ಮೂಡಲಗಿ: ‘ದಿನಪತ್ರಿಕೆಗಳನ್ನು ಓದುಗರ ಕೈಗೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಮಹತ್ವದಾಗಿದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಆಚರಿಸಿದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಪತ್ರಿಕಾ ವಿತರಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಿಕಾ ರಂಗದಲ್ಲಿ ಸಂಪಾದಕ ಮಂಡಳಿ ಎಷ್ಟು ಮಹತ್ವವೋ ಅಷ್ಟೇ ಪತ್ರಿಕೆಯ ವಿತರಣೆಯ ಕೊನೇ ಕೊಂಡಿಯಾಗಿರುವ ಪತ್ರಿಕಾ ವಿತರಕರು ಮಹತ್ವ ಎನಿಸುತ್ತಾರೆ, ಅವರ ನಿರ್ಲಕ್ಷವಾಗಬಾರದು ಎಂದರು.
ಪತ್ರಿಕೆ ವಿತರಕರು ಚಳಿ, ಮಳೆ, ಬಿಸಿಲು ಲೆಕ್ಕಿಸದೆ ರಜೆ ಇಲ್ಲದೆ ಪ್ರತಿ ದಿನ ಓದುಗರಿಗೆ ದಿನಪತ್ರಿಕೆ ಮುಟ್ಟಿಸುವಲ್ಲಿ ಪ್ರಾಮಾಣಿಕ ಕಾರ್ಯವನ್ನು ಮಾಡುತ್ತಿದ್ದಾರೆ. ಸರ್ಕಾರವು ಪತ್ರಿಕಾ ವಿತರಕರಿಗೂ ಕಾರ್ಮಿಕರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡುವುದು ಅವಶ್ಯವಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ವಿತರಕರಿಗೆ ಸಿಹಿ ಮತ್ತು ಕಲಿಕೆಯ ಪರಿಕರ ಇರುವ ಕಿಟ್ ನೀಡಿ ಸನ್ಮಾನಿಸಿದರು.
ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಅಧ್ಯಕ್ಷತೆವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೋಳನ್ನವರ ಪ್ರಾಸ್ತಾವಿಕ ಮಾತನಾಡಿದರು.
ಸುಭಾಷ ಕಡಾಡಿ, ಕಲ್ಲಪ್ಪ ಮೀಶಿ, ಹನಮಂತ ಸತರಡ್ಡಿ, ಸುರೇಶ ಪಾಟೀಲ, ಶಿವಬಸು ಗಾಡವಿ, ಸಿದ್ದಪ್ಪ ಕಪ್ಪಲಗುದ್ದಿ, ಸುನಿಲ ಗಸ್ತಿ ಭಾಗವಹಿಸಿದ್ದರು.