spot_img
spot_img

ಸಹೃದಯಿ ನೇರ ದಿಟ್ಟ ನಿಲುವಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ

Must Read

spot_img
- Advertisement -

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ

ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಂಕಿನುಂಡೆಯ ಬಾನಿಗುರುಳು ಬಿಟ್ಟು

ಈ ಮೇಲಿನ ಗೀತೆಯನ್ನು ಕೇಳುತ್ತಿದ್ದರೆ ನೇರ ದಿಟ್ಟ ನಿಲುವಿನ ವ್ಯಕ್ತಿ ಶ್ರೀಶೈಲ ಕರೀಕಟ್ಟಿಯವರ ವ್ಯಕ್ತಿತ್ವ ನಮ್ಮ ಕಣ್ಣಮುಂದೆ ತೇಲಿಬರುತ್ತದೆ. ಜುಲೈ ೩೧ ಕರೀಕಟ್ಟಿಯವರು ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನಿವೃತ್ತಿ ಹೊಂದುವ ದಿನ.ಈ ದಿನದ ಮುಂಚಿತವಾಗಿಯೇ ಹಲವು ಸಂಘ ಸಂಸ್ಥೆಗಳ ಶಾಲೆಯವರು ಅವರನ್ನು ಗೌರವಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ. ಒಬ್ಬ ವ್ಯಕ್ತಿ ಇದ್ದಾಗ ಏನು ಮಾಡಿದರು ಎನ್ನುವುದಕ್ಕಿಂತ ಅವರು ನಮ್ಮಿಂದ ಅಗಲಿ ನಿವೃತ್ತ ಜೀವನ ಸಾಗಿಸಲು ಹೊರಟಾಗ ನಾವು ಅವರು ಮಾಡಿದ ಕಾರ್ಯಗಳನ್ನು ನೆನೆಯುವುದಿದೆಯಲ್ಲ. ಅದು ಬಹಳ ಮಹತ್ವದ್ದು.

- Advertisement -

ಕೆಲವು ಜನ ತಮ್ಮ ಬದುಕಿನಲ್ಲಿ ಏನನ್ನು ಮಾಡದೇ ಅಂದರೆ ಎಷ್ಟು ಬೇಕೋ ಅಷ್ಟು ಮಾತ್ರ ಕೆಲಸ ನಿರ್ವಹಿಸಿ ನಿವೃತ್ತರಾಗುತ್ತಾರೆ. ಅಂಥವರು ಯಾರ ನೆನಪಿನಲ್ಲಿ ಉಳಿಯುವುದಿಲ್ಲ.ಆದರೆ ತಮ್ಮ ವೃತ್ತಿಯ ಜೊತೆಗೆ ದಿಟ್ಟತನದ ನಿರ್ಧಾರದಿಂದ ಹತ್ತು ಹಲವು ಕಾರ್ಯಗಳನ್ನು ಯಾರು ಮಾಡುವರೋ ಅವರ ಸೇವೆ ಅಜರಾಮರವಾಗಿ ಉಳಿಯುತ್ತದೆ. ಅಂತಹ ವ್ಯಕ್ತಿಗಳು ಸದಾ ತಮ್ಮ ಕರ್ತವ್ಯದಿಂದ ದಕ್ಷತೆಯಿಂದ ಎಲ್ಲರ ಮನದಲ್ಲಿ ಉಳಿಯುತ್ತಾರೆ. ಅಂತವರ ಸಾಲಿನಲ್ಲಿ ಸೇರಬಲ್ಲ ಹೆಸರು ಶ್ರೀಶೈಲ ಕರೀಕಟ್ಟಿಯವರು.

ಜುಲೈ ೩೧ ಅವರ ನಿವೃತ್ತಿ ಒಂದು ಕಡೆಯಾದರೆ ಅವರ ಸೇವೆಯನ್ನು ನೆನೆಯುತ್ತ ಶಿಕ್ಷಕರು ಅವರನ್ನು ಬೀಳ್ಕೊಡುವ ಕ್ಷಣಗಳು ಕಣ್ತುಂಬಿಕೊಳ್ಳುವಂತಹವು. ನನಗಂತೂ ಅವರು ನಾನು ತೆಗ್ಗಿಹಾಳ ಶಾಲೆಯಲ್ಲಿ ಪ್ರಭಾರಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಒಂದು ಕಹಿ ಘಟನೆ ನನ್ನ ಜೀವನದಲ್ಲಿ ನಡೆದು ಇನ್ಮುಂದೆ ನನಗೆ ಪ್ರಧಾನ ಗುರು ಹುದ್ದೆಯ ಜವಾಬ್ದಾರಿ ಬೇಡ ಶಿಕ್ಷಕನಾಗಿ ಉಳಿಯುತ್ತೇನೆ ಎಂದು ಅವರು ಅಂದು ನಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಕಾರ್ಯಾಲಯಕ್ಕೆ ಬಂದು ಭೇಟಿಯಾಗಿ ಅಲವತ್ತುಕೊಂಡಾಗ ನನ್ನ ಸಮಸ್ಯೆಯನ್ನು ಆಲಿಸಿ.

“ಹೋಗು ನೀನೇ ಮುಂದುವರೆದು ಕರ್ತವ್ಯ ನಿರ್ವಹಿಸು ಮುಂದೆ ಬಂದದ್ದಕ್ಕೆ ನಾನಿದ್ದೇನೆ”ಎಂದು ದೈರ್ಯ ತುಂಬಿ ಕಳಿಸಿದ್ದನ್ನು ಇಂದು ನಾನು ಮರೆಯಲಾರೆ. ಅವರು ಧಾರವಾಡಕ್ಕೆ ವರ್ಗವಾದಾಗಲೂ ಕೂಡ ನನ್ನ ಕಾಲೇಜಿನ ಕಾರ್ಯಕ್ರಮಕ್ಕೆ ಎಂದುಕೊಂಡು ಧಾರವಾಡಕ್ಕೆ ಹೋದಾಗ ಅಲ್ಲಿಯೂ ಕೂಡ ನನ್ನ ಶಿಕ್ಷಕ ಮಿತ್ರವರ್ಗದ ನೋವು ನಲಿವುಗಳನ್ನು ಸಾಹೇಬರ ಬಳಿ ಹೇಳಿದಾಗ ಅವುಗಳಿಗೆ ಸ್ಪಂಧಿಸಿದ್ದನ್ನು ಮರೆಯಲಾರೆ. ಇಷ್ಟೆಲ್ಲ ಹೇಳಲು ಕಾರಣ ಕೆಲಸ ಮಾಡುವವರು ಯಾರೇ ಇರಲಿ ಅವರು ಕರೀಕಟ್ಟಿ ಸಾಹೇಬರ ಬಳಿ ಬಂದು ತಮ್ಮ ನೋವುಗಳನ್ನು ಹೇಳಿದಾಗ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿ ದೈರ್ಯ ತುಂಬುವ ಅವರ ಮನೋಭಾವ ಇತರರಿಗೂ ಮಾದರಿ.

- Advertisement -

ಬಹುಶಃ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದರಿಂದಲೋ ಏನೋ ಅವರಲ್ಲಿ ಈ ಮನೋಭಾವ ರೂಢಿಗತವಾಗಿರಬಹುದೇನೋ ಅನಿಸುತ್ತದೆ.ಅಂತಹ ವ್ಯಕ್ತಿ ಜುಲೈ ೩೧ ರಂದು ನಿವೃತ್ತಿ ಹೊಂದುತ್ತಿರುವುದು ಶೈಕ್ಷಣಿಕ ರಂಗಕ್ಕೆ ಅದರಲ್ಲೂ ಸವದತ್ತಿ ತಾಲೂಕಿನ ಶಿಕ್ಷಣ ವ್ಯವಸ್ಥೆಗೆ ತುಂಬಲಾರದ ನಷ್ಟ.ಆದರೆ ಅವರ ಕೃಷಿ ಪ್ರೀತಿಗೆ ಭೂತಾಯಿಗೆ ಸಂತಸವೋ ಸಂತಸ ಅವರು ಬಿಡುವಿನ ವೇಳೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ರೀತಿ ಆ ಭೂತಾಯಿಗೆ ಈಗ ಬಹಳ ಸಂತಸವಾಗುತ್ತಿರಬಹುದೇನೋ.?: ಕರೀಕಟ್ಟಿ ಸಾಹೇಬರ ವ್ಯಕ್ತಿತ್ವದ ಕುರಿತು ಅವರ ಸಂಕ್ಷಿಪ್ತ ಪರಿಚಯವನ್ನು ಈ ಸಂದರ್ಭದಲ್ಲಿ ಮಾಡಬಯಸುವೆ

ಶರಣ ದಂಪತಿಗಳ ಸುಪುತ್ರರು:

ಬೆಳವಡಿ ಮಲ್ಲಮ್ಮಳ ಕ್ಷಾತ್ರ ತೇಜಸ್ಸಿನ ಪುಣ್ಯ ಭೂಮಿ ಬೆಳವಡಿ ಗ್ರಾಮ ಕರೀಕಟ್ಟಿಯವರ ಮೂಲ ಸ್ಥಳ. ಆ ಗ್ರಾಮದಲ್ಲಿ ಶರಣ ದಂಪತಿಗಳಾದ ಚನ್ನಮಲ್ಲಪ್ಪ ಹಾಗೂ ವೀರಮ್ಮ ಅವರ ೭ ಜನ ಮಕ್ಕಳಲ್ಲಿ ಕೊನೆಯವರು. ಶ್ರೀಶೈಲ ಕರೀಕಟ್ಟಿಯವರು. ೨೩-೭-೧೯೬೩ ಜನಿಸಿದ ಇವರು ನಾಲ್ಕು ಜನ ಗಂಡು ಮಕ್ಕಳು ಮತ್ತು ಮೂರು ಜನ ಹೆಣ್ಣು ಮಕ್ಕಳಲ್ಲಿ ಕೊನೆಯವರು. ಇವರ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣವೆಲ್ಲ ಬೆಳವಡಿ ಗ್ರಾಮದಲ್ಲಿ ಜರುಗಿತು. ನಂತರ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಪಿ.ಯು.ಸಿ ಸೈನ್ಸ ತೇರ್ಗಡೆಯಾದರು.

ಮಿಲಿಟರಿ ಸೇವೆಯಿಂದ ಶಿಕ್ಷಣ ಇಲಾಖೆಯವರೆಗೆ ವೃತ್ತಿ ಬದುಕು

ಪಿ.ಯು.ಸಿ ವ್ಯಾಸಂಗ ಮುಗಿಸಿದ ತಕ್ಷಣದ ವರ್ಷದಲ್ಲಿ ಇವರು ತಮ್ಮ ಇಚ್ಚೆಯ ಹುದ್ದೆ ಭಾರತೀಯ ಸೇನಾ ಪಡೆಯಲ್ಲಿ ಸೇವೆಗೆ ಸೇರಿದರು. ದೇಶದ ವಿವಿಧ ಗಡಿಗಳಲ್ಲಿ ಸೇವೆ ಸಲ್ಲಿಸುತ್ತ ಪದವಿ ಶಿಕ್ಷಣವನ್ನು ಬಾಹ್ಯವಾಗಿ ಪೂರೈಸಿದರು. ನಂತರ ಸೇನೆಯಿಂದ ಹೊರಬಂದು ಬಿ.ಈಡಿ ಶಿಕ್ಷಣ ಪೂರೈಸಿದರು ಗೋಕಾಕ ತಾಲೂಕಿನ ಬೆಟಗೇರಿಯ ಕೃಷ್ಣಶರ್ಮ ಸರಕಾರಿ ಪ್ರೌಢಶಾಲೆಗೆ ಸೇವೆಗೆ ಸೇರಿದರು. ಕೆ.ಇ.ಎಸ್ ಪೂರೈಸಿದ್ದ ಇವರು ಮುಖ್ಯೋಪಾಧ್ಯಾಯರಾಗಿ ಹತ್ತು ಹಲವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುವ ಕಾರ್ಯಕ್ರಮಗಳನ್ನು ತಾವು ಸೇವೆ ಸಲ್ಲಿಸುತ್ತಿದ್ದ ಶಾಲೆಯಲ್ಲಿ ತಮ್ಮೊಡನೆ ಸಹಶಿಕ್ಷಕರನ್ನು ಕರೆದುಕೊಂಡು ವಿಶೇಷ ತರಗತಿಗಳನ್ನು ಸಂಘಟಿಸಿ ಶಾಲಾ ಆವರಣವನ್ನು ಶುಚಿಗೊಳಿಸಿ ಗಿಡಗಳನ್ನು ನೆಡುವ ಜೊತೆಗೆ ಕ್ರೀಡೆಗಳಲ್ಲಿ ಕೂಡ ಮಕ್ಕಳನ್ನು ತರಬೇತುಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಅವರ ಕುರಿತು ಮೆಚ್ಚುಗೆ ಮಾತುಗಳನ್ನು ಹೇಳುವುದನ್ನು ನೋಡಿದರೆ ಅವರ ಸೇವಾ ದಕ್ಷತೆ ಹೇಗಿತ್ತು ಎಂಬುದು ಕಂಡು ಬರುತ್ತದೆ.

ನಂತರ ಬೆಟಗೇರಿಯಿಂದ ಗೋಕಾಕದ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡು ಅಲ್ಲಿಯೂ ಕೂಡ ಉತ್ತಮ ಸೇವೆ ಸಲ್ಲಿಸುತ್ತಿರುವಾಗಲೇ ಸಂಕೇಶ್ವರ ಮೊರಾರ್ಜಿ ವಸತಿ ಶಾಲೆಗೆ ವರ್ಗಾವಣೆಗೊಂಡರು. ಅಲ್ಲಿ ಈಗಿನಂತೆ ಸುಸಜ್ಜಿತ ಕಟ್ಟಡವಿರಲಿಲ್ಲ ಇರುವ ಶಾಲಾ ಕೋಣೆಗಳು ಜೊತೆಗೆ ಗುಡ್ಡದ ಪ್ರದೇಶವಾಗಿದ್ದರಿಂದ ಎಲ್ಲ ಸಿಬ್ಬಂಧಿಯನ್ನು ಬಳಸಿಕೊಂಡು ಗಿಡಮರಗಳನ್ನು ನೆಡುವ ಮೂಲಕ ಶಾಲಾ ಆವರಣವನ್ನು ಸೌಂದರ್ಯಗೊಳಿಸಿದರು. ಸಮುದಾಯದ ಸಹಕಾರದ ಜೊತೆಗೆ ಸಿಬ್ಬಂಧಿಯ ಸಹಕಾರದಿಂದ ವಸತಿ ನಿಲಯದ ಕೊಠಡಿಗಳನ್ನು ಕೂಡ ಪೂರ್ಣಗೊಳಿಸಿದ್ದು ಇವರ ಸಾಧನೆಗೆ ಹೆಮ್ಮೆ.

ಅಲ್ಲಿ ಎಲ್ಲ ಮಕ್ಕಳಿಗೂ ಮಿಲಟರಿ ರೀತಿ ತರಭೇತಿಯನ್ನು ನೀಡುವ ಮೂಲಕ ಜಿಲ್ಲೆಯಲ್ಲಿಯೇ ಅದೊಂದು ಮಾದರಿ ಪ್ರೌಢಶಾಲೆ ಎನ್ನುವ ಮಟ್ಟಿಗೆ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತಮ್ಮ ನೇತೃತ್ವದಲ್ಲಿ ತಯಾರು ಮಾಡಿದ್ದು ಆಗ ಜಿಲ್ಲೆಯ ಎಲ್ಲ ಮೊರಾರ್ಜಿ ವಸತಿ ಶಾಲೆಗಳಿಗಿಂತ ಹೆಚ್ಚು ಬೇಡಿಕೆಯ ಮೊರಾರ್ಜಿ ವಸತಿ ಶಾಲೆ ಇದು ಎನ್ನುವ ಮಟ್ಟಿಗೆ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ದೊರೆಯುವಂತೆ ಮಾಡುವಲ್ಲಿ ಇವರು ಮುಂಚೂಣಿಯ ನಾಯಕರಾಗಿದ್ದರು ಎಂದು ಇಂದಿಗೂ ಅವರ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಹೇಳುವುದನ್ನು ನಾನು ಕೇಳಿದ್ದೇನೆ.

ನಂತರದ ವರ್ಷಗಳಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾಗಿ ವರ್ಗಾವಣೆಗೊಂಡು ಸಾಕ್ಷರತೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಯಾವುದೇ ಇಲಾಖೆಗೆ ಹೋದರೂ ತಮ್ಮ ಕರ್ತವ್ಯ ದಕ್ಷತೆಯಿಂದ ಬಹು ಬೇಗನೇ ಬದಲಾವಣೆಯ ಹರಿಕಾರರಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಇವರ ಪ್ರವೃತ್ತಿ ನಿಜಕ್ಕೂ ಅಭಿನಂದನಾರ್ಹವಾದದ್ದು. ಮುಂದಿನದ್ದು ಇತಿಹಾಸ ಅವರು ಸವದತ್ತಿ ಎಲ್ಲಮ್ಮನ ಕೃಪೆಗೆ ಬರುವ ಮೂಲಕ ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆಗಮಿಸಿದರು.

ಇವರ ಕಾಲ್ಗುಣವೋ ಏನೋ ಇವರು ಬಂದ ನಂತರ ಶಾಲೆಗಳ ಆಸ್ತಿ ನೋಂದಣಿ ಕಾರ್ಯಕ್ಕೆ ಮುಂದಾಗಿ ತಾಲೂಕಿನ ಬಹುತೇಕ ಶಾಲೆಗಳು ಆಸ್ತಿ ನೋಂದಣಿ ಆಗದೇ ಇರುವುದನ್ನು ಗಮನಿಸಿ ಶಾಲಾ ಆಸ್ತಿ ರಜಿಸ್ಟರ ಮಾಡುವ ಕಾರ್ಯದಲ್ಲಿ ನಿರತರಾದರು.ನಂತರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಹುದ್ದೆಗೆ ಹೆಚ್ಚುವರಿ ಕಾರ್ಯ ಕ್ಕೆ ಅಂದಿನ ಶಾಸಕರ ಒತ್ತಾಸೆ ಮೇರೆಗೆ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ತಾಲೂಕಿನ ಶಾಲೆಗಳಿಗೆ ಕಂಪೌಂಡ ನಿರ್ಮಾಣಕ್ಕೂ ಕಾರಣೀಭೂತರಾದರು.

ಶಾಲೆಗಳ ಸೌಂದರ್ಯಿಕರಣಕ್ಕೆ ಒತ್ತು ನೀಡಿದ ಅವರ ಅವಧಿಯಲ್ಲಿ ತಾಲೂಕಿನ ಎಲ್ಲ ಶಾಲೆಗಳಿಗೆ ಮೂಲಭೂತ ಸೌಕರ್ಯಗಳು ದೊರೆಯುವಂತೆ ಮಾಡಿದರು. ಇದೇ ಸಂದರ್ಭದಲ್ಲಿ ಬೈಲಹೊಂಗಲ ಮತ್ತು ರಾಮದುರ್ಗ ತಾಲೂಕ ಹೆಚ್ಚುವರಿ ಕಾರ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುವ ಅವಕಾಶ ಇವರಿಗೆ ಒದಗಿ ಬಂದಿತು.ಮೂರು ತಾಲೂಕುಗಳನ್ನು ಶೈಕ್ಷಣಿಕ ರಂಗದಲ್ಲಿ ಗುಣಾತ್ಮಕ ಶಿಕ್ಷಣದತ್ತ ಕೊಂಡೊಯ್ಯುವ ಇವರ ಪಾತ್ರ ನಿಜಕ್ಕೂ ಅಭಿನಂದನಾರ್ಹ. ನಂತರ ಐತಿಹಾಸಿಕ ಕ್ಷಣಕ್ಕೆ ಕಾರಣವಾಗಿದ್ದು ಸವದತ್ತಿ ಪುರಸಭೆ ಪಕ್ಕದಲ್ಲಿ ಗುರುಭವನ ಕಟ್ಟಡಕ್ಕೆ ನಾಂದಿ ಹಾಡಿದ್ದು. ೨೦೦೮-೦೯ ರಲ್ಲಿ ಈ ಕಾರ್ಯಕ್ಕೆ ನಾಂದಿ ಹಾಡಿ ಭೂಮಿ ಪೂಜೆ ನೆರವೇರಿಸಿ ಕಟ್ಟಡಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಾವು ದಿವಂಗತ ಆನಂದ ಮಾಮನಿಯವರ ಪ್ರೋತ್ಸಾಹವನ್ನು ಕೂಡ ನಾವು ನೆನೆಯಲೇಬೇಕು. ಕಾರ್ಯ ಆರಂಭಿಸುವ ಸಮಯದಲ್ಲಿ ಅದು ಅಲ್ಲಿ ಬೇಡ ಎಂದು ಕೆಲವರು ವಾದವಿವಾದಕ್ಕೆ ತಿರುಗಿ ಅದು ಕೋರ್ಟ ಮೆಟ್ಟಿಲು ಏರುವಂತಾಯಿತು. ಕೋರ್ಟಿನಲ್ಲಿ ವ್ಯಾಜ್ಯ ಆರಂಭವಾಯಿತು. ಆಗ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದವರು ಸುರೇಶ ಬೆಳವಡಿಯವರು. ಅವರು ನಂತರದ ದಿನಗಳಲ್ಲಿ ಕೂಡ ಅಂದರೆ ಮೂರು ಅವಧಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ತಮ್ಮ ಅವಧಿಯಲ್ಲಿ ಕೋರ್ಟ ವ್ಯಾಜ್ಯ ಶಿಕ್ಷಕರ ಪರವಾಗಿ ಬರಲು ಅವರ ಪ್ರಯತ್ನ ಕೂಡ ಗಮನಾರ್ಹ.

ನಂತರ ಇವರು ಧಾರವಾಡಕ್ಕೆ ವರ್ಗಗೊಂಡರು. ಧಾರವಾಡ ಗ್ರಾಮೀಣ ಮತ್ತು ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಕಲಘಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಯಾಗಿ ಹೆಚ್ಚುವರಿ ಕಾರ್ಯ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಅವರಿಗೆ ಧಾರವಾಡ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ವರ್ಗಾವಣೆಯಾಯಿತು. ಅಲ್ಲಿಯೂ ಕೂಡ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರು.

ನಂತರ ಹುಬ್ಬಳ್ಳಿ ಗ್ರಾಮೀಣ ಮತ್ತು ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದರು.ಇದೇ ಸಂದರ್ಭ ಸನ್ಮಾನ್ಯ ಆನಂದ ಮಾಮನಿಯವರು ಇವರು ಬಂದರೆ ನಿಂತು ಹೋದ ಗುರುಭವನ ಕಾರ್ಯಕ್ಕೆ ಕಾಯಕಲ್ಪ ದೊರೆಯುವುದು ಎಂಬುದನ್ನು ಮನಗಂಡು ಸವದತ್ತಿಗೆ ಇವರನ್ನು ಕರೆತಂದರು.

ಇವರ ಕಾಲದಲ್ಲಿ ಆರಂಭಗೊಂಡಿದ್ದ ಗುರುಭವನ ಹಗಲಿರುಳೆನ್ನದೇ ಪೂರ್ಣಗೊಳಿಸಿ ಅದನ್ನು ಶಿಕ್ಷಕ ಬಳಕಗೆ ಲೋಕಾರ್ಪಣೆಯನ್ನು ಯಜ್ಞ ಯಾಗಾದಿಗಳನ್ನು ಸ್ವಾಮೀಜಿಗಳ ನೇತೃತ್ವದಲ್ಲಿ ಉದ್ಘಾಟಿಸಿದ್ದು ನ ಭವಿತೋ ನ ಭವಿಷ್ಯತಿ ಎನ್ನುವಂತಾಯಿತು. ಇಂದು ನಾವು ಶೈಕ್ಷಣಿಕ ಸಭೆ ಸಮಾರಂಭಗಳನ್ನು ಈ ಗುರು ಭವನದಲ್ಲಿ ಜರುಗಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣೀಭೂತರು  ಶ್ರೀಶೈಲ ಕರೀಕಟ್ಟಿಯವರು.

ಸುಖ ದಾಂಪತ್ಯದ ಬದುಕು:

ಕರೀಕಟ್ಟಿಯವರ ಧರ್ಮ ಪತ್ನಿ ನಂದಾ. ಹೆಸರಿಗೆ ತಕ್ಕಂತೆ ಪತಿಯ ಪ್ರತಿ ಕಾರ್ಯಕ್ಕೆ ಸ್ಪೂರ್ತಿದಾತೆ. ನಿಮ್ಮ ಕೀರ್ತಿ ಸದಾ ನಂದಾದೀಪದಂತೆ ಇರಲಿ ಎಂದು ಪತಿ ಹಗಲಿರುಳನ್ನದೇ ಶಿಕ್ಷಣ ಇಲಾಖೆಯಲ್ಲಿ ಸೇವೆಯಲ್ಲಿ ತೊಡಗಿದ್ದರೆ ಪತ್ನಿ ಮಕ್ಕಳ ಆರೈಕೆಯಲ್ಲಿ ನಿರತರು.ಇವರಿಗೆ ಮೂರು ಜನ ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಕೊನೆಯವನು ಗಂಡು ಮಗ. ಹಿರಿಯ ಮಗಳು ವೈದ್ಯೆ ಅಳಿಯನೂ ಕೂಡ ಡಾಕ್ಟರ್ ಮತ್ತೊಬ್ಬ ಮಗಳು ಇಂಜನೀಯರ್ ಅಳಿಯ ಕೂಡ ಇಂಜನೀಯರ್. ಕೊನೆಯವ ಮಗ ಅವನು ಕೂಡ ಎಂ.ಎಸ್ಸಿ ಬಿ.ಈಡಿ ಶಿಕ್ಷಣ ಪೂರೈಸಿ ತಂದೆಯಂತೆ ಶಿಕ್ಷಣ ಇಲಾಖೆಯಲ್ಲಿ ಸೇವೆಗೆ ಸನ್ನದ್ಧನಾಗಿರುವನು. ಮೂರು ಮಕ್ಕಳೂ ವಿವಾಹಿತರೆಂಬುದು ಕೂಡ ವಿಶೇಷ. ತಂದೆಯ ಸೇವೆಯ ಸಂದರ್ಭದಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸಿದವರು ಕರೀಕಟ್ಟಿಯವರು. ಅವರ ನಿವೃತ್ತ ಬದುಕು ಮಕ್ಕಳು ಮೊಮ್ಮಕ್ಕಳ ಜೊತೆಗೆ ತಮ್ಮದೇ ಆದ ಕೃಷಿ ಭೂಮಿಯನ್ನು ನೋಡಿಕೊಳ್ಳುವುದರ ಮೂಲಕ ಜರುಗುತ್ತದೆ ಎಂದು ಸಂತಸದಿಂದ ನುಡಿಯುವ ಇವರು. ತಾವು ಎಲ್ಲೆಲ್ಲಿ ಸೇವೆ ಸಲ್ಲಿಸಿರುವರೋ ಅಲ್ಲಲ್ಲಿ ಗುರುತರವಾದ ಕಾರ್ಯ ಸಂಘಟಿಸಿ ಶಿಕ್ಷಕರ ಮನದಾಳದಲ್ಲಿ ಉಳಿದಿರುವುದು ಅವರ ಸೇವೆಗೆ ಸಾರ್ಥಕ ಬದುಕನ್ನು ತಂದಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಇಂತಹ ಓರ್ವ ಕ್ಷೇತ್ರ ಶಿಕ್ಷಣಾಧಿಕಾರಿಯ ನಿವೃತ್ತಿ ಸಂದರ್ಭವನ್ನು ತಾಲೂಕಿನ ಎಲ್ಲ ಶಿಕ್ಷಕರ ಸಂಘಟನೆಗಳು ಶಿಕ್ಷಕರು ವಿವಿಧ ಸಂಘಟನೆಗಳವರು ತಮ್ಮ ಮನೆಯ ಕಾರ್ಯಕ್ರಮದಲ್ಲಿ ಯಾವ ರೀತಿ ಸಂತಸ ಸಂಭ್ರಮದಿಂದ ಪಾಲ್ಗೊಂಡು ಕಾರ್ಯಕ್ರಮ ಮಾಡುತ್ತಿರುವರೋ ಆ ರೀತಿಯಲ್ಲಿ ಸವದತ್ತಿಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಜರುಗಿಸುತ್ತಿರುವುದು ಕೂಡ ಒಂದೆಡೆ ಸಂತಸ, ಮತ್ತೊಂದೆಡೆ ದಕ್ಷ ಅಧಿಕಾರಿಯವರ ಬೀಳ್ಕೊಡುಗೆ ಅವರ ಸೇವೆ ನೆನೆಯುವ ಕ್ಷಣವೂ ಕೂಡ.ದೇವರು ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ. ಮತ್ತೆ ಅವರಿಂದ ಶಿಕ್ಷಣ ಇಲಾಖೆಗೆ ಒಂದಲ್ಲ ಒಂದು ರೀತಿಯ ಮಾರ್ಗದರ್ಶನ ಸಿಗುವಂತಾಗಲಿ ಎಂದು ಆ ತಾಯಿ ರೇಣುಕಾ ಮಾತೆಯಲ್ಲಿ ಪ್ರಾರ್ಥಿಸುವ ಮೂಲಕ ಅವರ ಬದುಕಿನ ಪುಟಗಳನ್ನು ನನ್ನ ನುಡಿ ನಮನದ ಮೂಲಕ ಸಲ್ಲಿಸುವೆ.


ವೈ. ಬಿ ಕಡಕೋಳ

- Advertisement -
- Advertisement -

Latest News

ಟ್ಯಾಲೆಂಟ್ ಸರ್ಚ ಪರೀಕ್ಷೆ: ಬೂದಿಹಾಳ ಪ್ರೌಢಶಾಲೆಯ ಸಂತೋಷಕುಮಾರ ಮನಗುತ್ತಿ ಉತ್ತಮ ಸಾಧನೆ.

ಬೈಲಹೊಂಗಲ: ಜಿಲ್ಲಾ ಪಂಚಾಯತಿ ಬೆಳಗಾವಿ ಇವರ ವತಿಯಿಂದ ನಡೆದ ಜಿಲ್ಲಾ ಮಟ್ಟದ ಟ್ಯಾಲೆಂಟ್ ಸರ್ಚ್ ಪರೀಕ್ಷೆಯಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ 10 ನೇ...
- Advertisement -

More Articles Like This

- Advertisement -
close
error: Content is protected !!
Join WhatsApp Group