ಮೂಡಲಗಿ: ಕೆಲವರಿರುತ್ತಾರೆ, ಡ್ರಾಯಿಂಗ್ ಮಾಡಿದ್ದೋ ಅಥವಾ ಕ್ಯಾಮೆರಾದಲ್ಲಿ ತೆಗೆದ ಫೋಟೋವೋ ಎಂದು ಅಚ್ಚರಿ ಪಡುವಷ್ಟರ ಮಟ್ಟಿಗೆ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ.
ಅಂಥ ಕಲಾವಿದರೊಬ್ಬರು ಮೂಡಲಗಿಯಲ್ಲಿ ಇದ್ದಾರೆ. ಅವರೇ ಹಣಮಂತ ಗುಬಚಿ. ಬ್ಯಾನರ್ ಗಳ ಈ ಕಾಲದಲ್ಲಿಯೂ ತಮ್ಮ ಕೈಯಿಂದ ಅದ್ಭುತ ಚಿತ್ರ ಬಿಡಿಸುವ ಹಣಮಂತ ಗುಬಚಿಯವರ ಕಲೆ ಸುಂದರವಾದದ್ದು.
ಬಹಳಷ್ಟು ಮಂದಿ ಕ್ಯಾಮೆರಾದಲ್ಲಿ ಫೋಟೋಗಳನ್ನು ತೆಗೆಯುತ್ತಾರೆ. ಆದರೆ ಅವರಲ್ಲಿ ಕೆಲವೇ ಕೆಲವು ಮಂದಿ ಕ್ರಿಯೇಟಿವ್ ಆಗಿ ಫೋಟೋ ತೆಗೆಯುತ್ತಾರೆ. ಅದೇ ರೀತಿ ಈ ಪೆನ್ಸಿಲ್ ಡ್ರಾಯಿಂಗ್ ಕಲಾವಿದ, ಬಿಡಿಸಿದ ಚಿತ್ರವನ್ನು ಮನುಷ್ಯ ಅಥವಾ ಪ್ರಾಣಿಗಳ ಬಳಿ ಇರಿಸಿದರೆ ಯಾವುದು ಫೋಟೋ , ಯಾವುದು ಡ್ರಾಯಿಂಗ್ ಎಂಬುದನ್ನು ಹೇಳಲು ತಿಣುಕಾಡಬೇಕಾಗುತ್ತದೆ. ಅಷ್ಟು ಕರಾರುವಾಕ್ಕಾಗಿರುತ್ತದೆ ಇವರ ಗೆರೆ, ಚುಕ್ಕಿಗಳ ಆಟ.
ಹಣಮಂತ ಅವರಿಗೆ ಪೆನ್ಸಿಲ್ ಡ್ರಾಯಿಂಗ್ ಒಂದು ಹವ್ಯಾಸ. ಆಶ್ಚರ್ಯ ವೆಂದರೆ ಇವರು ಯಾವುದೇ ಚಿತ್ರಕಲಾ ಶಾಲೆಗೆ ತೆರಳಿ ಅಭ್ಯಾಸ ಮಾಡಿದವರಲ್ಲ. ಬದಲಿಗೆ ಸ್ವಯಂ ಆಸಕ್ತಿಯಿಂದ ಚಿತ್ರ ಬಿಡಿಸುವುದನ್ನು ಕಲಿತು ಈಗ ಅದನ್ನು ಕರತಲಾಮಲಕ ಮಾಡಿಕೊಂಡವರು.
ಸುಮಾರು 37 ವರ್ಷಗಳಿಂದ ಇವರು ಚಿತ್ರಕಲೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ಬಂದಿರುವ ಹಣಮಂತ ಗುಬಚಿಯವರು 1974 ರಲ್ಲಿ ಜನ್ಮ ತಾಳಿದರು. ಕಲಿತಿದ್ದು ಸ್ವಲ್ಪವೇ ಆದರೂ ಕಲೆಯನ್ನೆ ನೆಚ್ಚಿಕೊಂಡು ಅದರಲ್ಲಿ ಯಶಸ್ವಿಯಾದರು. ಫ್ಲೆಕ್ಸ್ ಬ್ಯಾನರ್ ಗಳ ಈ ಕಾಲದಲ್ಲಿಯೂ ಅವರು ತಮ್ಮ ನೆಚ್ಚಿನ ಕಲಾ ವೃತ್ತಿಯಿಂದಲೆ ಜೀವನ ಸಾಗಿಸುತ್ತಿದ್ದಾರೆ.
ವ್ಯಕ್ತಿಯಾಗಲಿ, ಸೃಷ್ಟಿಯಾಗಲಿ, ಪ್ರಾಣಿ ಪಕ್ಷಿಗಳಾಗಲಿ ಚಿತ್ರಗಳನ್ನು ಕಣ್ಮುಂದೆ ಕಟ್ಟಿದಂತೆಯೇ ಬಿಡಿಸುವ ಇವರ ಕಲೆಗೆ ಇನ್ನೂ ಹೆಚ್ಚಿನ ರೀತಿಯ ಪ್ರೋತ್ಸಾಹ ಸಿಗಬೇಕಾಗಿದೆ.