ಬೀದರ: ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದು ಯಾವ ಪಕ್ಷದಿಂದಲೂ ಸಾಧ್ಯವಿಲ್ಲ, ನನ್ನ ಸ್ವಪಕ್ಷದವರಿಂದಲೇ ನನಗೆ ಸೋಲಾಗಿದೆ ಎಂದು ಮಾಜಿ ಸಚಿವ ರಾಜಶೇಖರ್ ಬಿ.ಪಾಟೀಲ್ ನೋವಿನಿಂದ ಹೇಳಿದರು.
ಕಳೆದ ವಿಧಾನ ಸಭಾ ಚುನಾವಣೆ ಯಲ್ಲಿ ಸೋಲು ಅನುಭವಿಸಿದ ಹುಮನಾಬಾದ ಕ್ಷೇತ್ರದ ಮಾಜಿ ಸಚಿವ ರಾಜಶೇಖರ ಪಾಟೀಲ ಚಿಂತನ -ಮಂಥನ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಸವರಾಜ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾಗಿದ್ದ ಚಿಂತನ-ಮಂಥನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಎಡ-ಬಲ ಹಿಂದೆ- ಮುಂದೆ ಕುಳಿತು,ನನ್ನ ಜೊತೆಯಲ್ಲಿಯೇ ಇದ್ದು ಎದುರಾಳಿ ಪಕ್ಷದವರ ಜೊತೆಗೆ ಆಂತರಿಕವಾಗಿ ಕೈ ಜೋಡಿಸಿ ನನ್ನ ಬೆನ್ನಿಗೆ ಚೂರಿ ಹಾಕಿ ಸೋಲಿಸಿದ್ದಾರೆ. ದೇವರು ಅವರಿಗೆ ಒಳ್ಳೇದು ಮಾಡಲಿ.ಹುಮನಾಬಾದ, ಚಿಟಗುಪ್ಪ, ಹಳ್ಳಿಖೇಡ ಬಿ.ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಕೆಲವು ಸದಸ್ಯರು ಸ್ವಪಕ್ಷ ಕಾಂಗ್ರೆಸ್ ಗೆ ದ್ರೋಹ ಮಾಡಿದ್ದರು ನನ್ನ ಹತ್ರ ಡಾಟಾ ಸಮೇತವಾಗಿ ಸಿಕ್ಕಿದೆ,ಒಳ್ಳೇದು ಮಾಡುವುದಕ್ಕೆ ಬರೋದಿಲ್ಲ ಅಂದ್ರೆ ಪರ್ವಾಗಿಲ್ಲ,ಆದ್ರೆ ಕೆಟ್ಟದು ಮಾತ್ರ ಮಾಡಬಾರದು ಎಂಬ ವಿಚಾರದ ನಮ್ಮದಾಗಿದೆ. ಸೋಲು ಗೆಲವನ್ನು ನಾನು ಸಮನಾಗಿ ಕಾಣುತ್ತೇನೆ, ಇದು ನನಗೆ ಹೊಸದೇನಲ್ಲ,73ಸಾವಿರ ಜನರು ನನಗೆ ವೋಟ್ ಮಾಡಿದ್ದಾರೆ ಅವರಿಗೆ ಹೃದಯದಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಒಬ್ಬ ಶಾಸಕನ ಅಧಿಕಾರ ಏನು ಎಂಬುದು ನನಗೆ ಚನ್ನಾಗಿ ಗೊತ್ತಿದೆ, ಅಧಿಕಾರದ ದುರುಪಯೋಗ ನಡೆಯಲ್ಲ, ಅಂತದ್ದೇನಾದರೂ ಕಂಡು ಬಂದ್ರೆ ನಾನು ಮಾತ್ರ ಸುಮ್ನೆ ಇರಲ್ಲ,ನಮ್ಮ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ,ನಿಮ್ಮ ಒಂದು ಕೂದಲು ಕಿತ್ತಲು ನಾನು ಬಿಡುವುದಿಲ್ಲ.
ಇಲ್ಲಿ ಜನರಿಗೆ ಮೋಸದ ಮಾತಾಡಿ ಚುನಾವಣೆ ಗೆದ್ದಿದ್ದಾರೆ, ಈಗಲಾದರೂ ಮುಗ್ದ ಜನರಿಗೆ ಮೋಸ ಮಾಡೋದನ್ನ ಬಿಟ್ಟು ಜನಪರ ಕೆಲಸ ಮಾಡಲಿ ನೋಡೋಣ, ಗೆದ್ದ 3 ತಿಂಗಳಲ್ಲಿ ಇಂಡಸ್ಟ್ರಿಗಳು ಹೊರಬಿಡುವ ಮಾಲಿನ್ಯವನ್ನು ತಡೆಗಟ್ಟುತ್ತೇನೆ ಎಂದು ಹೇಳಿದ್ದಾರೆ, ಈಗಾಗಲೇ ಒಂದು ತಿಂಗಳು ಮುಗಿದಿದೆ, ಉಳಿದ ಎರಡು ತಿಂಗಳಲ್ಲಿ ಮಾಲಿನ್ಯವನ್ನು ತಡಿಯುತ್ತಾರ ಎಂಬುದನ್ನು ಕಾದುನೋಡಬೇಕಾಗಿದೆ ಎಂದು ರಾಜಶೇಖರ ಪಾಟೀಲ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ