ಕವನಗಳು

Must Read

ಚನ್ನಮ್ಮತಾಯಿ ಮತ್ತೊಮ್ಮೆ ಹುಟ್ಟಿಬಾ

ಕಾಕತಿಯ ದೂಳಪ್ಪ ದೇಸಾಯಿ ಮಗಳಾಗಿ
ಮಲ್ಲಸರ್ಜನ ಮುದ್ದಿನ ಮಡದಿಯಾಗಿ
ಕಿತ್ತೂರು ಸಂಸ್ಥಾನದ ಮಹಾರಾಣಿಯಾಗಿ
ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ನಿಂತಿಹಳು

ಕನ್ನಡ ಮಣ್ಣಿನ ದಿಟ್ಟಹೋರಾಟಗಾರ್ತಿ
ಬ್ರಿಟೀಷರು ಕಪ್ಪವ ಕೇಳಲು ಧಿಕ್ಕರಿಸಿದಳು
‘ನೀವೇನು ಉತ್ತುಬಿತ್ತಿದ್ದೀರೇ ನಿಮಗೇಕೆ
ಕೊಡಬೇಕು ಕಪ್ಪ’ ಎಂದು ಘರ್ಜಿಸಿದಳು

ಅಂದು ನೀನಾಡಿದ ಸ್ವಾಭಿಮಾನದ ನುಡಿಗಳು
ಕನ್ನಡಿಗರ ಮನೆಮನಗಳಲಿ ಅನುರಣಿಸುತ್ತಿವೆ
ಧಮನಿ ಧಮನಿಯಲಿ ರಕ್ತ ಕುದಿಯುತ್ತಿದೆ
ಆಕ್ರೋಶಭರಿತ ಸ್ವಾಭಿಮಾನದ ಮಾತುಗಳು

ನಮ್ಮವರ ಕುತಂತ್ರಕೆ ಬಲಿಯಾಗಿ
ನೀ ಸೆರೆಯಾದುದು ನೋವ ತಂದಿದೆ
ಕನ್ನಡಿಗರ ಮನೆಮನಗಳಲ್ಲಿದೆ ನಿನ್ನಹಿರಿಮೆ
ಕೋಟಿ ನಮನವು ತಾಯಿ ನಿನ್ನಹೋರಾಟಕೆ

ಮತ್ತೊಮ್ಮೆ ಹುಟ್ಟಿಬಾ ಚನ್ನಮ್ಮ ತಾಯಿ
ಕನ್ನಡಿಗರ ಸ್ವಾಭಿಮಾನವ ಬಡಿದೆಬ್ಬಿಸಿ
ಅಂಜುಬುರುಕರ ಎದೆಯಲಿ ಧೈರ್ಯ ತುಂಬಿ
ನಾಡುನುಡಿ ರಕ್ಷಣೆಗೆ ಸಜ್ಜುಗೊಳಿಸು ಬಾ ತಾಯಿ

ಬೋರೇಗೌಡ
ಅರಸೀಕೆರೆ


ಧರ್ಮ ಯಾವುದಯ್ಯ !

ನೆತ್ತರದೊಳಗೆ ಕಾಣಬಲ್ಲಿರ
ಜಾತಿ ಮತ ಪಂಥ ಧರ್ಮಗಳ ಬಣ್ಣವನ್ನು
ಹೂಳುವ ಮಣ್ಣಿನೊಳಗೆ ನೋಡಬಲ್ಲಿರ
ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ ಕಣಗಳನ್ನು !
ಚಲಿಸುವ ಮೋಡಗಳ ಮಧ್ಯೆ ಗುರುತು ಮಾಡಲ್ಲಿರಾ
ಧರ್ಮ ಧರ್ಮಗಳ ನಾಮವನ್ನು.

ಪ್ರಕೃತಿಯೇ ಕಾಣದ
ಜಾತಿ ಮತ ಪಂಥ ಧರ್ಮಗಳ ಸಾರವನ್ನು
ನೀ ಏಕೆ ಕಾಣುವೆ ಮನುಜ ?
ನೀ ಏಕೆ ಪೋಷಿಸಿ ರಕ್ಷಿಸುವೆ ತನುಜಾ,
ಬಿಡು ನಿನ್ನ ಬಿಗುವಿನ ಮಾಟ
ಕಾಣದ ಆತ್ಮವೇ ಹೇಳುವುದು ಪಾಠ.

ನೆತ್ತಿಯೊಳಗ ಬುದ್ದಿಯ ಕಣಜ
ಕತ್ತಿಯೊಳಗ ದುರಹಂಕಾರ ಬೀಜ
ಭೂಮಿಗೆ ಬಿದ್ದಷ್ಟು ಇಬ್ಬನಿಗೆ ಚಿಗುರುವುದು
ಒಮ್ಮೆಲೆ ದೃಷ್ಟಿಯನ್ನು ಮುಚ್ಚುವುದು,
ನೆತ್ತಿಯ ಮೇಲೆ ಕತ್ತಿಯನಿಟ್ಟು
ಧರ್ಮ ಯಾವುದಯ್ಯ ಎಂದು ಕೇಳಿದೊಡನೆ
ನೆತ್ತರೇ ತೋರಿಸುವುದು ಧರ್ಮವ !

ನಾ ಹಚ್ಚುವ ಗಂಧ ವಿಭೂತಿ
ನೀ ಹಚ್ಚುವ ಕಾಡಿಗೆಯ ಜಾತಿ
ರುದ್ರಂಗಳದ ಬೂದಿಯಲ್ಲಿ
ಹಚ್ಚಿದ ವಿಭೂತಿ ಕಾಡಿಗೆ ,
ಮಣ್ಣೋ , ಕಟ್ಟಿಗೆಯ ಜೊತೆ ಬೂದಿಯಲ್ಲಿ ಮುಚ್ಚಿ ಹೋಗುವುದು,
ಆಗ ನಿನ್ನ ಧರ್ಮ ಯಾವುದಯ್ಯ !

ಭೋವಿ ” ರಾಮಚಂದ್ರ
ಹರಪನಹಳ್ಳಿ
8861588118.


ನೇಸರ

ಚುಮು ಚುಮು ಚಳಿಯಲ್ಲಿ
ನೇಸರನು ಬರುವ ಸಮಯದಲ್ಲಿ
ಹೊರಡು ನೀನು ನಡೆಯಲು
ಆರೋಗ್ಯದಿಂದಿರುವಿ ಯಾವಾಗಲೂ ||೧||

ಸಾಗುತಿರಲು ನಿನ್ನ ನಡಿಗೆ
ಇರಲಿ ಗಮನ ಎಲ್ಲ ಕಡೆಗೆ
ಇಬ್ಬನಿ ಸಿಂಗರಿಸಿಹ ಚೆಂದದೆಡೆಗೆ
ಮಂಜು ಹನಿಗಳ ಮಾಲೆಯೆಡೆಗೆ||೨||

ಬಾನಾಡಿಗಳ ಹಾರಾಟದ ನೋಟವಲ್ಲಿ
ಪಕ್ಷಿಗಳ ಇಂಪುಲಿಯ ಕಲರವವಲ್ಲಿ
ಪ್ರಕೃತಿಯ ಚೆಲುವಿನ ನೋಟವಲ್ಲಿ
ಮನದಲ್ಲಿ ನವಿರು ಭಾವವರಳುವುದಲ್ಲಿ||೩||

ಸಂತಸವ ಹಂಚಿ ದಣಿಯರು
ಇಹರು ಜಗದಲಿ ಕೆಲವರು
ಅವರಲ್ಲಿ ನೇಸರನೇ ಮೊದಲಿಗನು
ಭುವಿಯಲ್ಲಿ ಜೀವಕಳೆ ತುಂಬುವನು||೪||

ಕೊಟ್ಟಷ್ಟು ಅಕ್ಷಯವಾಗುವುದು
ಕೊಡುವ ಮನಸು ನೇಸರನದು
ಹೆಚ್ಚಾದುದ ಹಂಚುವ ಮನವದು
ತರುವುದು ಸಂತಸ ಮನಕದು||೫||

ಗಾಯಿತ್ರಮ್ಮ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group