ಬೀದರ: ಬೀದರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಾತ್ರಿಯಿಡೀ ಭಾರೀ ಮಳೆಯಾಗಿ, ನಸುಕಿನ ಜಾವ ಕೂಡ ಮೋಡ ಕವಿದ ವಾತವರಣವಿದ್ದು ಜೋರಾಗಿ ಸುರಿಯುತ್ತಿರುವ ಮಳೆ ಮುಂದುವರೆದು ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಬೆಳಿಗ್ಗೆ ಯಿಂದ ಸುರಿಯುತ್ತಿರುವ ಮಳೆಗೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಛತ್ರಿ ಹಿಡಿದು ಹೋಗಲು ಹರಸಾಹಸಪಟ್ಟರು. ಮಳೆ ನಿಲ್ಲುವ ಲಕ್ಷಣ ಕಂಡು ಬರದೇ ಇದ್ದುದರಿಂದ ಜನರು ಮಳೆಯಲ್ಲಿ ಸ್ವೆಟರ ಜಾಕೆಟಗಳನ್ನೂ ಧರಿಸಿ ಛತ್ರಿ ಹಿಡಿದುಕೊಂಡು ತಿರುಗುವ ದೃಶ್ಯ ಸರ್ವ ಸಾಮಾನ್ಯವಾಗಿತ್ತು.
ಬೀದರ ಜಿಲ್ಲೆಯಾದ್ಯಂತ ಇಂದು ಮತ್ತು ನಾಳೆ ಜೋರಾಗಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಜನರಲ್ಲಿ ಆತಂಕ ಹೆಚ್ಚಿದೆ.
ಬೀದರ ನಗರದ ಪ್ರಮುಖ ಬಡಾವಣೆ ರಾಮಪುರೆ ಬ್ಯಾಂಕ ಕಾಲೋನಿಯ ರಸ್ತೆ ಸಂಪೂರ್ಣ ಜಲಾವೃತವಾಗಿ ನೀರಿನಲ್ಲಿ ವಾಹನ ಸವಾರರ ಸಂಚಾರ ಪರದಾಟ, ಹದಗೆಟ್ಟ ರಸ್ತೆಯಲ್ಲಿ ಜನರ ಸಂಚಾರ ಪರದಾಟ, ನಗರ ಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ತಗ್ಗು ಹಳ್ಳ ಗುಂಡಿಯಲ್ಲಿ ಸಂಚರಿಸುತ್ತಿರುವ ಕಾರ ಆಟೋ ದ್ವಿಚಕ್ರ ವಾಹನ ಸವಾರರು ನಗರ ಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ವರದಿ: ನಂದಕುಮಾರ ಕರಂಜೆ, ಬೀದರ