ಕಲ್ಲೋಳಿ (ತಾ. ಮೂಡಲಗಿ): ಡಾ. ಎಂ. ಎಂ. ಕಲಬುರ್ಗಿ ಅವರು ಕಿತ್ತೂರ ಸಂಸ್ಥಾನದ ಕುರಿತು ಅತ್ಯಂತ ಸೂಕ್ಷ್ಮ ವಿಚಾರಗಳ ಬಗ್ಗೆ ಮಾಡಿದ ಸಂಶೋಧನೆ ಸ್ಮರಣೀಯವಾಗಿದೆ. ಸಮಕಾಲೀನ ಆಕರಗಳನ್ನು ಆಧಾರವಾಗಿಟ್ಟುಕೊಂಡು ಕಿತ್ತೂರಿನ ಇತಿಹಾಸವನ್ನು ಮರು ಸೃಷ್ಟಿ ಮಾಡಿದ್ದಾರೆ. ಕಲಬುರ್ಗಿ ಅವರ ಸಂಶೋಧನೆಗಳು ಯಾವಾಗಲೂ ಸತ್ಯದ ಹೊಸ ದೃಷ್ಟಿಕೋನದಲ್ಲಿ ಇರುತ್ತವೆ ಎಂದು ಹಾರೂಗೇರಿಯ ಹಿರಿಯ ಸಾಹಿತಿ ಸಂಶೋಧಕ ಡಾ. ವ್ಹಿ.ಎಸ್. ಮಾಳಿ ನುಡಿದರು.
ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಇವರುಗಳ ಸಹಯೋಗದಲ್ಲಿ ಗುರುವಾರ ೨೪.೮.೨೦೨೩ ರಂದು ಹಮ್ಮಿಕೊಂಡಿದ್ದ ೨೦೨೩-೨೪ನೆಯ ಸಾಲಿನ ವಿಶೇಷ ಸರಣಿ ಉಪನ್ಯಾಸ ಮಾಲಿಕೆಯ ನಾಲ್ಕನೆಯ ಉಪನ್ಯಾಸ ಡಾ.ಎಂ. ಎಂ. ಕಲಬುರ್ಗಿ ಅವರ ಕಿತ್ತೂರು ಕುರಿತ ಶೋಧಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಕನ್ನಡ ವಿದ್ವಾಂಸರಲ್ಲಿ ಡಾ. ಎಂ.ಎಂ. ಕಲಬುರ್ಗಿಯವರು ಒಬ್ಬರು. ಕಲಬುರ್ಗಿಯವರು ಮಾತ್ರ ಎಲ್ಲಾ ಕ್ಷೇತ್ರಾಧ್ಯಯನಗಳಲ್ಲಿ ಸ್ವತಂತ್ರ ಪ್ರತಿಭೆ ಮೆರೆದಿದ್ದಾರೆ. ಶಾಸನ, ವಾಸ್ತುಶಿಲ್ಪ, ಸ್ಮಾರಕಗಳ ಪರಿವೀಕ್ಷಣೆ, ಶಿಷ್ಟ ಸಾಹಿತ್ಯ, ಜಾನಪದ ಸಾಹಿತ್ಯ, ಚರಿತ್ರೆ, ಹಸ್ತಪ್ರತಿ, ಗ್ರಂಥ ಸಂಪಾದನೆ, ನಾಮವಿಜ್ಞಾನ, ಪ್ರಾಚ್ಯವಸ್ತು, ವ್ಯಾಕರಣ, ಧರ್ಮ, ಸಂಸ್ಕೃತಿ, ಛಂದಸ್ಸು, ಸಂಶೋಧನೆ, ವಿಮರ್ಶೆ, ನಾಟಕ, ಕಾವ್ಯ ಹೀಗೆ ಹತ್ತು ಹಲವಾರು ಜ್ಞಾನ-ವಿಜ್ಞಾನ ಕ್ಷೇತ್ರ ಗಳಲ್ಲೂ ತಮ್ಮ ಅಧಿಕೃತ ಮಾರ್ಗದ ಛಾಪು ಮೂಡಿಸಿರುವ ಶ್ರೇಯಸ್ಸು ಡಾ. ಕಲಬುರ್ಗಿಯವರಿಗೆ ಸಲ್ಲುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಎಸ್. ಎಂ. ಗಂಗಾಧರಯ್ಯ ಮಾತನಾಡಿ ಕಿತ್ತೂರ ಸಂಸ್ಥಾನ ಮತ್ತು ರಾಣಿ ಚನ್ನಮ್ಮಳ ಕುರಿತಾದ ವಿಷಯಗಳನ್ನು ಆಳವಾದ ಅಧ್ಯಯನಕ್ಕೆ ಒಳಪಡಿಸಿ ಮಾಹಿತಿ ಸಂಗ್ರಹ ಮತ್ತು ಪ್ರಕಟಣೆಯ ಕಾರ್ಯವನ್ನು ಪೀಠದ ವತಿಯಿಂದ ಮಾಡುತ್ತಿದ್ದೇವೆ ಎಂದು ಹೇಳಿದರು.
ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸಗೌಡ ಶಿ. ಪಾಟೀಲರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಸುರೇಶ ಭೀ. ಹನಗಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸರಕಾರ ಮಾಡಬೇಕಾದ ಕೇಲಸವನ್ನು ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಸಾತಪ್ಪ ಖಾನಾಪೂರ, ಮಹಾಂತೇಶ ಕಪ್ಪಲಗುದ್ದಿ, ಕಾಗವಾಡದ ಕನ್ನಡ ಅಧ್ಯಾಪಕ ಡಾ. ಆನಂದಕುಮಾರ ಜಕ್ಕನ್ನವರ, ಅರಬಾವಿಯ ಸುಭಾಸ ವಾಲಿಕಾರ, ಅಧ್ಯಾಪಕರುಗಳಾದ ಡಾ. ಕೆ. ಎಸ್. ಪರವ್ವಗೋಳ, ಶಂಕರ ಎಂ. ನಿಂಗನೂರ, ಎಂ. ಬಿ. ಕುಲಮೂರ, ವಿ. ವ್ಹಾಯ್. ಕಾಳೆ, ಪರ್ವೀಣ್ ಅತ್ತಾರ, ಬಿ. ಸಿ. ಮಾಳಿ, ಎಂ. ಬಿ. ಜಾಲಗಾರ, ಆರ್.ಎಸ್. ಪಂಡಿತ, ಬಿ. ಬಿ. ವಾಲಿ, ಎಸ್. ಎಂ. ಬಂಡಿ, ವಿಲಾಸ ಕೆಳಗಡೆ, ಎಮ್. ಎನ್. ಮುರಗೋಡ, ಎಮ್. ಆರ್. ಕರಗಣಿ ಮುಂತಾದವರು ಉಪಸ್ಥಿತರಿದ್ದರು.
ಕನ್ನಡ ಭಾಷಾ ಅಧ್ಯಾಪಕಿ ರಾಜಶ್ರೀ ತೋಟಗಿ ನಿರೂಪಿಸಿದರು. ಪ್ರೊ. ಡಿ.ಎಸ್.ಹುಗ್ಗಿ ಸ್ವಾಗತಿಸಿದರು. ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕರಾದ ಡಾ. ಮಹೇಶ ಗಾಜಪ್ಪನವರ ವಂದಿಸಿದರು.
ವರದಿ:
ಶಂಕರ ಎಂ. ನಿಂಗನೂರ
ಕಲ್ಲೋಳಿ
9742054268