ಸಿಂದಗಿ: ಸನ್-2023-24 ನೇ ಸಾಲಿನಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಸಿಂದಗಿ ತಾಲೂಕು ಬರಪೀಡಿತ ತಾಲೂಕು ಅಂತಾ ಘೋಷಣೆಯಾಗಿದ್ದು ಆ ಹಿನ್ನೆಲೆಯಲ್ಲಿನ ಗ್ರಾಮೀಣ ಭಾಗದಲ್ಲಿ ಸಮಸ್ಯೆಗಳು ತಲೆದೋರದಂತೆ ಕೂಡಲೆ ಸಮೀಕ್ಷೆ ನಡೆಸಿ ಕ್ರಮ ಜರುಗಿಸಲು ಮುಂದಾಗಬೇಕಾಗಿದೆ ಎಂದು ವಿಜಯಪುರ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಹಾಗೂ ತಾಲೂಕಿನ ನೋಡಲ್ ಅಧಿಕಾರಿ ಪುಂಡಲೀಕ ಮಾನವರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿ, ಪ್ರತಿ ವಾರ ತಾಲೂಕು ಮಟ್ಟದ ಅಧಿಕಾರಿಗಳು ಟಾಸ್ಕಫೋರ್ಸ ಸಮಿತಿ ನಡೆಸುವ ಬಗ್ಗೆ ತಿಳಿಸಿ ಹಾಗೂ ತಾಲೂಕಿನಲ್ಲಿ ಕುಡಿಯುವ ನೀರಿನ ಕುರಿತು ಉತ್ತಮ ನೀರಿನ ಇಳುವರಿ ಹೊಂದಿರುವ ಖಾಸಗಿ ಕೊಳವೆ ಭಾವಿಗಳನ್ನು ಗುರುತಿಸುವದು, ಬೆಳೆ ಹಾನಿ ಜಂಟಿ ಸಮೀಕ್ಷೆ ಕಾರ್ಯದ ಪ್ರಗತಿ ಬಗ್ಗೆ ಪರಶೀಲನೆ ಅಗತ್ಯವಿದ್ದಲ್ಲಿ ಮೇವು ಬ್ಯಾಂಕ/ಗೋಶಾಲೆ ಸ್ಥಾಪಿಸುವ ಕುರಿತು ಚರ್ಚಿಸಲಾಯಿತು. ಜನರು ಗುಳೆ ಹೋಗದಂತೆ ತಡೆಯಲು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಲು ಸೂಚಿಸಬೇಕು ಪ್ರತಿ ವಾರ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ಹಾಗೂ ಗ್ರಾಮಗಳಿಗೆ ತಾಲೂಕಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಕುರಿತು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎನ್.ಎಸ್. ಬೂಸಗೊಂಡ ಸೇರಿದಂತೆ ತಾಲೂಕಿನ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.