ಕನ್ಯಾ ಪಿತೃರಿಗೆ ಬುದ್ಧಿ ಬರಲಿ ಎಂದು ಕುಂಬಳಕಾಯಿಯ ಮೇಲೆ ಬರೆಯಬೇಕು

Must Read

ವಾಟ್ಸಪ್ ನಲ್ಲಿ ಒಂದು ಫೋಟೋ ಹರಿದಾಡುತ್ತಿದೆ. ಅದು ರೈತ ಯುವಕನೊಬ್ಬನ ಅಳಲು ಎಂಬುದು ಫೋಟೋ ನೋಡಿದರೆ ಸ್ಪಷ್ಟವಾಗುತ್ತದೆ. ಕೈಯಲ್ಲಿ ಎರಡು ಬಾಳೆ ಹಣ್ಣು ಹಿಡಿದಿರುವ ಯುವ ಅವುಗಳ ಮೇಲೆ ‘ ಜನರ ಮನಸ್ಸು ಬದಲಾಗಲಿ, ರೈತನಿಗೆ ಕನ್ಯಾ ಕೊಡಲಿ ‘ ಎಂದು ಬರೆದು ದೇವರಿಗೆ ಅರ್ಪಿಸಿರುವುದಾಗಿ ಫೋಟೋದ ಅಡಿಬರಹ ಹೇಳುತ್ತದೆ.

ಹೌದು, ಈಚಿನ ದಿನಮಾನಗಳ ಒಂದು ಹೊಸ ಟ್ರೆಂಡ್ ಏನೆಂದರೆ, ಹೆಣ್ಣು ಹೆತ್ತವರು ಮಗಳನ್ನು ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಮದುವೆ ಮಾಡಿ ಕೊಡುವುದು. ಆದರೆ ರಾಕೆಟ್ ವೇಗದಲ್ಲಿ ಹೆಚ್ಚಾಗಿರುವ ಜನಸಂಖ್ಯೆಯಿಂದಾಗಿ ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದಿರಲಿ, ಸರ್ಕಾರಿ ಕಚೇರಿಯಲ್ಲಿ ಚಪರಾಸಿ ಕೆಲಸ ಕೂಡ ಸಿಗುವುದು ಕಠಿಣವಾಗಿದೆ. ಕನ್ಯಾಪಿತೃ (ಕ ಪಿ) ಗಳ ಇಂಥ ನಿಲುವಿನಿಂದಾಗಿ ಚಪರಾಸಿ ಕೂಡ ತನ್ನ ಲೇವಲ್ ಅನ್ನು ಮುಚ್ಚಿಟ್ಟು ತಾನು ದೊಡ್ಡ ಸರ್ಕಾರಿ ನೌಕರನೆಂದೇ ಹೇಳಿಕೊಂಡು ಮದುವೆಯಾಗಿ ಆಮೇಲೆ ಕ ಪಿ ಗಳು ಮೋಸ ಹೋಗಿರುವ ಅನೇಕ ಉದಾಹರಣೆಗಳು ಇವೆ.

ಇದಕ್ಕೆಲ್ಲ ಕಾರಣವೆಂದರೆ ಗಂಡು-ಹೆಣ್ಣಿನ ಸಂಖ್ಯೆಯ ನಡುವೆ ಅಜಗಜಾಂತರ ವ್ಯತ್ಯಾಸವಿರುವುದು. ಹೆಣ್ಣು ಭ್ರೂಣ ಹತ್ಯೆಯಿಂದಾಗಿ ( ಇದಕ್ಕೂ ಹೆಣ್ಣಾದ ಅತ್ತೆಯೇ ಕಾರಣ ಎಂಬುದು ಇತಿಹಾಸದ ಪುಟಗಳಿಂದ ಗೊತ್ತಾಗಿದೆ ) ಹೆಣ್ಣಿನ ಸಂಖ್ಯೆ ಕಡಿಮೆಯಾಗುತ್ತ ಬಂದಿತು. ಅದು ಅಷ್ಟೇನೂ ಕಡಿಮೆಯಿಲ್ಲವೆಂದರೂ ಕನ್ಯಾ ಪಿತೃಗಳ ತಲೆಯಲ್ಲಿ ತಾನು ಸಾಕ್ಷಾತ್ ಲಕ್ಷ್ಮಿಯನ್ನೇ ಹೆತ್ತಿರುವೆ ಎಂಬ ಭಾವನೆ ಇರುವುದರಿಂದ ವರಗಳನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ಹಾಗೆ ನೋಡಿದರೆ,  ಮಗಳಿಗೆ ನೌಕರಿ ಇರುವ ವರನೇ ಬೇಕೆಂದು ದಾರಿ ಕಾಯುತ್ತ ಕುಳಿತಿರುವ ಹುಡುಗಿಯ ತಂದೆ ತಾಯಂದಿರು ತಮ್ಮ ಮಗಳ ವಯಸ್ಸು ದಾಟಿ ಹೋಗುತ್ತಿರುವುದನ್ನು ಗಮನಿಸುತ್ತಿಲ್ಲ. ಕೆಲವು ಹುಡುಗಿಯರಿಗೆ ವಯಸ್ಸಾಗಿ ಮುಖದ ಮೇಲೆ ಸುಕ್ಕುಗಳು ಬಂದಿದ್ದರೂ ಇನ್ನೂ ಸರ್ಕಾರಿ ನೌಕರಿ ಇರುವ ವರನ ದಾರಿಯನ್ನೇ ಕಾಯುತ್ತ ಮೂವತ್ತು, ಮೂವತ್ತೈದು ವಯಸ್ಸು ದಾಟಿದ್ದರೂ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ ಸಮೀಪ ಬಂದ ಒಳ್ಳೆಯ ವರಗಳನ್ನು ನಿರಾಕರಿಸುತ್ತಿದ್ದಾರೆ. ಆದರೆ ಸರ್ಕಾರಿ ನೌಕರಿ ಇರುವ ನವಯುವಕ ಈ ವಯಸ್ಸಾದ ಮಹಿಳೆಯನ್ನು ಯಾಕೆ ಮದುವೆಯಾಗುತ್ತಾನೆ ? ಎಂಬ ಪ್ರಶ್ನೆಯನ್ನು ಕ ಪಿ ಗಳು, ಹುಡುಗಿಯರೂ ತಮ್ಮಲ್ಲಿಯೇ ಕೇಳಿಕೊಳ್ಳುತ್ತಿಲ್ಲ.

ಕಾಲ ಬದಲಾಗಿದೆ, ಜನಸಂಖ್ಯೆ ಅತಿಯಾಗಿ ಬೆಳೆದಿದೆ. ಎಲ್ಲರಿಗೂ ನೌಕರಿ ಸಿಗುವುದಿಲ್ಲ. ಆದರೆ ನೌಕರಿಯ ನೆಪದಲ್ಲಿ ತಮ್ಮ ಮಗಳನ್ನು ಮನೆಯಲ್ಲಿ ಇಟ್ಟುಕೊಂಡ ಪಾಲಕರು ಆಕೆಯ ಆಸೆ, ಕನಸುಗಳಿಗೆ ಕೊಳ್ಳಿ ಇಡುತ್ತಿದ್ದಾರೆ ಎಂಬದು ಮಾತ್ರ ಸತ್ಯ. 

ಮೊನ್ನೆ ಒಂದು ವಧು – ವರ ಸಮ್ಮೇಳನ ನಡೆಯಿತು ಅಲ್ಲಿ ಬಂದಿದ್ದ ಹುಡುಗ – ಹುಡುಗಿಯರನ್ನು ನೋಡಬೇಕಿತ್ತು ಒಬ್ಬರಕಿಂತ ಒಬ್ಬರು ಕಳಾಹೀನರಾಗಿದ್ದರು. ಹುಡುಗರು ಕನ್ಯಾ ಸಿಗದೇ ಕಳಾಹೀನರಾಗಿದ್ದರೆ, ಹುಡುಗಿಯರು ಅದರಲ್ಲೂ ನೌಕರಿ ಮಾಡುವ ಹುಡುಗಿಯರು ತಮಗೆ ತಕ್ಕ ವರ ಸಿಗದೆ ವಯಸ್ಸಾದಂತೆ ಕಾಣುತ್ತಿದ್ದರು ಕೆಲವರು ಪಾಲಕರ ಹಟಮಾರಿ ಧೋರಣೆಯಿಂದಾಗಿ ಕಳಾಹೀನರಾಗಿ ಕಾಣುತ್ತಿದ್ದರು.

ಹೀಗೆ… ಕನ್ಯೆಗೆ ವರ ಇಲ್ಲ, ವರನಿಗೆ ವಧು ಇಲ್ಲ….ಆದರೆ ಇಬ್ಬರೂ ಎದುರುಬದುರೇ ಇದ್ದಾರೆ ! ಪಾಲಕರಿಗೆ ಇವರ ಆಸೆ ಆಕಾಂಕ್ಷೆಗಳ ಚಿಂತೆ ಇಲ್ಲ. ಕೇವಲ ನೌಕರಿ ಇದ್ದರಷ್ಟೇ ತಮ್ಮ ಮಗಳು ಸುಖವಾಗಿ ಇರುತ್ತಾಳೆ ಎಂಬ ಭ್ರಮೆಯಲ್ಲಿ ತೇಲುತ್ತ ಸ್ವಂತ ಉದ್ಯೋಗ ( ಅದು ಪಾನ್ ಶಾಪ್ ಆಗಿದ್ದರೂ, ಹಮಾಲಿ ಕೆಲಸವೇ ಆಗಿದ್ದರೂ…) ಮಾಡುತ್ತ ಸ್ವಾಭಿಮಾನದಿಂದ ಬದುಕುತ್ತಿರುವ ಹುಡುಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದರೆ ತಪ್ಪಲ್ಲ.

ಈಗ ಈ ಫೋಟೋದಲ್ಲಿ ಹುಡುಗರಿಗೆ ಕನ್ಯಾ ಸಿಗಲಿ ಎಂದು ಅವರು ಬೇಡುವುದರ ಬದಲಾಗಿ ಕ ಪಿ ಗಳಿಗೆ ಬುದ್ಧಿ ಬಲಿಯಲಿ ಎಂದು ದೊಡ್ಡದೊಂದು ಕುಂಬಳಕಾಯಿಯ ಮೇಲೆ ಬರೆದು ದೇವಸ್ಥಾನದ ದ್ವಾರಕ್ಕೆ ಕಟ್ಟುವುದು ಲೇಸು !


ಉಮೇಶ ಬೆಳಕೂಡ, ಮೂಡಲಗಿ

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group