ಸಿಂದಗಿ: ಪಂಚಮಸಾಲಿ ಸಮಾಜದ ಜೀರ್ಣೋದ್ದಾರಕ್ಕೆ 2ಎ ಮೀಸಲಾತಿ ನೀಡುವಂತೆ ಕೂಡಲ ಸಂಗಮದಿಂದ ಬೆಂಗಳೂರವರೆಗೆ ಪಾದಯಾತ್ರೆ ಮಾಡಿದ್ದರೂ ಕೂಡಾ ಮೀಸಲಾತಿ ನೀಡುವಲ್ಲಿ ಸರಕಾರ ಮಲತಾಯಿ ಧೋರಣೆ ತಾಳುತ್ತಿದ್ದು ಇದರ ಹಿನ್ನೆಲೆಯಲ್ಲಿ ಇಡೀ ರಾಜ್ಯಾದ್ಯಂತ ಮಾರ್ಚ 4 ರಂದು ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಕಾರಣ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದುಪಂಚಮಸಾಲಿ ಸಮಾಜ ಸಿಂದಗಿ ತಾಲ್ಲೂಕು ಅಧ್ಯಕ್ಷರು ಮಲ್ಲಿಕಾರ್ಜುನ ಎಮ್ ಹಂಗರಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯ ಹೋರಾಟ ನಿರಂತರವಾಗಿ ನಡೆದಿದೆ. ಈ ಹೋರಾಟದ ಪ್ರಮುಖ ಭಾಗವಾಗಿ ಬರುವ ಮಾರ್ಚ್ 4 ರಂದು ಶನಿವಾರ ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟಿಸುವ ನಿರ್ಧಾರವನ್ನು ಶ್ರೀಗಳು ಕೈಗೊಂಡಿದ್ದಾರೆ.
ಹೀಗಾಗಿ ಸಿಂದಗಿ ತಾಲ್ಲೂಕಿನ ಪಂಚಮಸಾಲಿ ಸಮಾಜ ಬಾಂಧವರು ಅತ್ಯಧಿಕ ಸಂಖ್ಯೆಯಲ್ಲಿ ಭಾಗಿಯಾಗಿ 2ಎ ಮೀಸಲಾತಿಯ ಹಕ್ಕೊತ್ತಾಯದ ಬಿಸಿಯನ್ನು ಸರ್ಕಾರಕ್ಕೆ ಮುಟ್ಟಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಹನಿಹನಿ ಕೂಡಿದರೆ ಹಳ್ಳ ಎನ್ನುವಂತೆ ಬಹಳಷ್ಟು ಜನರು ಪಾಲ್ಗೊಳ್ಳುವ ಮೂಲಕ ಪ್ರತಿಭಟನೆಯನ್ನು ಯಶಸ್ವಿಗೊಳಿಸೋಣ ಎಂದು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.