“ಕನ್ನಡಮ್ಮನ ಗುಡಿಯಲಿ ಸದಾಕ್ಷರದ ಅರ್ಚನೆ ನಡೆಯಲಿ ತನು-ಮನಗಳೇ ಅದಕೆ ಎಣ್ಣೆ-ಪಣತಿಯಾಗಿರಲು ಷಡ್ಗುಣದ ಕನ್ನಡಗರ ಕೊರಳ ನುಡಿಗಳು ಮುತ್ತಿನ ತೋರಣವ ಕಟ್ಟಿವೆ ದಶದಿಕ್ಕುಗಳಿಗೆ ಬೆಳಗಿಹುದು ಬಾನ ತುಂಬ ಬೆಳಕು ಅದಕ್ಕೆ ಇಹುದು ಕನ್ನಡಮ್ಮನ ನೆಲದಲ್ಲಿ ನಿತ್ಯ ಕನ್ನಡೋತ್ಸವದ ಉತ್ಸಾಹ ಕನ್ನಡಿಗರ ಮನ-ಮನಗಳಲ್ಲಿ”
ಮತ್ತೇ ರಾಜ್ಯೋತ್ಸವ ಬಂದಿದೆ, ಕನ್ನಡಿಗರಲ್ಲಿ ಸಂತಸ ತಂದಿದೆ, ಮಳೆಗಾಲದಂತೆ, ಚಳಿಗಾಲದಂತೆ, ದೀಪಾವಳಿಯಂತೆ, ಸಂಕ್ರಾoತಿಯoತೆ ಕನ್ನಡ ರಾಜ್ಯೋತ್ಸವ ಕೂಡ ಪ್ರತಿ ವರ್ಷ ಬರುತ್ತದೆ, ಕನ್ನಡ ಮನಸ್ಸುಗಳಲ್ಲಿ ಹೊಸ ಸಂಚಲನ ಮೂಡಿಸುತ್ತದೆ, ಆದರೆ ಮಹಾಮಾರಿ ಕೊರೋನಾದಿಂದಾಗಿ ಈ ವರ್ಷ ಕನ್ನಡ ರಾಜ್ಯೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಕೊಂಚ ನಿರಾಸೆ ಉಂಟಾಗಿದೆ.
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹುಯಿಲಗೋಳ ನಾರಾಯಣ ರಾಯರ ಹಾಡನ್ನು ಅಂದಿನoತೆಯೇ ಇಂದು ಕೂಡ ಹಾಡುತ್ತಿದ್ದೇವೆ, ಉದಯವಾಯಿತು ಎಂದು ಬದಲಿಸಿ ನಿತ್ಯೋತ್ಸವ ಆಚರಿಸುವ ಸ್ಥಿತಿ ಪ್ರಾಪ್ತವಾಗಿಲ್ಲ. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಕವಿ ಚೆನ್ನವೀರ ಕಣವಿಯವರ ಆಶಯ ಅನುಷ್ಠಾನಕ್ಕಿಳಿದಿಲ್ಲ, ಆದರೂ ಕುವೆಂಪು ಬರೆದಂಥ *ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ!* ದ.ರಾ.ಬೇಂದ್ರ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿನಾಯಕ ಕೃಷ್ಣ ಗೋಕಾಕ, ಗಿರೀಶ ಕಾರ್ನಾಡ, ಅನಂತಮೂರ್ತಿ, ಜಿ ಎಸ್ ಶಿವರುದ್ರಪ್ಪ, ಕೆ ಎಸ್ ನರಸಿಂಹಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಪಂಪ, ರನ್ನ, ಪೊನ್ನ, ಜನ್ನ ಹೀಗೆ ಅನೇಕ ಕವಿಗಳು ತಮ್ಮ ಕನ್ನಡ ಕೈಂಕರ್ಯದ ಮೂಲಕ ಕನ್ನಡಾಂಬೆಯನ್ನು ಹಾಡಿ ಹೊಗಳಿದ್ದಾರೆ. ಹಾಗೇ ಕಿತ್ತೂರ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ಉಮಾಬಾಯಿ ಕುಂದಾಪೂರ ಇವರು ಕೂಡಾ ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿ ಕನ್ನಡದ ಕೀರ್ತಿಯನ್ನು ಹೆಚ್ಚಿಸಿದಾರೆ. ಸಿರಿಗನ್ನಡಮ್ಮನ ಗುಡಿಗೆ 8ನೆಯ ಜ್ಞಾನಪೀಠದ ಗರಿಯನ್ನು ಮೂಡಿಸಿದ ಚಂದ್ರಶೇಖರ ಕಂಬಾರ ಅವರ ಕನ್ನಡ ಸೇವೆ ಅನುಪಮವಾದದ್ದು.
ಸ್ವಾತಂತ್ರ ಪೂರ್ವದಲ್ಲಿ 20 ಆಡಳಿತಗಳಲ್ಲಿ ಹಂಚಿಹೋಗಿದ್ದ ಈ ನೆಲ 1947ರಲ್ಲಿ ಐದು ಆಡಳಿತಗಳಿಗೆ ಒಳಪಟ್ಟಿತ್ತು. 1956ರಲ್ಲಿ ಏಕೀಕೃತ ಮೈಸೂರು ರಾಜ್ಯ ಅರಳಿತು,1973ರಲ್ಲಿ ಕರ್ನಾಟಕವಾಯಿತು. ವರ್ಷಗಳಲ್ಲಿ ಏನೇನೆಲ್ಲ ಆಯಿತು? ಸರ್ವ ಜನಾಂಗದ ಶಾಂತಿಯ ತೋಟ,ರಸಿಕರ ಕಂಗಳ ಸೆಳೆಯುವ ನೋಟ ಹೀಗಿದೆಯೆ? ಭಾರತ ಜನನಿಯ ತನುಜಾತೆ ಈಗ ನಮ್ಮ ನಾಡಗೀತೆ ಇಷ್ಟಾದರೆ ಮುಗಿಯಿತೆ? ಬಾಳಾಗುವುದು ಬೇಡವೇ ? ಸುಂದರ ಭಾವಗೀತೆ ನೀಗುವುದು ಬೇಡವೆ ? ಈ ನೆಲದ ಮಕ್ಕಳ ನೂರೊಂದು ವ್ಯಥೆ, ಕನ್ನಡ ಮಕ್ಕಳ ಬದುಕಿನಲ್ಲಿ ಬೇಡವೆ ಇನ್ನೊಂದಿಷ್ಟು ರೋಚಕತೆ ?
ಕನ್ನಡ ಬಗ್ಗೆ ನಿಮಗೆಷ್ಟು ಗೊತ್ತು, ಬನ್ನಿ ಹೋಗೊಣ ಕರುನಾಡಿನಲ್ಲಿ ಒಂದು ಸುತ್ತು, ತೋರಿಸುತ್ತೇವೆ ಕನ್ನಡ ಸಂಪತ್ತು. ಪಟ್ಟದಕಲ್ಲು, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಹಂಪೆ, ವಿಜಯಪುರ, ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ, ಶಿವನ ಸಮುದ್ರ ಜಲಪಾತ, ಚಿತ್ರದುರ್ಗ, ಭದ್ರಾವತಿ, ಬನವಾಸಿ, ಉಡುಪಿ, ಬದಾಮಿ, ತಲಕಾಡು, ಬನಶಂಕರಿ, ಎಲ್ಲಮ್ಮಗುಡ್ಡ, ಗುಡ್ಡಾಪೂರ, ಗೊಡಚಿ, ಕೂಡಲ ಸಂಗಮ ಹೀಗೆ ಕಣ್ಣಿಗೆ ಆನಂದ ಮೂಡಿಸುವಂಥ ಪ್ರಸಿದ್ಧ ಪ್ರವಾಸ ಸ್ಥಳಗಳನ್ನು ನಮ್ಮ ಕರ್ನಾಟಕದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.
ಕನ್ನಡದ ತಾಕತ್ತು, ಗತ್ತು, ವೈಭವ ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು “ಸರ್ವಜ್ಞ , ಜಗಜ್ಯೋತಿ ಬಸವಣ್ಣ, ದಾಸರ ಶರೀಫರ ಸಂದೇಶ ಸಾರೈತಿ ಕನ್ನಡದ ಹಿರಿಮೆ ಹೆಚೈತಿ….. ಆದರಿಂದ ಮುಗಿದ ದಿನದ ಮೆಲುಕು ಹಾಕಿ ಬರುವ ದಿನದ ಭರವಸೆಯಲ್ಲಿ ತ್ಯಾಗ ಸಹಿತ ಸ್ವಾರ್ಥ ರಹಿತ ಹೊಸ ನಾಡನು ಕಟ್ಟವಾ ಹೊಸ ಹುರುಪನು ಪಡೆಯುತ್ತಾ ನಾಡಿಗಾಗಿ ಭಾಷೆಗಾಗಿ ನಮ್ಮ ನೆಲದ ಉಳಿವಿಗಾಗಿ ಕನ್ನಡಾಂಬೆ ಕುವರರೆಲ್ಲ ಅಳಿಲು ಭಕ್ತಿ ತೋರುತ್ತಾ ಮರಳ ಸೇವೆ ಮಾಡೋಣ…
ಮಲ್ಲು ಬೋಳನವರ