ಮೂಡಲಗಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಆತ್ಮಸ್ಥೈರ್ಯ ಅತ್ಯಂತ ಪ್ರಮುಖ ಕಾರಣವಾಗುವದು. ಪ್ರಾಥಮಿಕ ಹಂತದಲ್ಲಿಯೇ ಪಾಲಕರ ಇಚ್ಛಾಶಕ್ತಿಯನುಸಾರ ಶಿಕ್ಷಕರ ಮಾರ್ಗದರ್ಶನದ ಮೂಲಕ ಸಾಧನೆಯತ್ತ ಸಾಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಯುಪಿಎಸ್‍ಇಯಲ್ಲಿ 362 ರ್ಯಾಂಕ್ ಪಡೆದ ಶೃತಿ ಯರಗಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ಅಭಿನಂದನೆ ಮತ್ತು ಸತ್ಕಾರ ಸ್ವೀಕರಿಸಿ ಮಾತನಾಡಿ, ಸ್ವತಃ ನಮ್ಮ ತಂದೆ ಶಿಕ್ಷಕರಾಗಿದ್ದು, ವಿಶೇಷವಾಗಿ ಮೂಡಲಗಿ ಶೈಕ್ಷಣಿಕ ವಲಯದ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಕಂಡಿರುವೆ.
ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಉನ್ನತ ಹುದ್ದೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಪ್ರತಿಯೊಬ್ಬ ಪರೀಕ್ಷಾರ್ಥಿಯ ಸಾಧನೆಯಲ್ಲಿ ಶಿಕ್ಷಕ ಸಮೂಹದ ಕೊಡುಗೆ ಅಪಾರವಾಗಿರುತ್ತದೆ. ಉತ್ತಮ ಪ್ರಜೆಗಳ ನಿರ್ಮಾಣದ ಜೊತೆಗೆ ಕೌಟುಂಬಿಕವಾಗಿ ಅಭಿವೃದ್ಧಿಯತ್ತ ಶಿಕ್ಷಕ ಸಮೂಹ ಗಮನಹರಿಸಿದಾಗ ಈ ಸಮಾಜದ ಮೇಲೆ ಮತ್ತಷ್ಟು ಪರಿಣಾಮಬಿರುತ್ತದೆ. ವೈಯಕ್ತಿಕವಾಗಿ ಸಾಧನೆ ಗೈಯಲು ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಬಿಇಒ ಅವರಾದ ಅಜಿತ ಮನ್ನಿಕೇರಿಯವರ ಸಹಾಯ ಸಹಕಾರ ಮರೆಯುವಂತಿಲ್ಲವೆಂದರು.
ಕಷ್ಟದ ದಿನಗಳಲ್ಲಿ ನಮ್ಮ ತಂದೆಯವರು ಉತ್ತಮ ವಿದ್ಯಾಭ್ಯಾಸದ ಜೊತೆಗೆ ನಿರಂತರವಾಗಿ ಯಶಸ್ಸು ಕಂಡವರು ಮಾರ್ಗದರ್ಶನ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಶಿಕ್ಷಕರ ಬಳಗ ನಮ್ಮ ಕುಟುಂಬಕ್ಕೆ ಸಹಾಯಮಾಡಿದ್ದು ಸ್ಮರಣೀಯವಾಗಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಶಿಕ್ಷಣ ಹಾಗೂ ಸರ್ವೋತೋಮುಖ ಅಭಿವೃದ್ಧಿಯತ್ತ ಗಮನಹರಿಸಿದಾಗ ಮುಂದೆ ಸಾಧನೆಯ ಹಾದಿ ಸುಗಮವಾಗುವದು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವದಕ್ಕೆ ಸಂತಸ ನೀಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಭಾಗದ ಅಭ್ಯರ್ಥಿಗಳು ಆಯ್ಕೆಯಾಗಲಿ ಎಂದು ಆಶಿಸಿದರು.
ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಶಿಕ್ಷಣ ಇಲಾಖೆಯ ಶಿಕ್ಷಕರ ಮಗಳು ಲೋಕಸೇವಾ ಆಯೋಗದ ಉನ್ನತ ಪರೀಕ್ಷೆ ಪಾಸಾಗಿದ್ದು ಹೆಮ್ಮೆಯ ವಿಷಯವಾಗಿದೆ. ಶಿಕ್ಷಕರಿಗೆ, ಪಾಲಕರಿಗೆ, ವಿದ್ಯಾರ್ಥಿಗಳಿಗೆ, ಪರೀಕ್ಷಾರ್ಥಿಗಳಿಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ. ಶಿಕ್ಷಕರು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವದರ ಜೊತೆಗೆ ತಮ್ಮ ಮಕ್ಕಳನ್ನು ಸಮಾಜಕ್ಕೆ ಉತ್ತಮ ಕೊಡುಗೆಯಾಗುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಶೃತಿ ಯರಗಟ್ಟಿಯವರ ನಿರಂತರ ಪ್ರಯತ್ನ, ಸತತ ಪರಿಶ್ರಮ, ಉತ್ತಮ ಸ್ಪರ್ಧಾತ್ಮಕತೆಯನ್ನು ಮೈಗೂಡಿಸಿಕೊಂಡು ಯಶಸ್ಸು ಕಂಡಿದ್ದಾರೆ. ಭವಿಷ್ಯತ್ತಿನಲ್ಲಿ ಸಾರ್ವಜನಿಕ ಬದುಕಿನಲ್ಲಿ ಜನಮನ್ನಣೆಯ ಕಾರ್ಯಗಳನ್ನು ಕೈಗೊಂಡು ದಕ್ಷ ಆಡಳಿತಗಾರರಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಜುನೇದಅಹ್ಮದ ಪಟೇಲ್, ಎಮ್.ಡಿ.ಎಮ್ ನಿರ್ದೇಶಕ ಎ.ಬಿ ಮಲಬನ್ನವರ, ನಿವೃತ್ತ ಪ್ರಧಾನಗುರು ಶಿವಾನಂದ ಯರಗಟ್ಟಿ, ಇಸಿಒಗಳಾದ ಟಿ ಕರಿಬಸವರಾಜು, ಸತೀಶ ಬಿ.ಎಸ್, ಆರ್.ವಿ ಯರಗಟ್ಟಿ, ಸಿ.ಆರ್.ಪಿ ಎಸ್.ಎನ್ ದಬಾಡಿ, ಶಿಕ್ಷಕ ಸಂಘಟನೆಯ ಎಡ್ವಿನ್ ಪರಸನ್ನವರ, ಆರ್.ಬಿ ನ್ಯಾಮಗೌಡ, ಬಿ.ಎ ಡಾಂಗೆ, ವಾಯ್.ಡಿ ಝಲ್ಲಿ, ಕೆ.ಎಲ್.ಮೀಶಿ, ಎಸ್.ಎಮ್ ದಬಾ, ಎಸ್.ಎಲ್ ಪಾಟೀಲ, ಎಸ್.ಎಮ್ ಶೆಟ್ಟರ ಹಾಗೂ ಶಿಕ್ಷಕ ಸಮೂಹ ಮತ್ತು ಕಛೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.