಪಿತು.
ಬೀದರ್ ಉತ್ಸವ ನಿಮಿತ್ತ ಹೆಲಿಕಾಪ್ಟರ್ ನಲ್ಲಿ ಕುಳಿತುಕೊಳ್ಳುವ ಭಾಗ್ಯ:
ಬೀದರ ಉತ್ಸವ ನಿಮಿತ್ತ ಜನಸಾಮಾನ್ಯರಿಗೂ ಹೆಲಿಕಾಪ್ಟರ್ ನಲ್ಲಿ ಹಾರಾಡುವ ಭಾಗ್ಯ ಸಿಗಲಿದ್ದು ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಹೆಲಿಕಾಪ್ಟರ್ ಉತ್ಸವಕ್ಕೆ ಬಿ.ವಿ.ಬಿ ಕಾಲೇಜಿನಲ್ಲಿ ಚಾಲನೆ ನೀಡಿದರು. ಮೂರು ಸಾವಿರ ರೂಪಾಯಿ ಕೊಟ್ಟರೆ ಬೀದರ ನಗರ ಸುತ್ತಾ ಒಂದು ರೌಂಡ್ ಹಾಕಲಿದೆ ಹೆಲಿಕಾಪ್ಟರ್. ಬೀದರ್ ಕೋಟೆ, ನರಸಿಂಹ ಝರ ಮಂದಿರ, ಗುರುದ್ವಾರ ಮಂದಿರ ಸುತ್ತ ಹಾಕಲಿದೆ ಹೆಲಿಕಾಪ್ಟರ್.
ಒಟ್ಟಾರೆ ಹೇಳುವುದಾದರೆ ಮದಯವಣಗಿತ್ತಿಯಂತೆ ಬೀದರ ನಗರ ಸಿಂಗಾರಗೊಂಡಿದ್ದು ಮೂರು ದಿವಸ ಹಬ್ಬದ ವಾತಾವರಣ ಇರಲಿದೆ.
ವರದಿ: ನಂದಕುಮಾರ ಕರಂಜೆ, ಬೀದರ