ಮೂಡಲಗಿಯಲ್ಲಿ ಮಹಾವೀರ ಜಯಂತಿ

0
667

ಮೂಡಲಗಿ: ಮಹಾವೀರ ಜಯಂತಿ ಪ್ರಯುಕ್ತ ಜೈನ ಸಮುದಾಯದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹಾವೀರ ಭಾವಚಿತ್ರವನ್ನು ಟ್ರ್ಯಾಕ್ಟರ್ ಹಾಗೂ ಪಲ್ಲಕ್ಕಿ ಸೇವೆಯ ಮೆರವಣಿಗೆ ಮಾಡುವ ಮೂಲಕ ಮಹಾವೀರ ಜಯಂತಿಯನ್ನು ಸೋಮವಾರದಂದು ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಪುರಸಭೆ ಎದುರಿಗೆ ಇರುವ ಭಗವಾನ 1008 ಮಹಾವೀರ ಜೈನ  ಮಂದಿರದಿಂದ ಮಹಾವೀರರ ಪಲ್ಲಕ್ಕಿ ಉತ್ಸವ ಹಾಗೂ ಮಹಿಳೆಯರ ಕುಂಭಮೇಳ ಪ್ರಾರಂಭವಾಗಿ, ಪಟ್ಟಣದ ಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ, ಕರೆಮ್ಮ ಸರ್ಕಲ್, ಬಸವೇಶ್ವರ ವೃತ್ತ, ಸಂಗಪ್ಪನ ವೃತ್ತದ ಮಾರ್ಗವಾಗಿ ಜೈನ್ ಮಂದಿರಕ್ಕೆ ಅಂತ್ಯಗೊಂಡಿತು.

ಜೈನ ಮಂದಿರದಲ್ಲಿ ಮಹಾವೀರರ ಭಾವಚಿತ್ರ ಮೆರವಣಿಗೆಗೂ ಮೊದಲು ಮಹಾವೀರನ ಭಾವಚಿತ್ರಕ್ಕೆ ಹೂವುಗಳಿಂದ ಪುಷ್ಪಾರ್ಚನೆ ಮಾಡಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ದಿಗಂಬರ ಜೈನ ಮಂದಿರದ ಟ್ರಸ್ಟ್ ನ ಅಧ್ಯಕ್ಷ ವರ್ಧಮಾನ ಬೋಳಿ ಚಾಲನೆ ನೀಡಿದರು. ಭಗವಾನ್ ಮಹಾವೀರರು ಬೋಧಿಸಿದ ಪಂಚಾಮೃತ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗೃಹ, ಅಶೌರ್ಯ, ಬ್ರಹ್ಮಚರ್ಯ ತತ್ವಗಳನ್ನು ಸಾರಲಾಯಿತು. ಮಹಿಳೆಯರು ಮೆರವಣಿಗೆಯ ಮಾರ್ಗದುದ್ದಕ್ಕೂ ಮಹಾವೀರರ ಶಾಂತಿ ಮಂತ್ರ ಪಠಿಸುವ ಜೊತೆಗೆ ಭಜನೆಯಲ್ಲಿ ಪಾಲ್ಗೊಂಡರು. ಯುವಕರು ಬ್ಯಾಂಡ್‍ಸೆಟ್‍ನ ತಾಳಕ್ಕೆ ಹೆಜ್ಜೆ ಹಾಕುವ ಮೂಲಕ ಮಹಾವೀರ ಜಯಂತಿಗೆ ಮತ್ತಷ್ಟು ಮೆರಗು ನೀಡಿದರು.