ಸಾಗರ : ಹೊಸಗುಂದ : ಶೀಗಿ ಹುಣ್ಣಿಮೆ ಯ ದಿನವಾದ ಶನಿವಾರ ರೈತರ ಮನೆಯಲ್ಲಿ ಹಬ್ಬದ ಸಡಗರ, ಎಲ್ಲವನ್ನೂ ಕರುಣಿಸುವ ಭೂಮಿತಾಯಿಗೆ ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯದ ಅರ್ಚಕರಾದ ವಿಜಯ ಭಟ್ಟ ಅವರು ಶಾಸ್ತ್ರೀ ಎಸ್ಟೇಟಿನಲ್ಲಿ ಭವ್ಯ ಪೂಜೆ ಸಲ್ಲಿಸಿದರು.
ಜಮೀನಿನ ಫಸಲು ಚೆನ್ನಾಗಿ ಬರಲಿ, ಕೀಟಗಳಿಂದ ರಕ್ಷಣೆ ಸಿಗಲಿ, ನಷ್ಟ ಸಂಭವಿಸದಿರಲಿ ಎಂಬರ್ಥದಲ್ಲಿ ಭೂಮಿ ತಾಯಿಗೆ ಸೀಮಂತದ ಕ್ಷಣವೂ ಹಾಗೂ ಭೂದೇವಿಯನ್ನು ಸಂತುಷ್ಟಗೊಳಿಸುವುದಕ್ಕಾಗಿ, ಆಕೆಗೆ ಗೌರವವನ್ನು ಸೂಚಿಸುವುದಕ್ಕಾಗಿ ನಾವು ಶೀಗಿ ಹುಣ್ಣಿಮೆ ಆಚರಿಸುತ್ತಾ ಬಂದಿದ್ದೇವೆ ಎಂದು ಹೊಸಗುಂದ ಶಾಸ್ತ್ರೀ ಎಸ್ಟೇಟಿನ ಮ್ಯಾನೇಜರ್ ಮನು .ಎಂ.ಕಾಂಚನ್ ಭೂಮಿ ಹುಣ್ಣಿಮೆ ಪೂಜೆಯ ನಂತರ ಪತ್ರಿಕೆ ಜೊತೆ ಮಾತನಾಡುತ್ತ ನುಡಿದರು.
ಕೋವಿ ಮನೆತನದ ವಿಶ್ವ ಕೋವಿ ಮಾತನಾಡಿ , ಭೂ ತಾಯಿಗೆ ಪೂಜೆ ಸಲ್ಲಿಸಿ ನಮ್ಮ ಅಡಿಕೆ ತೋಟದಲ್ಲಿಯೇ ಭೋಜನ ಮಾಡುತ್ತೇವೆ ಬನ್ನಿ ಎಂದು ಅವರ ತೋಟಕ್ಕೆ ಕರೆದುಕೊಂಡು ಹೋಗಿ ಪೂಜೆಯ ನಂತರ ಪ್ರಸಾದದ ರೂಪದಲ್ಲಿ ಹೋಳಿಗೆ ಹಾಗೂ ಅನೇಕ ಸಿಹಿ ತಿನಿಸುಗಳನ್ನು ಬಾಳೆಯಲ್ಲಿ ಬಡಿಸಿದರು.
ಕೆಮ್ಮಣ್ಣು ಸುಣ್ಣದ ಚಿತ್ತಾರದ ಶೀಗಿ ಹುಣ್ಣಿಮೆ ಬುಟ್ಟಿ ಎಂದೇ ಕರೆಯುವ ಬಿದಿರಿನ ಬುಟ್ಟಿಯ ಮೇಲೆ ಚಿತ್ತಾಕರ್ಷಕ ಚಿತ್ತಾರ ಬರೆದ ಬುಟ್ಟಿ ಹೊತ್ತು ಹೊರಟಿದ್ದ ಸಚಿನ್ ಕೋವಿ ಪತ್ರಿಕೆ ಜೊತೆ ಮಾತನಾಡುತ್ತ ಬುಟ್ಟಿಯಲ್ಲಿಯೇ ಭೂತಾಯಿಗೆ ಬಗೆಬಗೆ ಖಾದ್ಯಗಳನ್ನು ಹೊತ್ತೊಯ್ಯಲಾಗುತ್ತಿದೆ ಹಾಗೂ ಈ ದಿನ ಮಲೆನಾಡಿನ ಜನರು ತಮ್ಮ ಹೊಲಗಳಲ್ಲಿ ಭೂಮಿ ಪೂಜೆಯನ್ನು, ಪೈರು ಪೂಜೆಯನ್ನು ಮಾಡಿ, ನೈವೇದ್ಯಗಳನ್ನು ಅರ್ಪಿಸಿ, ಗದ್ದೆಯಲ್ಲೇ ಅಥವಾ ಅಡಿಕೆ ತೋಟದಲ್ಲಿ ಕೂತು ಈ ದಿನದ ಊಟವನ್ನು ಪ್ರಸಾದದ ರೂಪದಲ್ಲಿ ಸ್ವೀಕಾರ ಮಾಡುತ್ತೇವೆ ಎಂದು ನುಡಿದರು.
ರಾಘವೇಂದ್ರ ಕೋವಿ ಅವರು ನಾವುಗಳು ಶೀಗಿ ಹುಣ್ಣಿಮೆಯನ್ನು ಹಬ್ಬದಂತೆ ಆಚರಿಸುತ್ತೇವೆ ಎಂದರು. ಸ್ವಾಮಿರಾವ್ ಕೋವಿ ಅವರು ರೈತಾಪಿ ವರ್ಗದ ಜೀವಾಳ ಮತ್ತು ಆರಾಧಿಸುವ ಹಬ್ಬವೆಂದರೆ ಶೀಗೆ ಹುಣ್ಣಿಮೆ. ಮಲೆನಾಡಿನ ಕೋವಿ ಮನೆತನದ ರೈತರಿಗಿದು ಹಬ್ಬವೇ ಸರಿ ಎಂದು ಹೇಳಿದರು.
ಎಲ್ಲವನ್ನೂ ಕರುಣಿಸುವ ಭೂಮಿ ತಾಯಿಗೆ ಶೀಗೆ ಹುಣ್ಣಿಮೆ ಇಂದು ಚರಗ ಚೆಲ್ಲುವ (ಬಗೆಬಗೆ ಖಾದ್ಯ) ಮೂಲಕ ಆಕೆಯನ್ನು ಸಂತೃಪ್ತಿ ಪಡಿಸಲಾಯಿತು ಹಾಗೂ ಅಡಿಕೆ ತೋಟದಲ್ಲಿ ಮರದಿಂದ ಮರಕ್ಕೆ ಮಾವಿನ ತೋರಣ ಹಾಗೂ ಬಾಳೆದಿಂಡು ಮತ್ತು ಶಾವಂತಿಗೆ ಹೂವಿನಿಂದ ವಿಶಿಷ್ಟವಾದ ಅಲಂಕಾರ ಮಾಡಲಾಗಿತ್ತು. ವಿವಿಧ ಬಗೆಯ ಖಾದ್ಯವನ್ನು ನೀಡುವ ಮೂಲಕ ಆಕೆಯನ್ನು ಸಂತೃಪ್ತಿ ಪಡಿಸುವ ದಿನವನ್ನು ಹೊಸಗುಂದದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಚಿತ್ರ: ವರದಿ:
ತೀರ್ಥಹಳ್ಳಿ ಅನಂತ ಕಲ್ಲಾಪುರ