ಸಿಂದಗಿ: ಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆಗೆ ಹಾವುಗಳ ದಿನಾಚರಣೆಯನ್ನು ಪ್ರಾರಂಭಿಸಿ ಕರ್ನಾಟಕ ಕಾಂಗ್ರೆಸ್ ಸರಕಾರ ಹೊಸ ಪರ್ವವನ್ನು ಪ್ರಾರಂಭಿಸಿದೆ. ಹಾವುಗಳು ರೈತನ ಮಿತ್ರನಾಗಿ ಕಾರ್ಯನಿರ್ವಹಿಸುತ್ತವೆ ಕಾರಣ ಪರಿಸರ ಮತ್ತು ವನ್ಯ ಜೀವಿಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಎಲೈಟ ಪಿಯುಸಿ ವಿಜ್ಞಾನ ಕಾಲೇಜಿನಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಹಾವುಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಜನರಲ್ಲಿ ಹಾವುಗಳ ಬಗ್ಗೆ ಇರುವ ಭಯವನ್ನು ದೂರ ಮಾಡಬೇಕು ಮತ್ತು ಅರಣ್ಯದಲ್ಲಿರುವ ವನ್ಯ ಜೀವಿಗಳ, ಪಶು-ಪಕ್ಷಿಗಳ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಸಂಕಲ್ಪದಿಂದ ಸರಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.
ಪ ಪುರಾಣ ಪ್ರವಚನದಲ್ಲಿ ಹಾವುಗಳ ಬಗ್ಗೆ ಇರುವ ಪೂಜ್ಯ ಭಾವನೆಯಿಂದ ನಾಗರಪಂಚಮಿ ಹಬ್ಬವನ್ನು ಆಚರಿಸುವ ಮೂಲಕ ನಾಗದೇವತೆಯನ್ನು ಪೂಜೆ ಮಾಡಿ ಸಮಾಜ, ನಾಗರಿಕರು ಚನ್ನಾಗಿ ಇರಬೇಕೆನ್ನುವ ಸಂದೇಶ ಎತ್ತಿ ತೋರಿಸುತ್ತದೆ. ಅದಕ್ಕೆ ಪೂರಕವಾಗಿ ಅರಣ್ಯ ಇಲಾಖೆಯು ಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆಯ ಕಾರ್ಯಕ್ರಮವನ್ನು ಹಾಕಿಕೊಂಡು ಹಾವುಗಳ ಬಗ್ಗೆ ಮುಂದಿನ ಪೀಳಿಗೆಗೆ ಸಂದೇಶ ನೀಡಿದಂತಾಗಿದೆ ಎಂದರು.
ಶಿರಸಿ ಕಾಲೇಜಿನ ಸಂಪನ್ಮೂಲ ವ್ಯಕ್ತಿ ದನಂಜಯಕುಮಾರ ಉಪನ್ಯಾಸ ನೀಡಿ, ಇಡೀ ಭಾರತದಲ್ಲಿ ಮುನ್ನೂರು ಜಾತಿಯ ಹಾವುಗಳಿದ್ದು ಅವುಗಳಲ್ಲಿ 60 ವಿಷಕಾರಿ ಹಾಗೂ 240 ವಿಷವಿಲ್ಲದ ಹಾವುಗಳಿವೆ ಇದರಲ್ಲಿ ನಾಲ್ಕು ಜಾತಿಯ ಹಾವುಗಳು ಅತೀ ವಿಷಕಾರಿ ಹಾವುಗಳಿದ್ದು ಅವುಗಳಿಗೆ ಕಿವಿ ಕೇಳಿಸುವುದಿಲ್ಲ ನಾಲಿಗೆ ಹೊರ ತೆಗೆದು ವಾಸನೆ ಪಡೆದುಕೊಳ್ಳುತ್ತ ಸಂಚರಿಸುತ್ತ ಕಪ್ಪೆಗಳನ್ನು ತಿಂದು ಬದುಕುತ್ತವೆ ಅವು ತಾನಾಗಿಯೇ ಮನುಷ್ಯನನ್ನು ಕಚ್ಚುವುದಿಲ್ಲ ಅದನ್ನು ಕೆಣಕಿದರೆ ಮಾತ್ರ ಅವು ಕಚ್ಚುತ್ತವೆ. ಹಾವುಗಳು ಅಪಾಯಕಾರಿಯಲ್ಲ ರೈತರ ಮಿತ್ರನಾಗಿ ಜಾಗೃತಿ ಮೂಡಿಸುವುದಲ್ಲದೆ ಉಪಯೋಗಕಾರಿಯಾಗಿವೆ ವಿಷಕಾರಿಯಾಗಿರುವ ನಾಲ್ಕು ನಮೂನೆಯ ಹಾವುಗಳು ಕಚ್ಚಿದರೆ ಎ ಪಾಲಿವೆಲೆಂಟ್ ಸೆರುಮ್ ಒಂದೆ ಔಷದಿ ಬಳಕೆಗೆ ಬರುತ್ತದೆ ಕಾರಣ ಜನರಲ್ಲಿ ಹಾವುಗಳ ಬಗ್ಗೆ ಭಯ ಹೋಗಬೇಕು ಎಲ್ಲ ಪ್ರಾಣಿಗಳಂತೆ ಅವುಗಳನ್ನು ಸಾಕಬಹುದು ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾವುಗಳ ಸಂರಕ್ಷಣೆಯ ಜಾಗೃತಿ ಮೂಡಿಸಲು ಸರಕಾರದ ಕಿರು ಹೊತ್ತಗೆ ಬಿಡುಗಡೆ ಗೊಳಿಸಿದ್ದಲ್ಲದೆ ಹಾವುಗಳ ರಕ್ಷಕರನ್ನು ಸನ್ಮಾನಿಸಿ ಗೌರವಿಸಿ ರೂ 10 ಲಕ್ಷಗಳ ಜೀವವಿಮೆ ಬಾಂಡಗಳನ್ನು ನೀಡಲಾಯಿತು.
ಪರಶುರಾಮ ಭಜಂತ್ರಿ, ಶಿವಶಂಕರ ಬೆವನೂರ ಉಪನ್ಯಾಸ ನೀಡಿದರು.
ವಿಜಯಪುರ ಪ್ರಾದೇಶಿಕ ಅರಣ್ಯ ವಿಭಾಗಾಧಿಕಾರಿ ಶಿವಶರಣಯ್ಯ ಅಧ್ಯಕ್ಷತೆ ವಹಿಸಿದ್ದರು.
ವಿಜಯಪುರ ಸಾಮಾಜಿಕ ಅರಣ್ಯ ವಿಭಾಗಾಧಿಕಾರಿ ವನಿತಾ ಆರ್, ಎಲೈಟ್ ಸಂಸ್ಥೆಯ ಕಾರ್ಯದರ್ಶಿ ಎಂ.ಎಂ.ಅಸಂತಾಪುರ, ಉಪ ವಿಭಾಗಾಧಿಕಾರಿ ಭಾಗ್ಯವಂತಿ ಮಸೂದಿ, ಸಾಮಾಜಿಕ ಅರಣ್ಯಾಧಿಕಾರಿ ಬಿ.ಪಿ.ಚವ್ಹಾಣ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜೀವ ಬಿರಾದಾರ ವೇದಿಕೆ ಮೇಲಿದ್ದರು.
ವನಿತಾ ಬಿರಾದಾರ ಪ್ರಾರ್ಥನೆ ಗೀತೆ ಹಾಡಿದರು. ಪ್ರಭುಲಿಂಗ ಭುಯ್ಯಾರ ಸ್ವಾಗತಿಸಿದರು. ಎಸ್ ಜಿ. ಸಂಗಾಲಕ ನಿರೂಪಿಸಿದರು. ಎಂ.ಎನ್ ಮುಲ್ಲಾ ವಂದಿಸಿದರು.